ಬೆಕ್ಕಿನ ಅಹಂಕಾರ

ಛಾಯಾಚಿತ್ರಣ: ಅಂಕಿತ 

ಕಥೆ: ಶ್ರೀನಾಥ್ ಹರದೂರ ಚಿದಂಬರ 

ಒಂದು ಊರಲ್ಲಿ ಬಹಳ  ಸುಂದರವಾದ ಬೆಕ್ಕಿತ್ತು.  ಅದರ ಸೌಂದರ್ಯಕ್ಕೆ ಮಾರು ಹೋಗಿ ಎಲ್ಲರು ಅದನ್ನು ಮುದ್ದು ಮಾಡಿ ಅದಕ್ಕೆ ಬಹಳ ಪ್ರೀತಿ ತೋರಿಸುತ್ತಿದ್ದರು. ಇದರಿಂದ ಬೆಕ್ಕಿನ ಮನಸ್ಸಿನಲ್ಲಿ ತನ್ನ ಬಿಟ್ಟರೆ ಯಾರು ಇಲ್ಲ ಅನ್ನುವ ಅಹಂಕಾರ ನಿಧಾನವಾಗಿ ಬೆಳೆಯತೊಡಗಿತು. ಊರಿನ ಬೇರೆ ಬೆಕ್ಕುಗಳನ್ನೆಲ್ಲ ಅದು ತಿರಸ್ಕಾರದಿಂದ ನೋಡತೊಡಗಿತು. ತಾನು ಹೇಳಿದ್ದೆ ಸರಿ ತಾನು ಮಾಡಿದ್ದೆ ಸರಿ ಎನ್ನುವ ಅಹಂಕಾರ ತಲೆಗೇರಿತು. ಬೇರೆ ಬೆಕ್ಕುಗಳು ಏನೇ ಹೇಳಿದರು ಅವುಗಳ ಮಾತಿಗೆ ಬೆಲೆ ಕೊಡುತ್ತಿರಲಿಲ್ಲ.  

ಒಂದು ದಿನ ಅದನ್ನು ಸಾಕಿದ ಮನೆಯವರು ಊರಿಗೆ ಹೋದ ಕಾರಣ ಅದಕ್ಕೆ ಊಟ ಸಿಕ್ಕಿರಲಿಲ್ಲ.  ಅದಕ್ಕೆ ತುಂಬ ಹಸಿವಾಗಿತ್ತು.    ಹಸಿವು ಜಾಸ್ತಿ ಆಗಿ ಬೆಕ್ಕು ಆಹಾರ ಹುಡುಕುತ್ತ  ಹೊರಟಿತು.  ಕಷ್ಟ ಪಡುವುದೇ ಮರೆತು ಹೋಗಿದ್ದರಿಂದ ತುಂಬಾ ಹಸಿವಾಗಿ ಕಣ್ಣು ಮಂಜು ಕವಿದ ಹಾಗೆ ಅನಿಸುತ್ತಿತ್ತು ಅದಕ್ಕೆ.  ಆಹಾರ  ಹುಡುಕುತ್ತ  ಊರಿನಿಂದ ಸ್ವಲ್ಪ ದೂರಕ್ಕೆ ಹೋಯಿತು. ಅದು ಊರಿನಿಂದ  ಹೊರಗೆ ಹೋಗುವುದನ್ನು ನೋಡಿದ  ಕೆಲವು ಬೆಕ್ಕುಗಳು ಅದಕ್ಕೆ ಆ ಕಡೆ ಹೋಗಬೇಡ ಅಲ್ಲಿ ಅಪಾಯವಿದೆ ಅಂತ ಹೇಳಿದವು.  ಆದರೆ ಈ ಬೆಕ್ಕು ಅಹಂಕಾರದಿಂದ  ಅವುಗಳ ಮಾತನ್ನು ತಿರಸ್ಕರಿಸಿ  ಮುಂದೆ ಹೋಯಿತು.  ಸ್ವಲ್ಪ ದೂರ ಹೋದಾಗ  ಅದಕ್ಕೆ ಒಂದು ಸಣ್ಣ ಇಲಿ ಏನನ್ನೋ ಹುಡುಕುತ್ತ  ಬರುವುದು ಕಾಣಿಸಿತು. ಹಸಿದ ಬೆಕ್ಕಿಗೆ ಮೃಷ್ಟಾನ್ನ ಭೋಜನ ನೋಡಿದ  ಹಾಗೆ ಆಯಿತು. ಹೇಗಾದರೂ ಸರಿ ಅದನ್ನು ಹಿಡಿದು ತಿನ್ನಲೇ ಬೇಕು ಅಂದುಕೊಂಡು, ಅದಕ್ಕೆ ಕಾಣದ ಹಾಗೆ ಮರೆಯಲ್ಲಿ ಹೊಂಚು ಹಾಕಿ ಕಾಯತೊಡಗಿತು. ಇದರ ಪರಿವಿಲ್ಲದೆ ಇಲಿ ಬೆಕ್ಕಿನ  ಹತ್ತಿರವೇ ಬರತೊಡಗಿತು. ಬೆಕ್ಕಿಗೆ ರೊಟ್ಟಿ ಜಾರಿ ತುಪ್ಪದಲ್ಲಿ ಬಿದ್ದಂತೆ ಅನಿಸಿತು. 

ಇನ್ನೇನು ಬೆಕ್ಕು ಇಲಿಯ ಮೇಲೆ ಎರಗಬೇಕು ಅನ್ನುವಷ್ಟರಲ್ಲಿ, ಅದರ ಮೇಲೆ ಯಾರೋ ಬಿದ್ದಂತಾಗಿ, ತಿರುಗಿ  ನೋಡುವಷ್ಟರಲ್ಲಿ ಒಂದು ನಾಯಿ ಅದನ್ನು ಕಚ್ಚಿ ಎಳೆದುಕೊಂಡು ಹೊರಟೇಬಿಟ್ಟಿತು. ಉಳಿದ ಬೆಕ್ಕುಗಳು ಅದನ್ನು ನಾಯಿ ಕಚ್ಚಿಕೊಂಡು ಹೋಗುವುದನ್ನು ನೋಡುತ್ತಾ ಸುಮ್ಮನೆ ದೂರದಲ್ಲಿ ನಿಂತಿದ್ದವು. ಬೆಕ್ಕು ತನ್ನ ಅಹಂಕಾರದಿಂದ ಅವುಗಳು ಹೇಳಿದ ಮಾತನ್ನು  ಕೇಳದೆ, ಅಲ್ಲಿದ್ದ ಅಪಾಯವನ್ನು ಗ್ರಹಿಸದೆ ತನ್ನ ಪ್ರಾಣವನ್ನು ಬಿಟ್ಟಿತ್ತು. 

ಅಹಂಕಾರವು  ಕಣ್ಣು ಮತ್ತು ಕಿವಿ ಎರಡನ್ನು ಮುಚ್ಚಿ ಹಾಕುತ್ತದೆ. ಬೇರೆಯವರು ಹೇಳಿದ ಬುದ್ದಿಮಾತು ಕೂಡ ಪಥ್ಯವಾಗುವುದಿಲ್ಲ. ತನ್ನವರು ಯಾರು, ತನ್ನ ಶತ್ರುಗಳು ಯಾರು ಎಂಬುವುದನ್ನ ಮರೆಮಾಚಿಸುತ್ತದೆ. 

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s