ಹಾಲಿನ ಜಿಡ್ಡು

ನೆದರ್ಲ್ಯಾಂಡ್ ಗೆ ಬಂದ ಮೇಲೆ ಇಲ್ಲಿ ಮನೆ ಕೆಲಸದವರು ಸಿಗದ ಕಾರಣ, ಮನೆ ಕೆಲಸಗಳನ್ನು ನಮ್ಮ ನಮ್ಮಲ್ಲಿಯೇ  ಹಂಚಿಕೊಳ್ಳುವ ನಿರ್ಧಾರ ಮಾಡಿದ್ವಿ.  ಮನೆ ಕೆಲಸದಲ್ಲಿ ನನ್ನ ಪಾಲಿಗೆ ಬಂದ ಕೆಲಸವೆಂದರೆ  ರಾತ್ರಿ ಊಟ ಆದ ಮೇಲೆ  ಪಾತ್ರೆ ತೊಳೆಯವುದು. ಮೊದ  ಮೊದಲು  ಜೋಶಲ್ಲಿ  ಡಿಶ್ ವಾಷರ್ ಬೇಡ ಕಣೆ, ಚೆನ್ನಾಗಿ ಆಗಲ್ಲ, ಕೈಯಲ್ಲಿ ತೊಳಿತೀನಿ ಅಂದೇ. ಒಂದು ವಾರ ಕಳೆಯುತ್ತಿದ್ದಂತೆ ನಿಧಾನವಾಗಿ ಡಿಶ್ ವಾಷರ್ ಗೆ ಹಾಕಲು ಶುರು ಮಾಡಿದೆ.  ಒಂದೇ ವಾರಕ್ಕೆ ಕೈಯಲ್ಲಿ ಪಾತ್ರ ತೊಳೆಯುವ  ಜೋಶ್ ಹೊರಟುಹೋಗಿತ್ತು.  ಆದರೆ ಎರಡು ಪಾತ್ರೆಗಳು  ಮಾತ್ರ ಡಿಶ್ ವಾಷರ್ ಗೆ ಹಾಕಲು ಆಗುತ್ತಿರಲಿಲ್ಲ. ಒಂದು ಕುಕ್ಕರ್ ಇನ್ನೊಂದು ಹಾಲಿನ ಪಾತ್ರೆ.  ಹತ್ತು ತಟ್ಟೆಗಳನ್ನು ತೊಳೆದು ಬಿಡಬಹುದು ಆದರೆ ಒಂದು ಜಿಗುಟು ಹಿಡಿದ ಒಂದು ಹಾಲಿನ ಪಾತ್ರೆ ತೊಳೆಯುವುದರಲ್ಲಿ ಜೀವನ ಸಾಕಪ್ಪ ಅನ್ನುವ ಹಾಗೆ ಅನ್ನಿಸುತ್ತದೆ. ಇತ್ತೀಚಿಗೆ  ನನ್ನ ಹೆಂಡತಿಯ ಪಾಲಿಗೆ ಹಾಲಿನ ಪಾತ್ರೆ ಬರುವ ಹಾಗೆ ದಾರಿ ಕಂಡುಕೊಂಡಿದ್ದೇನೆ. ಆದರೂ ಕೆಲವೊಮ್ಮೆ ನನ್ನ ಸರದಿ ಬರುತ್ತಿರುತ್ತೆ. 

ಪ್ರತಿ ಸಾರಿ ನಾನು ಹಾಲಿನ ಪಾತ್ರೆ ತೊಳೆಯುವಾಗ ನೆನಪಾಗುತ್ತಿದ್ದುದು ಬೈಂದೂರಿನ ನನ್ನ ಚಿಕ್ಕಮ್ಮನ ಮನೆ. ಬೇಸಿಗೆ ರಜಾ ಇರಲಿ, ದಸರಾ ರಜಾ  ಇರಲಿ,  ನಾನು ಬೈಂದೂರಿಗೆ ರಜಾ ಕಳೆಯಲು ಹೋಗುತ್ತಿದ್ದೆ.  ಬೈಂದೂರಿನಲ್ಲಿ  ನನ್ನ ಚಿಕ್ಕಪ್ಪ ಹಾಲಿನ ವ್ಯಾಪಾರ  ಮಾಡುತ್ತಿದ್ದರು. ಬೆಳಗ್ಗಿನ ಜಾವಕ್ಕೆ ಸುತ್ತಮುತ್ತಲಿನ ಜನರು ತಮ್ಮ ಮನೆಯಲ್ಲಿ ಕರೆದ ಹಸು ಮತ್ತು ಎಮ್ಮೆಯ ಹಾಲನ್ನು ಕರೆದು ಇವರಿಗೆ ತಂದು ಕೊಡುತ್ತಿದ್ದರು.  ನಮ್ಮ ಚಿಕ್ಕಪ್ಪ  ಅವರು ಕೊಡುವ  ಹಾಲಿನ ನೀರಿನಾಂಶವನ್ನು ಹೈಡ್ರೋಮೀಟರ್ ಹಾಕಿ ಪತ್ತೆ ಮಾಡಿ ಹಾಲನ್ನು ತೆಗೆದುಕೊಳ್ಳುತ್ತಿದ್ದರು.  ನನಗೆ ಅದು ಹೈಡ್ರೋಮೀಟರ್ ಅಂತ ಗೊತ್ತಾಗಿದ್ದು ನಾನು ಲ್ಯಾಬೋರೇಟೋರಿಯಲ್ಲಿ ಕೆಲಸ ಶುರು ಮಾಡಿದ ಮೇಲೆ ಅಂದರೆ  ಸರಿ ಸುಮಾರು ೧೫ ವರುಷ ಕಳೆದ ಮೇಲೆ ಬಿಡಿ. ಅವರು ಹೈಡ್ರೋಮೀಟರ್ ಅನ್ನು ಹಾಲಿನಲ್ಲಿ ಮುಳುಗಿಸಿ ಎಷ್ಟು ನೀರನ್ನು  ಹಾಲಿನಲ್ಲಿ ಬೆರೆಸಿದ್ದಾರೆ ಅಂತ ಹೇಗೆ ಪತ್ತೆ ಮಾಡುತ್ತಾರೆ ಅಂತ ಬಾಯಿ ಬಿಟ್ಟುಕೊಂಡು ನೋಡುತ್ತಾ ಅವರ ಪಕ್ಕದಲ್ಲಿ ನಿಲ್ಲುತ್ತಿದ್ದೆ.  ಬಂದ ಹಾಲನ್ನು ಒಂದು ಲೀಟರ್, ಎರಡು ಲೀಟರ್, ಐದು  ಮತ್ತು ಹತ್ತು ಲೀಟರ್.. ಹೀಗೆ ವಿವಿಧ ಹಾಲಿನ ಕ್ಯಾನ್ಗಳಲ್ಲಿ ತುಂಬಿಸಿ ಮನೆ, ಹೋಟೆಲ್ಗಳಿಗೆ ಪೂರೈಕೆ ಮಾಡುತ್ತಿದ್ದರು. ಅವರು ಹಾಲಿನ ಕ್ಯಾನ್ಗಳನ್ನು ತಮ್ಮ ಸೈಕಲ್ಗೆ ಕಟ್ಟಿಕೊಂಡು ಸೈಕಲ್ ತುಳಿದುಕೊಂಡು ಹಾಲು ಪೂರೈಕೆ ಮಾಡುತ್ತಿದ್ದರು. ಎಷ್ಟು ಕ್ಯಾನ್ಗಳು ಅವರ ಸೈಕಲ್ ಮೇಲೆ ಇರುತ್ತಿತ್ತು  ಅಂದರೆ ಅವರ ಸೈಕಲ್ ಕೂಡ ಕಾಣಿಸುತ್ತಿರಲಿಲ್ಲ,  ಕ್ಯಾನ್ಗಳಿಂದ ಸೈಕಲ್ ಪೂರ್ತಿಯಾಗಿ  ಮುಚ್ಚಿ ಹೋಗಿರುತ್ತಿತ್ತು. ಅಷ್ಟು ಭಾರವನ್ನು ಅವರು ಹೊತ್ತು ಸೈಕಲ್ ತುಳಿದುಕೊಂಡು  ಹೋಗುತ್ತಿದ್ದರು. ನಾವು ದೊಡ್ಡವರಾದ ಮೇಲೆ ೧೦ ಕೆಜಿ ಅಕ್ಕಿಯನ್ನು  ಸೈಕಲ್ ಮೇಲೆ ತರಲು ಒದ್ದಾಡುವಾಗ,   ೧೦೦ ಲೀಟರ್ ಗಳಿಗಿಂತ ಜಾಸ್ತಿ ಹಾಲನ್ನು ಹೊತ್ತೊಯುತ್ತಿದ್ದ ಚಿಕ್ಕಪ್ಪನನ್ನು  ನೆನೆಸಿಕೊಂಡು ನಾಚಿಕೆ ಕೂಡ ಆಗಿದೆ. 

ಅವರು ಹಾಲು ಪೂರೈಕೆ ಮಾಡಿ ಬಂದು, ಕಾಲಿಯಾದ ಕ್ಯಾನ್ಗಳನ್ನು ಅವರ ಮನೆಯ ಭಾವಿ ಕಟ್ಟೆ ಮೇಲೆ ಹಾಕುತ್ತಿದ್ದರು. ಅಷ್ಟನ್ನೂ ತೊಳೆದು ಒಣಗಿಸಿ ಮಾರನೇ ದಿವಸಕ್ಕೆ ಕ್ಯಾನ್ಗಳನ್ನು ರೆಡಿ ಮಾಡಿ ಇಡಬೇಕಿತ್ತು. ಅಷ್ಟು ಕ್ಯಾನ್ಗಳನ್ನು ನಮ್ಮ ಚಿಕ್ಕಮ್ಮ ಒಬ್ಬರೇ ತೊಳೆದು ಹಾಕುತ್ತಿದ್ದರು. ಕ್ಯಾನ್ ಒಳಗೆ ಸೋಪಿನ ಪೌಡರ್ ಹಾಕಿ ನೆನೆ ಹಾಕಲು ಸ್ವಲ್ಪ ಹೊತ್ತು ಬಿಡುತ್ತಿದ್ದರು. ಅಷ್ಟರಲ್ಲಿ ಮನೆ ಕೆಲಸ ಮುಗಿಸಿಕೊಂಡು ಬಿಡುತ್ತಿದ್ದರು. ನಂತರ ಅಷ್ಟು ಕ್ಯಾನ್ಗಳನ್ನು ಒಂದೊಂದಾಗಿ ಬ್ರಷ್ ಹಾಕಿ ತೊಳೆದು ಒಣಗಲು ಬಿಡುತ್ತಿದ್ದರು. ಸರಿ ಸುಮಾರು ೨ ಗಂಟೆಗಳ ಮೇಲೆ ಸಮಯ ಬೇಕಾಗುತ್ತಿತ್ತು. ಇವತ್ತು ಕೇವಲ ಒಂದು ಹಾಲಿನ ಪಾತ್ರೆ ತೊಳೆಯಲು ನಾನು ಒದ್ದಾಡುವಾಗ, ಅವರು ದಿನಕ್ಕೆ ನೂರಾರು ಕ್ಯಾನ್ಗಳನ್ನು ಒಬ್ಬರೇ ತೊಳೆದು ಹಾಕುತ್ತಿದ್ದನ್ನು ನೆನಸಿಕೊಂಡು ಅಬ್ಬಾ ಅನಿಸುತ್ತೆ. ಆಗ ನಮಗೆ ಅವರು ಅಷ್ಟು ಕ್ಯಾನ್ಗಳನ್ನು  ತೊಳೆದು ಹಾಕುವಾಗ ಏನು ಅನಿಸುತ್ತಿರಲಿಲ್ಲ. ಈಗ ಅವರು ಎಷ್ಟು  ಕಷ್ಟ ಪಟ್ಟು  ಅಷ್ಟು ಜಿಡ್ಡು ಹಿಡಿದ ಕ್ಯಾನ್ಗಳನ್ನು ತೊಳೆದು ಹಾಕುತ್ತಿದ್ದರು ಅನ್ನುವ ಅನುಭವ  ಆಗುತ್ತಿದೆ.  ಇಷ್ಟೆಲ್ಲ  ಆಧುನಿಕ ವ್ಯವಸ್ಥೆ ಇದ್ದು ಮನೆ ಕೆಲಸ ಮಾಡಲು ಏದುಸಿರು ಬಿಡುವ ನಾವು, ನಮ್ಮ ಹಿರಿಯರು ಮಾಡುತ್ತಿದ್ದ ಕಾಲು ಭಾಗ ಕೂಡ ಮಾಡಲು ಆಗುವುದಿಲ್ಲ ಅಂದರೆ ಅದು ಕೇವಲ ನಮ್ಮ ಮನಸ್ಥಿತಿ ಅಷ್ಟೇ,  ಬೇರೆ ಏನಲ್ಲ. 

ನಮ್ಮ ಮಕ್ಕಳು ಸುಖವಾಗಿರಲಿ ಅಂದುಕೊಂಡು ಮನೆ ಕೆಲಸದಲ್ಲಿ ಅವರನ್ನು ನಾವು ಭಾಗಿಧಾರಿಯನ್ನಾಗಿ ಮಾಡದಿದ್ದರೆ, ಅವರು ಈ ಕೆಲಸಗಳನ್ನೆಲ್ಲ ತಮ್ಮದಲ್ಲ ಅಂದುಕೊಳ್ಳದೆ ಇನ್ನೇನು ಮಾಡುತ್ತಾರೆ. ಹೆಚ್ಚಲ್ಲದಿದ್ದರು ಕೊಂಚವಾದರೂ ಗಂಡು ಮಕ್ಕಳಾಗಲಿ ಅಥವಾ  ಹೆಣ್ಣು ಮಕ್ಕಳಾಗಲಿ, ಅವರಿಗೆ  ನೀವು ಮಾಡುವ ಮನೆ ಕೆಲಸದಲ್ಲಿ ಕೈ ಜೋಡಿಸಲು ತಿಳಿಹೇಳಿ. ಮನೆ ಕೆಲಸ ಹೆಣ್ಣು ಮಕ್ಕಳಿಗೆ ಮಾತ್ರ ಸೀಮಿತ ಅಲ್ಲ,  ಅದೊಂದು ಕೌಶಲ್ಯ  ಹಾಗು  ಎಲ್ಲರು ಅದನ್ನು ಕಲಿಯಬೇಕು  ಎಂಬುದನ್ನು  ಮಕ್ಕಳಿಗೆ ಮನವರಿಕೆ ಮಾಡಿಕೊಡಿ. 

ಅವಾಗವಾಗ  ಹಾಲಿನ ಪಾತ್ರೆ ತೊಳೆಯವ ಸರದಿ ಬಂದು ಅದರ ಜಿಡ್ಡು ತೆಗೆಯುವಾಗೆಲ್ಲ  ಚಿಕ್ಕಮ್ಮ ಹಾಗು ಚಿಕ್ಕಪ್ಪ ನೆನಪಾಗುತ್ತಾರೆ. 

– ಶ್ರೀನಾಥ್ ಹರದೂರ ಚಿದಂಬರ  

4 thoughts on “ಹಾಲಿನ ಜಿಡ್ಡು

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s