ಜನರ ಹತ್ತಿರ ದುಡ್ಡು ಇಸಿದುಕೊಂಡು ಅವರಿಗೆ ವಾಪಸು ಕೊಡದೆ ಮೋಸ ಮಾಡುವುದು ಅವನ ವೃತ್ತಿಯಾಗಿತ್ತು. ಆದರೂ ಕೆಲವೊಮ್ಮೆ ದುಡ್ಡು ಕೊಟ್ಟವರ ಹತ್ತಿರ ಸಿಕ್ಕಿಬಿದ್ದು ಒದೆ ತಿನ್ನುತ್ತಿದ್ದ. ಯಾವಾಗ ಸಿಕ್ಕಿ ಬೀಳುವುದು, ಒದೆ ತಿನ್ನುವುದು ಜಾಸ್ತಿಯಾಯಿತೋ , ಇದರಿಂದ ಹೇಗೆ ಪಾರು ಆಗುವುದು ಅಂತ ಯೋಚನೆ ಮಾಡಲು ಶುರು ಮಾಡಿದ. ದುಡ್ಡನ್ನು ಜನರಿಂದ ಪಡೆಯಬೇಕು, ಆದರೆ ಅವರಿಗೆ ಇವನು ಯಾರು ಅಂತ ಗೊತ್ತಾಗಬಾರದು, ಅವರು ವಾಪಸು ದುಡ್ಡು ಸಹ ಕೇಳಬಾರದು, ಆ ರೀತಿಯಾಗಿ ದುಡ್ಡು ಮಾಡುವ ಉಪಾಯ ಹುಡುಕಿದ. ಆ ಉಪಾಯವನ್ನು ಕಾರ್ಯಗತಗೊಳಿಸಿದ ಕೂಡ. ಒಂದು ವಾರದ ನಂತರ ಅವನು ಕೊಟ್ಟ ಅಡ್ರೆಸ್ ಗೆ ಮನಿ ಆರ್ಡ ಬರಲಾರಂಭಿಸಿತು. ಅನೇಕ ಜನ ೧೦೦ ರೂಪಾಯಿಯ ಮನಿ ಆರ್ಡ ಮಾಡಿದ್ದರು. ಒಟ್ಟು ಸುಮಾರು ೧೦ ಸಾವಿರದಷ್ಟು ದುಡ್ಡು ಅವನಿಗೆ ಮನಿ ಆರ್ಡ ರೂಪದಲ್ಲಿ ಬಂದಿತ್ತು. ಆ ದುಡ್ಡನ್ನೆಲ್ಲ ತೆಗೆದುಕೊಂಡು ಅವನಿದ್ದ ಜಾಗದಿಂದ ಬೇರೆ ಕಡೆಗೆ ಪರಾರಿ ಆದ.
ಅವನ ಉಪಾಯ ಏನಾಗಿತ್ತು ಅಂದರೆ, ಪತ್ರಿಕೆಯಲ್ಲಿ ಕೇಂದ್ರ ಸರಕಾರದ ಒಂದು ಸಂಸ್ಥೆಯಲ್ಲಿ ಕೆಲಸ ಕಾಲಿ ಇದೆ, ನಿಮ್ಮ ಬಯೋ ಡೇಟಾ ಮತ್ತು ಅಪ್ಲಿಕೇಶನ್ ಫೀ ಅಂತ ೧೦೦ ರೂಪಾಯಿ ಮನಿ ಆರ್ಡ ಮಾಡಿ, ನಿಮ್ಮ ಕೆಲಸದ ಅನುಭವವು ನಮ್ಮಲ್ಲಿ ಕಾಲಿ ಇರುವ ಕೆಲಸಕ್ಕೆ ಹೊಂದಿಕೆ ಆದರೆ ಸಂದರ್ಶನಕ್ಕೆ ಕರೆಯುತ್ತೇವೆ ಎಂದು ಜಾಹಿರಾತು ಕೊಟ್ಟಿದ್ದ. ಅವನ ಈ ಮೋಸದ ಜಾಲಕ್ಕೆ ಸಿಕ್ಕವರೆಲ್ಲ ದುಡ್ಡು ಕಳಿಸಿದ್ದರು. ಅವರ ಅವಶ್ಯಕತೆಯನ್ನು ತನ್ನ ಸ್ವಾರ್ಥಕ್ಕೆ ಬಳಸಿಕೊಂಡು ಮೋಸ ಮಾಡಿದ್ದ.
ನಮ್ಮಲ್ಲಿ ಅನೇಕರು ಸರಕಾರೀ ಉದ್ಯೋಗದ ಆಸೆಗೆ ಬಿದ್ದು, ಇಂತಹ ಮೋಸದ ಜಾಲಕ್ಕೆ ಸಿಕ್ಕು, ಹಣ ಕಳೆದುಕೊಳ್ಳುತ್ತಾರೆ. ಸಂದರ್ಶನ ಬರದಿದ್ದರೂ ಯಾರು ವಿಚಾರಿಸಲು ಹೋಗುವುದಿಲ್ಲ, ಯಾಕೆಂದರೆ ಅವರು ಕೊಟ್ಟಿದ್ದು ನೂರು ರೂಪಾಯಿ ಹಾಗು ನಮ್ಮ ಬಯೋ ಡೇಟಾ ಹೊಂದಿಕೆ ಆಗಿಲ್ಲ ಅನಿಸುತ್ತೆ ಅಂತ ಅಂದುಕೊಂಡು ಸುಮ್ಮನಾಗಿಬಿಡುತ್ತಾರೆ. ಸ್ವಲ್ಪ ಯೋಚನೆ ಮಾಡಿ ಯಾವತ್ತಿಗೂ ಯಾವ ಸರಕಾರೀ ಸಂಸ್ಥೆಗಳು ಈ ರೀತಿಯಾಗಿ ಜಾಹಿರಾತು ಕೊಡುವುದಿಲ್ಲ.
ಈ ರೀತಿಯಾಗಿ ಮೋಸ ಮಾಡುವುದಕ್ಕೆ ಇದು ಕೇವಲ ಒಂದು ಉದಾಹರಣೆ ಅಷ್ಟೇ, ಈ ರೀತಿಯಾಗಿ ಅನೇಕ ಮೋಸದ ಜಾಲಗಳಿವೆ. ಹತ್ತು ದಿನದಲ್ಲಿ, ತೂಕ ಕಮ್ಮಿ ಅಥವಾ ಜಾಸ್ತಿ ಮಾಡುತ್ತೇವೆ, ತಲೆ ಕೂದಲು ಜಾಸ್ತಿ ಮಾಡುತ್ತೇವೆ, ಗುಪ್ತ ರೋಗಕ್ಕೆ ಔಷಧಿ ಕೊಡುತ್ತೇವೆ, ಸಂಗಾತಿ ವಶೀಕರಣ, ನಿಮ್ಮ ಎಲ್ಲ ಸಮಸ್ಯೆಗಳಿಗೆ ಪರಿಹಾರ…. ಈ ರೀತಿಯಾಗಿ ಅನೇಕ ಜಾಹಿರಾತುಗಳನ್ನು ನೋಡಿರುತ್ತೀರಿ. ಕೆಲಸ, ದುಡ್ಡು, ಸಂಸಾರ, ವ್ಯವಹಾರ, ಆರೋಗ್ಯ… ಹೀಗೆ ಯಾವುದೇ ವಿಷ್ಯದಲ್ಲಿ ಸಮಸ್ಯೆ ಇದ್ದಾಗ ಇಂತಹ ಜಾಲಕ್ಕೆ ಬಹಳ ಬೇಗ ಬಲಿಯಾಗುವ ಅವಕಾಶ ಜಾಸ್ತಿ ಇರುತ್ತೆ.
ಆದಷ್ಟು ಇಂತಹ ಜಾಹೀರಾತುಗಳಿಂದ ದೂರವಿರಿ. ಮೋಸದ ಜಾಲಕ್ಕೆ ಸಿಕ್ಕಿ ಕೊಳ್ಳಬೇಡಿ.
– ಶ್ರೀನಾಥ್ ಹರದೂರ ಚಿದಂಬರ