ಅಂತ್ಯಕ್ರಿಯೆ

ಅಂತ್ಯಕ್ರಿಯೆ

ರಾಜುರವರು  ಆಸ್ಪತ್ರೆಯಲ್ಲಿ ಹೃದಯಾಘಾತದಿಂದ  ತೀರಿಕೊಂಡಿದ್ದರು. ರಾಜುರವರು  ತುಂಬ ಹೆಸರು ಮಾಡಿದಂತ ವ್ಯಕ್ತಿ. ಸದಾ ಬೇರೆಯವರ ಸಹಾಯಕ್ಕೆ ಮುಂದೆ ನಿಲ್ಲುತ್ತಿದ್ದರು. ಯಾರಾದರೂ ಬಡವರು ತೀರಿಕೊಂಡರೆ ಅವರ ಅಂತ್ಯಕ್ರಿಯೆಗೆ ಎಲ್ಲ ರೀತಿಯ ಸಹಾಯ ಮಾಡಿ ಬರುವಂತ ಸಧ್ಗುಣಿ ಆಗಿದ್ದರು.  ಅನಾಥರಿಗೆ ಆಶ್ರಯ, ಬಡವರ  ಓದು, ಮದುವೆ, ಕೆಲಸ ಹೀಗೆ ಅನೇಕ ರೀತಿಯಲ್ಲಿ  ಸಹಾಯ ಮಾಡುತ್ತಿದ್ದಂತ ವ್ಯಕ್ತಿ ಅವರಾಗಿದ್ದರು. ಮನೆಯಲ್ಲಿ ಸಹಿತ ಅವರನ್ನು ಕಂಡರೆ ಎಲ್ಲರಿಗು ಬಹಳ ಗೌರವ ಮತ್ತು ಮಕ್ಕಳಿಗೆ  ಸ್ವಲ್ಪ ಭಯ ಕೂಡ ಇತ್ತು. 

ವಿಷಯ ತಿಳಿದ ಕೂಡಲೇ  ರಾಜು ಅವರ   ಭಾವಂದಿರು, ಅಣ್ಣ ತಮ್ಮಂದಿರು ಎಲ್ಲರು ಆಸ್ಪತ್ರೆಗೆ ಬಂದರು.  ಎಲ್ಲರು ಬಂದವರೇ ಬಾಡಿ ಎಲ್ಲಿದೆ ಅಂತ ಕೇಳಿದರು.   ರಾಜು ಅವರು  ಸತ್ತು ಇನ್ನು ಗಂಟೆಗಳಾಗಿಲ್ಲ ಆಗಲೇ   ಬಾಡಿ ಅಂತ ಕರೆಯಲು ಶುರು ಮಾಡಿದ್ದನ್ನು ಕೇಳಿ ಹೆಂಡತಿಯ ಮನಸ್ಸಿಗೆ ಬಹಳ ನೋವಾಯಿತು.    ಬಂದವರು  ದೇಹದ ಹತ್ತಿರವೂ ಬರದೇ ದೂರದಿಂದಲೇ ನೋಡಿ ಹೊರಗಡೆ ಹೋದರು. ಹೊರಗಡೆ ಹೋದ  ಭಾವಂದಿರು ಮತ್ತು ಅಣ್ಣ ತಮ್ಮಂದಿರು  ಮುಂದೆ ಏನು ಮಾಡಬೇಕು, ಎಲ್ಲಿ ಅಂತ್ಯಕ್ರಿಯೆ ಮಾಡಬೇಕು, ಯಾರು ಏನು ಜವಾಬ್ಧಾರಿ ತೆಗೆದುಕೊಳ್ಳಬೇಕು ಅಂತ ಮಾತನಾಡತೊಡಗಿದ್ದರು. 

ಭಾವಂದಿರು ನಮ್ಮ ಊರಲ್ಲಿ ಅಂತ್ಯಕ್ರಿಯೆ ಆಗಬೇಕು ಅಂತ ಅಂದರೆ,  ಅಣ್ಣ ತಮ್ಮಂದಿರು ನಮ್ಮ ಊರಲ್ಲಿ ಅಂತ್ಯಕ್ರಿಯೆ ಆಗಬೇಕು ಅಂತ ಹಠ ಹಿಡಿದರು. ಮಕ್ಕಳು ಮೂಕ ಪ್ರೇಕ್ಷಕರಾಗಿ ನಿಂತರು. ಮಾತುಗಳು  ವಾಗ್ವಾದವಾಗಿ ತಿರುಗಿತು. ಅಷ್ಟರಲ್ಲಿ ಊರಿನ ಕೆಲವು ಹಿರಿಯರು ಬಂದು ಸೇರಿದರು. ಅಣ್ಣ ತಮ್ಮಂದಿರು  ತಮಗೆ ಕೆಲವರು ಬೆಂಬಲ ಕೊಡುತ್ತಾರೆ  ಅಂತ  ಅವರನ್ನು ಮಾತನಾಡಲು ಮುಂದೆ ಬಿಟ್ಟರು. ಭಾವಂದಿರು ಸಹಿತ ನಮಗೆ ಬೆಂಬಲ ಸಿಕ್ಕಿತು ಅಂತ  ಕೆಲವರನ್ನು ಮುಂದೆ ಮಾತನಾಡಲು ಬಿಟ್ಟರು.  ನೋಡ ನೋಡುತ್ತಿದ್ದಂತೆ ಎರಡು ಪಂಗಡಗಳಾಗಿ ಹೋಯಿತು. ಎರಡು ಪಂಗಡಗಳು ತಮ್ಮದೇ ಮಾತು ನಡೆಯಬೇಕು ಎಂಬ ಹಠ ಹಿಡಿದ್ದಿದ್ದರು. ಭಾವಂದಿರ ಕಡೆಯವರು ಮತ್ತು ಅಣ್ಣ ತಮ್ಮಂದಿರ ಕಡೆಯವರು ಪರಸ್ಪರ ಯಾವುದೊ ವಿಷ್ಯಗಳನ್ನು ಎತ್ತಿ ಬೈದಾಡತೊಡಗಿದರು.  ಅಂತ್ಯಕ್ರಿಯೆ ವಿಷಯ ಬದಲಾಗಿ ರಾಜಕೀಯ ಕಣವಾಗಿ ಮಾರ್ಪಾಡಾಗಿತ್ತು. 

ಎರಡು ಪಂಗಡಗಳ ಹಿರಿಯರ ಕಡೆಯವರು ಬಂದು ಸೇರತೊಡಗಿದರು.  ನೂರಾರು ಜನ ಸೇರಿಕೊಂಡರು.  ಎರಡು ಪಂಗಡಗಳ ವಾಗ್ವಾದ ಜಗಳಕ್ಕೆ ತಿರುಗಿ  ಎಲ್ಲರು ಹೊಡೆದಾಡಲು ಶುರು ಮಾಡಿಕೊಂಡರು . ಆಸ್ಫತ್ರೆಯವರು ಪೊಲೀಸ್ನವರನ್ನು ಸಹಾಯಕ್ಕೆ ಕರೆದರು. ಪೊಲೀಸ್ ಬಂದು ನಿಯಂತ್ರಣ ಮಾಡಲು ಸಾಧ್ಯವಾಗದೆ ಲಾಠಿ ಚಾರ್ಜ್ ಮಾಡಿದರು. ಅನೇಕರು ಗಾಯ ಗೊಂಡು ಅದೇ ಆಸ್ಪತ್ರೆಗೆ ಅಡ್ಮಿಟ್ ಆದರು. ಊರಿನಲ್ಲಿ ಕರ್ಫ್ಯೂ ವಿಧಿಸಲಾಯ್ತು. 

ರಾಜುವಿನ ಮನೆಯವರು ಏನು ಮಾಡಲಾಗದೆ ನೋಡುತ್ತಾ ನಿಂತರು. ಆಸ್ಪತ್ರೆಯ ಒಂದು ಮೂಲೆಯಲ್ಲಿ ರಾಜು ಅವರ ದೇಹ ಅನಾಥವಾಗಿ ಟೇಬಲ್ ಮೇಲೆ ಮಲಗಿತ್ತು.  ಯಾವುದೇ ಸ್ವಾರ್ಥವಿಲ್ಲದೆ ಬಡವರಿಗೆ, ಅನಾಥರಿಗೆ  ಸಹಾಯ ಮಾಡುತ್ತಿದ್ದ ರಾಜು ಅವರು ಸತ್ತ ಮೇಲೆ ತಮ್ಮ ಮನೆಯವರ ಸ್ವಾರ್ಥಕ್ಕೆ ಅನಾಥವಾಗಿದ್ದರು.  ಅಂತ್ಯಕ್ರಿಯೆ ಹೇಗೆ ಮತ್ತು ಎಲ್ಲಿ ಮಾಡಬೇಕು ಎಂಬ ವಿಷ್ಯ ದೊಡ್ಡ ಗಲಾಟೆಯಲ್ಲಿ ಅಂತ್ಯವಾಗಿತ್ತು. 

ಅಣ್ಣ ತಮ್ಮಂದಿರು ಊರಿಗೆ ಹೋದರೆ ಹೋಗಿ ಬರುವ ಖರ್ಚು ಜಾಸ್ತಿ ಆಗುತ್ತೆ, ಮಕ್ಕಳಿಗೆ ಶಾಲೆಗೆ ತೊಂದರೆ ಆಗುತ್ತೆ ಅಂತ ಮನಸ್ಸಿನಲ್ಲಿ ಅಂದುಕೊಂಡು ಅಂತ್ಯಕ್ರಿಯೆ ಇಲ್ಲೇ ಆಗಬೇಕು ಅಂತ ಉಪಾಯ ಮಾಡಿದ್ದರು. ಆದರೆ ಅವರು  ಆ ವಿಷಯ ಮುಚ್ಚಿಟ್ಟು ರಾಜು ಅವರು ಇಲ್ಲಿ ಜನಪ್ರಿಯ ವ್ಯಕ್ತಿ ಹಾಗಾಗಿ ಇಲ್ಲೇ ಅಂತ್ಯಕ್ರಿಯೆ ಆಗಬೇಕು ಅಂತ ಹಠ ಮಾಡುವ ನಾಟಕ ಮಾಡಿದ್ದರು.  ಭಾವಂದಿರು ಇಲ್ಲಿ ಅಂತ್ಯಕ್ರಿಯೆ ಮಾಡಿದರೆ ಖರ್ಚು ಜಾಸ್ತಿ ಆಗುತ್ತೆ ಅನ್ನುವ ವಿಷಯ ಮುಚ್ಚಿಟ್ಟು,  ರಾಜು ಅವರ  ಸ್ವಂತ ಊರಲ್ಲಿ ಅಂತ್ಯಕ್ರಿಯೆ ಮಾಡಬೇಕು ಎನ್ನುವ ನಾಟಕ ಮಾಡಿದ್ದರು. ಆದರೆ ಸ್ವಂತ ಮನೆಯವರ ಸ್ವಾರ್ಥಕ್ಕೆ ಮನೆಯೊಳಗೇ ಮೂರನೆಯವರ  ಆಗಮನ ಆಗಿತ್ತು. ವಿಷ್ಯ  ರಾಜಕೀಯಕ್ಕೆ ಬದಲಾಗಿ ಹೊಡೆದಾಡುವ ಮಟ್ಟಕ್ಕೆ ಬಂದು ನಿಂತಿತ್ತು. 

ಅಂತ್ಯಕ್ರಿಯೆಯನ್ನು ಪೊಲೀಸರು ಮಾಡಿ ಮುಗಿಸಿದರು. 

-ಶ್ರೀನಾಥ್ ಹರದೂರ ಚಿದಂಬರ 

 

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s