ಸೂಸೈಡ್ ನೋಟ್

ರಾಜು ಮತ್ತು ಪ್ರಮೋದ ಇಬ್ಬರು ಪ್ರಾಣ ಸ್ನೇಹಿತರು. ಅವರಿಬ್ಬರು  ಚಿಕ್ಕಂದಿನಿಂದಲೂ ಒಂದೇ ಶಾಲೆಯಲ್ಲಿ ಓದಿ,  ಈಗ  ಒಂದೇ ಕಾಲೇಜಿಗೂ ಸಹ  ಕಾಲಿಟ್ಟಿದ್ದರು.  ಕಾಲೇಜಿನಲ್ಲಿ ಶಾಲೆಯಲ್ಲಿದ್ದ ತರಹ ಮೇಷ್ಟ್ರುಗಳ ಕಾಟ ಬೇರೆ  ಇರಲಿಲ್ಲ. ಸ್ವತಂತ್ರ ಹಕ್ಕಿಗಳ ರೀತಿ ಆರಾಮಾಗಿ ಕಾಲೇಜಿಗೆ ಹೋಗಿ ಬಂದು ಮಾಡುತ್ತಿದ್ದರು.  ರಾಜು ಬಹಳ ಜವಾಬ್ಧಾರಿಯುತ  ವ್ಯಕ್ತಿ,  ತನ್ನ ಓದು  ಮತ್ತು ಆಟ  ಬಿಟ್ಟರೆ ಬೇರೆ ವಿಷಯಕ್ಕೆ ತಲೆ ಹಾಕುತ್ತಿರಲಿಲ್ಲ. ಆದರೆ ಪ್ರಮೋದ ಅದಕ್ಕೆ ತದ್ವಿರುದ್ದ ಸ್ವಭಾವ, ವಿಪರೀತ ತಲೆಹರಟೆ, ತಮಾಷೆಯಾ ಸ್ವಭಾವ. ಪ್ರಮೋದ ರಾಜುವಿನ ಮಾತು ಬಿಟ್ಟರೆ ಯಾರ ಮಾತನ್ನ ಕೇಳುತ್ತಿರಲಿಲ್ಲ. ದಿನಗಳು ಸುಂದರವಾಗಿ ಕಳೆಯುತ್ತಾ ಹೋಗುತ್ತಿದ್ದವು. 

ಒಂದು ದಿನ ಪ್ರಮೋದ ಇದ್ದಕ್ಕಿದ್ದಂತೆ ರಾಜುವಿನ ಬಳಿ ಬಂದು ” ನಾನು ಒಂದು ಹುಡುಗಿಯನ್ನು ಪ್ರೀತಿಸುತ್ತ ಇದ್ದೀನಿ, ಕಣೋ” ಅನ್ನುತ್ತಾ ರಾಜುವಿನ ಪಕ್ಕದಲ್ಲಿ ಕುಳಿತ.  ಅದಕ್ಕೆ ರಾಜು ” ನೀನು ಪ್ರೀತಿಸುತ್ತ ಇದ್ದೀಯ ಅದು ಸರಿ, ಅವಳು ನಿನ್ನನ್ನು ಪ್ರೀತಿಸುತ್ತ ಇದ್ದಾಳ? ಅದು ಮೊದಲು ಹೇಳು ” ಅಂದ. ಅದಕ್ಕೆ ಸ್ವಲ್ಪ ಕೋಪ ಬಂದರು, ತಡೆದುಕೊಂಡು  ಪ್ರಮೋದ ” ಇನ್ನು ಕೇಳಿಲ್ಲ, ಆದರೆ ಅವಳು ನನ್ನನ್ನು ಪ್ರೀತಿಸುತ್ತ ಇರೋದು ಗ್ಯಾರಂಟೀ ” ಎಂದನು.  ರಾಜು ನಗಾಡುತ್ತಾ ” ಅದು ಹೇಗೆ” ಅಂತ ಕೇಳಿದ್ದಕ್ಕೆ ಪ್ರಮೋದ ” ನಾನು ನೋಡುವಾಗಲ್ಲ ನನ್ನ ಕಡೆ ನೋಡಿ ನಗಾಡ್ತಾಳೆ ಕಣೋ,  ಆದರೆ ಅದನ್ನು ನೀನು ಕ್ರಶ್, ಇನ್ ಫಾಯ್ಚುಯೇಶನ್  ಅಂತ ಎಲ್ಲ ಹೇಳಬೇಡ, ಅದೆಲ್ಲ ಏನು ಅಲ್ಲ,  ರಿಯಲ್ ಲವ್ ಕಣೋ” ಅಂತ ಹೇಳಿದನು.  ಅದಕ್ಕೆ ರಾಜು ” ಕರ್ಮಕಾಂಡ, ಹಾಳಾಗಿ ಹೋಗು, ನಿನಗೆ ಬುದ್ಧಿ ಯಾರು ಹೇಳುತ್ತಾರೆ, ನಿನ್ನದು ಇದ್ದದ್ದೇ ”  ಎಂದು ಹೇಳುತ್ತಾ ಮನೆ ಕಡೆ ಹೊರಟನು. 

ಒಂದು ವಾರ ಕಳೆದ ಮೇಲೆ, ಪ್ರಮೋದ ತುಂಬ ಶಾಂತವಾಗಿ ಒಂದು ಕೂತಿದ್ದನ್ನು ನೋಡಿ ರಾಜು ಅವನ ಹತ್ತಿರ ಹೋಗಿ ” ಏನಾಯ್ತೋ ಪ್ರಮೋದ, ಇಷ್ಟು  ಶಾಂತವಾಗಿ ಕೂತಿದ್ಯ ” ಅಂತ ಕೇಳಿದನು.  ಪ್ರಮೋದ ರಾಜುವಿಗೆ ” ಅವಳಿಲ್ಲದೆ ನಾನು ಬದುಕುವುದಿಲ್ಲ ಕಣೋ, ಅವಳಿಗೆ ನನ್ನ ಪ್ರೀತಿ ನಾಳೆ ಹೇಳಿಯೇ ಬಿಡುತ್ತೇನೆ, ಅವಳೇನಾದರೂ ಇಲ್ಲ ಅಂದರೆ ನಾನು ಖಂಡಿತ ಬದುಕುವುದಿಲ್ಲ, ಆತ್ಮಹತ್ಯೆ ಮಾಡಿಕೊಳ್ತೀನಿ ನೋಡು, ನಾನು ಎಷ್ಟು ಪ್ರೀತಿ ಮಾಡ್ತೀನಿ ಗೊತ್ತಾ , ನೋಡಿಲ್ಲಿ ” ಅಂತ ತನ್ನ ಕೈಯ ಮೇಲೆ ಅವಳ ಹೆಸರನ್ನು ಕೊಯ್ದುಕೊಂಡಿದ್ದನ್ನು  ತೋರಿಸಿದ. ಯಾಕೋ ಮೊದಲ ಬಾರಿಗೆ ರಾಜುವಿಗೆ  ಅದನ್ನು ನೋಡಿ, ಇವನ್ಯಾಕೋ ತುಂಬ ಗಂಭೀರವಾಗಿ ಬಿಟ್ಟಿದ್ದಾನೆ ಅಂತ ಸ್ವಲ್ಪ ಭಯವಾಯಿತು.  ” ನೋಡು, ಆ ರೀತಿಯಾಗಿ ಯೋಚನೆ ಮಾಡಬಾರದು, ಪ್ರೀತಿ ತಾನಾಗಿ ಹುಟ್ಟಬೇಕು, ಅವಳನ್ನು ಬಲವಂತವಾಗಿ ನಾವು ಒಪ್ಪಿಸಲಿಕ್ಕೆ ಆಗಲ್ಲ, ನಿನ್ನ ಪ್ರೀತಿ ಅವಳಿಗೆ ತಿಳಿಸಿ ನೋಡು, ಅವಳು ಒಪ್ಪಿದರೆ ಸರಿ, ಇಲ್ಲದಿದ್ದರೆ ಬೇಡ, ಅವಳು ಇಲ್ಲದಿದ್ದರೆ ನಿನ್ನ ಹಣೆ ಬರೆಹದಲ್ಲಿ ಸಿಗುವ ಹುಡುಗಿನೇ ಸಿಗುವುದು, ಅರ್ಥ ಮಾಡಿಕೊ, ಈ ಆತ್ಮಹತ್ಯೆ ಮಾತು ಎಲ್ಲ ಆಡಬೇಡ” ಎಂದು ಬುದ್ದಿವಾದ ಹೇಳಿದನು.  ರಾಜು ಮನಸ್ಸಿನಲ್ಲಿ ಇವನೆಲ್ಲಿ ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ, ಬೇರೆಯವರಿಗೆ ಮಾಡಿಸುತ್ತಾನೆ ಅಷ್ಟೇ ಎಂದುಕೊಳ್ಳುತ್ತ ಅವನ ಜೊತೆ ಕಾಲೇಜಿನ ಒಳಗಡೆ ಹೋದನು. 

ಮಾರನೆಯ ದಿವಸ ಪ್ರಮೋದ ತಾನು ತನ್ನ ರಕ್ತದಲ್ಲಿ  ಬರೆದ ಪ್ರೇಮ ಪತ್ರವನ್ನು ಆ ಹುಡುಗಿಗೆ ಕೊಟ್ಟ. ಅವಳು ತೆಗೆದುಕೊಂಡು ಓದಿ ಸ್ವಲ್ಪ ಹೊತ್ತಿನ ನಂತರ ಅವನ ಹತ್ತಿರ ಬಂದು ಅದನ್ನು ಹರಿದು ಹಾಕಿ ಹೋದಳು. ಅಲ್ಲಿಗೆ ಪ್ರಮೋದನ ಪ್ರೇಮಕಾಂಡ ಮುಕ್ತಾಯ ವಾಯಿತು. ಪ್ರಮೋದ ಅಲ್ಲಿಂದ ಸೀದಾ ರಾಜುವಿಗೂ ಹೇಳದೆ ಹೊರಟು  ಹೋದನು.  ಬೇಜಾರಿನಲ್ಲಿ ಇರುತ್ತಾನೆ, ಸಂಜೆ ಮಾತನಾಡಿಸಿದರಾಯಿತು ಅಂದುಕೊಂಡು ರಾಜು  ತನ್ನ ಕ್ಲಾಸ್ಗೆ ಹೋದನು. ಸಂಜೆ ಕಾಲೇಜು ಮುಗಿದ ಮೇಲೆ ಪ್ರಮೋದನ ಮನೆಗೆ ಹೋಗಿ ವಿಚಾರಿಸಿದರೆ ಪ್ರಮೋದ ಮನೆಗೆ ಬಂದಿರಲಿಲ್ಲ.  ರಾಜು ಇವಾ ಎಲ್ಲಿಗೆ ಹೋದ ಅಂತ ಯೋಚನೆ ಮಾಡುತ್ತಾ  ವಾಪಾಸು ಮನೆಗೆ ಬಂದನು. ಮತ್ತೆ ರಾತ್ರಿ ೯ ಗಂಟೆಗೆ ಅವನ ಮನೆಯ ಹತ್ತಿರ ಹೋಗಿ  ವಿಚಾರಿಸಿದನು. ಪ್ರಮೋದ ಆಗ ಕೂಡ ಮನೆಗೆ ಬಂದಿರಲಿಲ್ಲ. ರಾಜುವಿಗೆ ನಿಜವಾಗಿ ಭಯವಾಯಿತು. ಏನಾದರು ಹೇಳಿದಂತೆ ಆತ್ಮಹತ್ಯೆ ಏನಾದರೂ ಮಾಡಿಕೊಂಡನೋ ಏನೋ ಅಂತ ಗಾಭರಿಯಾಯಿತು. ಆದರೂ ಏನು ತೋರಿಸಿಕೊಳ್ಳದೆ ಅವರ ಅಮ್ಮನಿಗೆ ಅವನು ಬಂದರೆ ನನಗೆ ಫೋನ್ ಮಾಡಿ ಎಂದು ಹೇಳಿ ಮನೆ ಕಡೆ ಹೊರಟನು.  

ಅವನ ಕೈ ಕಾಲು ಏಕೋ ಭಯದಿಂದ ನಡುಗತೊಡಗಿತು. ಛೆ, ಎಂತ ಕೆಲಸವಾಯಿತು ನಾನೇ ಇದನ್ನು ಗಂಭೀರವಾಗಿ ತೆಗೆದುಕೊಳ್ಳಬೇಕಿತ್ತು ಅಂತ ಅಂದುಕೊಳ್ಳುತ್ತ,  ಅವನನ್ನು ಹುಡುಕುತ್ತ, ಅವರಿಬ್ಬರೂ ಹೋಗುವ ಎಲ್ಲ ಜಾಗಗಳಲ್ಲಿ ಹುಡುಕುತ್ತ ತಿರುಗತೊಡಗಿದನು.  ರಾತ್ರಿ ಸುಮಾರು ೧೨ ಗಂಟೆಗೆ ಪ್ರಮೋದನ ಅಮ್ಮ ರಾಜುವಿಗೆ ಫೋನ್ ಮಾಡಿ ” ರಾಜು,  ಪ್ರಮೋದ ಈಗ ಮನೆಗೆ ಬಂದ, ಕೇಳಿದರೆ ಏನು ಹೇಳದೆ ರೂಮಿಗೆ ಹೋಗಿ ಬಾಗಿಲು ಹಾಕಿಕೊಂಡ, ಏನಾಯ್ತು ನಿನಗೆ ಗೊತ್ತಾ ” ಅಂತ ಕೇಳಿದರು.  ರಾಜು ಏನನ್ನು ಹೇಳದೆ ” ನಾನು ನಾಳೆ ಬರುತ್ತೇನೆ, ಅವನ ಹತ್ತಿರ ಮಾತನಾಡುತ್ತೇನೆ, ನೀವು ಏನು ಟೆನ್ಶನ್ ಮಾಡಿಕೊಳ್ಳಬೇಡಿ ” ಅಂತ ಹೇಳಿದನು.  ರಾಜುವಿಗೆ ಅಂತೂ ಬಂದನಲ್ಲ ಅಂತ ಸ್ವಲ್ಪ ಸಮಾಧಾನವಾದರೂ ಒಳಗೆ ಭಯ ಜಾಸ್ತಿಯಾಗ ತೊಡಗಿತು.  ಮನೆಗೆ ಹೋಗಿ ಮಲಗಿದರು ನಿದ್ದೆ ಬರಲಿಲ್ಲ.  ರಾತ್ರಿಯೆಲ್ಲ ಹಾಸಿಗೆಯಲ್ಲಿ ಹೊರಳಾಡುತ್ತಾ ಸಮಯ ಕಳೆದನು. ನಾಳೆ ಸರಿಯಾಗಿ ಬುದ್ದಿ ಹೇಳಬೇಕು ಪ್ರಮೋದನಿಗೆ,  ಇವೆಲ್ಲ ಸರಿಯಲ್ಲ ಅಂತ ಹೇಳಬೇಕು ಅಂತೆಲ್ಲ ಅಂದುಕೊಳ್ಳುತ್ತ ಮಲಗಲು ಪ್ರಯತ್ನ ಪಟ್ಟನು.  ಒಳಗೊಳಗೇ ನಾನು ಹೋಗುವುದೊರಳಗೆ ರಾತ್ರಿ ಏನಾದರೂ ಮಾಡಿಕೊಂಡರೆ ಏನು ಕಥೆ ಅಂತ ಯೋಚನೆ ಬಂದು ದಡಕ್ಕನೆ ಎದ್ದು ಕುಳಿತನು. ಹಾಗೆಲ್ಲ ಏನು ಆಗುವುದಿಲ್ಲ ಬಿಡು ಅಂತ ಸಮಾಧಾನ ಮಾಡಿಕೊಳ್ಳಲು ಪ್ರಯತ್ನ ಪಟ್ಟನು. ಇದೆ ರೀತಿ ಭಯ,  ಉದ್ವೇಗ, ಒಂದು ರೀತಿಯ ಕೋಪ ಇದರಲ್ಲೇ ಬೆಳಗಾಯಿತು.  

ಬೆಳಿಗ್ಗೆ ಎದ್ದವನೇ ತಯಾರಾಗಿ ಪ್ರಮೋದನ ಮನೆಗೆ ಹೋದನು. ಅವರ ಅಮ್ಮ ಸುಮ್ಮನೆ ಹಾಲ್ ನಲ್ಲಿ ಕುಳಿತ್ತಿದ್ದರು. ರಾಜು ಬಂದಿದ್ದನ್ನು  ನೋಡಿ ” ನೋಡು ರಾಜು, ಪ್ರಮೋದ ರಾತ್ರಿ ಲೇಟ್ ಆಗಿ ಬಂದು, ಈಗ ನೋಡಿದರೆ ಬೆಳಿಗ್ಗಿನಿಂದ ಕಾಣುತ್ತಿಲ್ಲ, ಎಲ್ಲಿ ಹೋದನೋ ಗೊತ್ತಿಲ್ಲ” ಅಂದರು.  ರಾಜು ಎದೆ ಧಸಕ್ಕೆಂದಿತು.  ಅವನು ಪ್ರಮೋದನ ರೂಮಿಗೆ ಒಂದು ರೀತಿಯ ಭಯದಲ್ಲೇ  ಹೋದನು. ಪ್ರಮೋದನ ಬ್ಯಾಗ್ ಮಂಚದ ಮೇಲೆ ಬಿದ್ದಿತ್ತು. ಅದರ ಕೆಳಗೆ ಏನೋ ಒಂದು ಹಾಳೆ ಇದ್ದಿದ್ದನ್ನು  ನೋಡಿ,  ಹಾಗಿದ್ರೆ ಮುಗಿತು ಕಥೆ,  ರಾತ್ರಿ ಮನೆಗೆ ಬಂದು ಸೂಸೈಡ್ ನೋಟ್  ಬರೆದಿಟ್ಟು  ಇವನು ಹೊರಗಡೆ  ಹೋಗಿದ್ದಾನೆ, ಅವನನ್ನು ತಡೆಯಬೇಕಿತ್ತು ನಾನು, ಎಂತ ತಪ್ಪು ಮಾಡಿಬಿಟ್ಟೆ ಅಂತ ಕೊರಗುತ್ತ ಆ ಪತ್ರವನ್ನು ಕೈಗೆ ತೆಗೆದುಕೊಂಡನು.  ಕೈ ಗಳು ನಡುಗುತ್ತಿದ್ದವು, ಕಣ್ಣಲ್ಲಿ  ಯಾಕೋ ಮಂಜು ಕವಿದಂತಾಯಿತು ರಾಜುವಿಗೆ.  ಪತ್ರದ ಮೊದಲ ಸಾಲು ಇನ್ನೇನು ಓದಬೇಕು ಅನ್ನುವಷ್ಟರಲ್ಲಿ ಬಾಗಿಲ ಬಳಿ ಸದ್ದಾಯಿತು. ತಿರುಗಿ ನೋಡಿದರೇ ಪ್ರಮೋದ ಬಾಗಿಲ ಬಳಿ ನಿಂತಿದ್ದ. ಅವನು ಕಣ್ಣುಗಳಿಗೆ ನಂಬಲಾಗಲಿಲ್ಲ. ಒಂದು ಕಡೆ ಖುಷಿ ಒಂದು ಕಡೆ  ಕೋಪ ಉಕ್ಕಿ ಬರುತಿತ್ತು.  ಸೀದಾ ಹತ್ತಿರ ಹೋದವನೇ ” ಸೂಸೈಡ್ ನೋಟ್ ನೋಟ್ ಬರೆದು ಸಾಯಲು ಹೋಗ್ತಿಯ ಮಗನೆ ” ಅಂತ ಒಂದು ಕಪಾಳಕ್ಕೆ  ಹೊಡೆದ. ಪ್ರಮೋದ ಕಕ್ಕಾಬಿಕ್ಕಿಯಾಗಿ ” ಯಾರೋ ಹೇಳಿದ್ದು ನಾನು ಸೂಸೈಡ್ ನೋಟ್ ಬರೆದಿದ್ದೀನಿ ” ಅಂತ ಕೇಳಿದ. ಅದಕ್ಕೆ ರಾಜು ” ಇಲ್ಲಿ ನೋಡು ಅಂತ ಅವನ ಕೈಲಿದ್ದ ಪತ್ರವನ್ನು ಅವನಿಗೆ ಕೊಟ್ಟ. ಪ್ರಮೋದ ಜೋರಾಗಿ ನಗತೊಡಗಿದ. ಯಾಕೆ ನಗುತ್ತಿದ್ದಿ ಅಂತ ಕೇಳಿದ್ದಕ್ಕೆ ” ಅಯ್ಯೋ ಅದು ಸೂಸೈಡ್ ನೋಟ್ ಅಲ್ಲ,  ಅದು ಇನ್ನೊಂದು  ಪ್ರೇಮ ಪತ್ರ, ರಾತ್ರಿ ಬರೆದಿದ್ದು, ನೀನೆ ಹೇಳಿದ್ಯಲ್ಲ, ಅವಳು ಸಿಗದಿದ್ದರೆ ಇನ್ನೊಬ್ಬರು ಅಂತ,  ಬೆಳಿಗ್ಗೆ  ಅವಳು ನನ್ನ ಪತ್ರ ಹರಿದು ರಿಜೆಕ್ಟ್ ಮಾಡಿದ ತಕ್ಷಣ ಬೇಜಾರಾಯ್ತು, ಸೀದಾ ಹಾಗೆ ಯೋಚನೆ ಮಾಡುತ್ತಾ  ರಾತ್ರಿ ಮನೆಗೆ ಬಂದು, ನೀನು ಹೇಳಿದ್ದೆ ಸರಿ ಎಂದೆನಿಸಿ, ಅದೇ ಇನ್ನೊಂದು ಹುಡುಗಿ ನನ್ನ ನೋಡಿ ನಗ್ತಾ ಇದ್ಲು , ಅವಳಿಗೆ ಬರೆದ ಪ್ರೇಮ ಪತ್ರ ಅದು” ಅಂತ ನಗುತ್ತ ಹಾಸಿಗೆ ಮೇಲೆ ಬಿದ್ದನು. 

ರಾಜುವಿಗೆ ನಗಬೇಕೋ, ಕೋಪ ಮಾಡಿಕೊಳ್ಳಬೇಕೋ ಗೊತ್ತಾಗದೆ ಹಾಗೆ ಗರ ಬಡಿದವರಂತೆ ನಿಂತು ನೋಡತೊಡಗಿದನು. 

– ಶ್ರೀನಾಥ್ ಹರದೂರ ಚಿದಂಬರ 

6 thoughts on “ಸೂಸೈಡ್ ನೋಟ್

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s