ಹದಿನೆಂಟು ವರುಷಗಳ ಹಿಂದೆ ಕಲಿತ ಪಾಠ ….

ಅನೇಕ ವ್ಯಕ್ತಿಗಳು  ಜೀವನದಲ್ಲಿ  ಬಂದು ಹೋಗುತ್ತಾ ಇರುತ್ತಾರೆ, ಆದರೆ ಜೊತೆಯಲ್ಲಿ ಉಳಿಯುವವರು ಬೆರಳೆಣಿಕೆಯಷ್ಟು ಮಾತ್ರ. ಅದರಲ್ಲಿ ಕೆಲವು  ಸ್ನೇಹಿತರು ನಮ್ಮನ್ನು ತಮ್ಮ ಸ್ವಾರ್ಥಕ್ಕೆ ಉಪಯೋಗಿಸಿಕೊಂಡು  ನಮ್ಮಿಂದ ದೂರ ಹೋಗಿದ್ದನ್ನು ನೋಡಿದ್ದೇನೆ. ಆದರೆ ಕೆಲವು ವ್ಯಕ್ತಿಗಳ ವ್ಯಕ್ತಿತ್ವ ಮಾತ್ರ ಮನಸ್ಸಿಗೆ ಬಹಳ ಇಷ್ಟವಾಗುತ್ತೆ.  ಅವರು  ತುಂಬ ಗಾಢ ಸ್ನೇಹಿತರೇನು ಆಗಿರುವುದಿಲ್ಲ, ಆದರೂ ಅವರ ಸ್ವಭಾವದಿಂದ ನಮಗೆ ತುಂಬ ಹತ್ತಿರವಾಗಿರುತ್ತಾರೆ.  ದುಡ್ಡಿಗಿಂತ ವಿಶ್ವಾಸಕ್ಕೆ ಬೆಲೆ ಜಾಸ್ತಿ ಕೊಡುವ ಅವರ ಬಗ್ಗೆ ಗೌರವ ಭಾವನೆ ಕೊನೆಯವರಿಗೂ ಉಳಿದುಬಿಡುತ್ತೆ.

ಸುಮಾರು ಹದಿನೆಂಟು  ವರುಷಗಳ ಹಿಂದೆ ನಾನು ಒಂದು ಟೆಸ್ಟಿಂಗ್ ಲ್ಯಾಬೋರೇಟರಿ ಯಲ್ಲಿ ಕೆಲಸ ಮಾಡುತ್ತಿದ್ದೆ. ಕೆಲಸವೇನೋ ಮಾಡುತ್ತಿದ್ದೆ, ಆದರೆ ಮನಸ್ಸು ಯಾವಾಗಲೂ ಸ್ವಂತ ಬ್ಯುಸಿನೆಸ್ ಮಾಡುವ ಆಲೋಚನೆಯಲ್ಲೇ ಇರುತ್ತಿತ್ತು.  ತಲೆಯಲ್ಲಿ ಐಡಿಯಾ ಇದ್ದರು ಕೈಲ್ಲಿ ಬಂಡವಾಳ ಇರಲಿಲ್ಲ. ಹಾಗಾಗಿ ಮಾಡುವ ಕೆಲಸವನ್ನೇ ಚೆನ್ನಾಗಿ ಕಲಿತು ಬೇರೆ ಕಂಪನಿಗೆ ಸೇರಿ ಒಳ್ಳೆ ಸಂಬಳ ಪಡೆದರೆ ಸಾಕು ಅನ್ನುವ  ಹಂತಕ್ಕೆ ಬಂದು ನಿಂತಿದ್ದೆ.  ಆಗ ನಾನು ಕೆಲಸ  ಮಾಡುತ್ತಿದ್ದ ಡಿಪಾರ್ಟ್ಮೆಂಟ್ಗೆ  ಒಬ್ಬ ವ್ಯಕ್ತಿ ಕೆಲಸಕ್ಕೆ ಹೊಸದಾಗಿ ಸೇರಿದರು. ಅವನ  ಹೆಸರು ಶ್ರೀನಿವಾಸ್ ಅಂತ. ಇವತ್ತಿಗೂ ಅವನೊಂದಿಗೆ  ಸಂಪರ್ಕದಲ್ಲಿದ್ದೇನೆ ಹಾಗು ಅವನಿಂದ  ಕಲಿತ ಪಾಠನೆ ಈ ಬರಹಕ್ಕೆ ಸ್ಪೂರ್ತಿ ಅಂತ ಹೇಳಬಹುದು. ಅನೇಕ ತಿಂಗಳುಗಳು ಒಟ್ಟಿಗೆ ಕೆಲಸ ಮಾಡಿದ ಬಳಿಕ ನಮ್ಮಿಬ್ಬರ ಮಧ್ಯೆ ಒಳ್ಳೆ ಸ್ನೇಹ ಶುರುವಾಯಿತು. ನಮ್ಮ  ನಮ್ಮ ಆಲೋಚನೆಗಳನ್ನು ಒಬ್ಬರ ಹತ್ತಿರ ಒಬ್ಬರು ಹೇಳಿಕೊಳ್ಳುವ ಮಟ್ಟಿಗೆ ಸ್ನೇಹ ಮುಂದುವರೆಯಿತು. ಇಬ್ಬರಿಗೂ ಒಂದೇ ಆಸೆ ಇದ್ದದ್ದು ಏನಾದರೂ ಬ್ಯುಸಿನೆಸ್ ಮಾಡಬೇಕೆಂಬುದು. 

ನನಗೆ  ನನ್ನ ಊರಾದ ತೀರ್ಥಹಳ್ಳಿಯಿಂದ ಪರಿಚಯ ಇದ್ದ ಇನ್ನೊಬ್ಬ ಸ್ನೇಹಿತ ಶ್ರೀಧರ ಅಂತ ಸಂಪರ್ಕದಲ್ಲಿದ್ದ. ಅವನು ಗ್ರಾನೈಟ್ ಬ್ಯುಸಿನೆಸ್ ಮಾಡುತ್ತಿದ್ದ. ಒಂದು ದಿವಸ ನನಗೆ ಸಿಕ್ಕಾಗ ಏನಾದರೂ ಗ್ರಾನೈಟ್ ಬ್ಯುಸಿನೆಸ್ನಲ್ಲಿ ದುಡ್ಡು ಹಾಕುತ್ತೀರ ಅಂದರೆ ನನಗೆ ಹೇಳಿ, ನಾನು ಒಳ್ಳೆ ದುಡ್ಡು ಬರುವ ಹಾಗೆ ಮಾಡಿಕೊಡುತ್ತೇನೆ ಅಂತ ಹೇಳಿದ್ದ. ನಾನು ಶ್ರೀನಿವಾಸ ಮಾತನಾಡುವಾಗ ಈ ವಿಷಯ ಹೇಳಿದೆ. ಆಗ ಶ್ರೀನಿವಾಸ ಅವರನ್ನು ನಾವು ನಂಬಬಹುದೇ ಅಂತ ಕೇಳಿದ. ಅವನು ನಮ್ಮ ಊರಿನವನು ಹಾಗು ನನ್ನ ಆತ್ಮೀಯ ಸ್ನೇಹಿತನಿಗೆ ಶ್ರೀಧರ ಬಹಳ ಚೆನ್ನಾಗಿ ಗೊತ್ತು, ಹಾಗಾಗಿ  ಏನು ತೊಂದರೆ ಇಲ್ಲ ಅಂತ ಭರವಸೆ ಕೊಟ್ಟೆ. ಇಬ್ಬರು ಸೇರಿ ಶ್ರೀಧರನನ್ನು ಭೇಟಿಯಾಗಿ ನಮ್ಮಿಬ್ಬರ ಇಂಟರೆಸ್ಟ್ ಅವನ ಹತ್ತಿರ ಹೇಳಿದ್ವಿ. ಅವನು ಹಾಗಾದರೆ ಈಗ ಐವತ್ತು ಸಾವಿರ ಇನ್ವೆಸ್ಟ್ ಮಾಡಿ, ನಾನು ತಿಂಗಳಿಗೆ ನಾಲ್ಕು ಸಾವಿರ ಕೊಡುತ್ತೀನಿ ಅಂದ. ನಮಗೆ ಅದನ್ನು ಕೇಳಿ ತುಂಬ ಖುಷಿ ಆಗಿದ್ದಂತೂ ನಿಜ. ಆದರೆ ನನ್ನ ಹತ್ತಿರ ಕೊಡಲಿಕ್ಕೆ ದುಡ್ಡು ಇರಲಿಲ್ಲ. ಅದಕ್ಕೆ ಶ್ರೀನಿವಾಸ್,  ನಾನೇ ಐವತ್ತು ಸಾವಿರ ಹಾಕುತ್ತೇನೆ, ಅದರಲ್ಲಿ ಇಪ್ಪತೈದು ಸಾವಿರ ನಿನ್ನ ಹೆಸರಲ್ಲಿ ಹಾಕಿದರಾಯಿತು. ನಿನಗೆ ಹಣ ಬಂದ  ಮೇಲೆ ನನಗೆ ವಾಪಸು ಕೊಡು ಅಂದ.  ಅವತ್ತು ನಾನು ನನ್ನ ಮೇಲಿನ ಅವನ  ನಂಬಿಕೆ ಸುಳ್ಳಾಗದಿರಲಿ ಅಂತ ದೇವರಲ್ಲಿ ಬೇಡಿಕೊಂಡಿದ್ದೆ. 

ಐವತ್ತು ಸಾವಿರದ  ಚೆಕ್ ಬರೆದು ಶ್ರೀಧರನಿಗೆ ಕೊಟ್ವಿ. ಒಂದು ತಿಂಗಳ ನಂತರ ಅವನು ನಮಗೆ ನಾಲ್ಕು ಸಾವಿರ ಲಾಭದ ದುಡ್ಡು ಅಂತ  ಕೊಟ್ಟ.  ಅದರಲ್ಲಿ ಎರಡು ಸಾವಿರ ನನಗೆ  ಇನ್ನೆರಡು  ಸಾವಿರ ಶ್ರೀನಿವಾಸನಿಗೆ  ಅಂತ ಲೆಕ್ಕ ಹಾಕಿ ಕೊಂಡಿದ್ವಿ.  ನಾನು ಆ ಎರಡು ಸಾವಿರವನ್ನು  ನನ್ನ ಇಪ್ಪತೈದು ಸಾವಿರದ ಲೆಕ್ಕಕ್ಕೆ ಮಾಡು  ಅಂತ ಹೇಳಿದೆ.  ನಾನು  ಹೀಗೆ ಮಾಡುತ್ತಾ ಹೋದರೆ, ಒಂದು ವರುಷದಲ್ಲಿ ಅವರಿಂದ ತೆಗೆದುಕೊಂಡ ಇಪ್ಪತೈದು ಸಾವಿರ ಮುಗಿದು ಆಮೇಲೆ ಬರುವ ದುಡ್ಡು  ನನ್ನದಾಗುತ್ತೆ ಅಂತ ಅಂದುಕೊಂಡಿದ್ದೆ.  ಮೂರು ತಿಂಗಳ ತನಕ, ಪ್ರತಿ ತಿಂಗಳು  ನಾಲ್ಕು ಸಾವಿರ ಕೊಡುತ್ತ ಹೋದ.  ಹಾಗೆಯೇ ನನ್ನ ಕನಸುಗಳು ದೊಡ್ಡದಾಗುತ್ತ ಹೋಯಿತು. ಇನ್ನು ಕೆಲವೇ ವರುಷಗಳಲ್ಲಿ ಲಕ್ಷಾಂತರ ದುಡಿದು ಬಿಡುವ ಕನಸುಗಳು ಶುರುವಾಯಿತು. 

ನಾಲ್ಕನೇ ತಿಂಗಳು ಶ್ರೀಧರ ದುಡ್ಡು ಕೊಡಲಿಲ್ಲ. ಕೇಳಿದ್ದಕ್ಕೆ ಬೇರೆ ಕಮಿಟ್ಮೆಂಟ್ ಇದೆ,  ನೆಕ್ಸ್ಟ್ ಮಂತ್ ಸೇರಿಸಿ ಕೊಡ್ತೀನಿ ಅಂದ. ನಮಗೆ ಏನು ಅನ್ನಿಸಲೇ ಇಲ್ಲ. ಬ್ಯುಸಿನೆಸ್ ಅಂದಮೇಲೆ ಇವೆಲ್ಲ ಕಾಮನ್ ಅಂತ ಅಂದುಕೊಂಡ್ವಿ. ಐದನೇ ತಿಂಗಳು ಕೂಡ ಅದೇ ಕಾರಣಕೊಟ್ಟ. ಅವಾಗಲೂ ಏನು ಅನಿಸಲೇ ಇಲ್ಲ. ಕಾರಣ ಅವನ ಮೇಲಿದ್ದ ನಂಬಿಕೆ ಮತ್ತು ವಿಶ್ವಾಸ.  ಆರನೇ ತಿಂಗಳು ಸಹಿತ ದುಡ್ಡು ಕೊಡಲಿಲ್ಲ. ಆಗ ನಮಗೆ ಸ್ವಲ್ಪ ಕಸಿವಿಸಿ ಆಯಿತು. ನಾನು ಪದೇ ಪದೇ ದುಡ್ಡು ಕೇಳಲು ಫೋನ್ ಮಾಡಲು ಶುರು ಮಾಡಿದೆ.  ಅವನು ಫೋನ್ ಎತ್ತುವುದನ್ನು ನಿಲ್ಲಿಸಿದ. ಭೇಟಿ ಆಗುವುದನ್ನು ತಪ್ಪಿಸ ತೊಡಗಿದ.  ಅವನ ಬಗ್ಗೆ ವಿಚಾರಿಸ ತೊಡಗಿದಾಗ ಗೊತ್ತಾದ ವಿಷಯ ಏನೆಂದರೆ ಗ್ರಾನೈಟ್ ಬ್ಯುಸಿನೆಸ್ ಅಲ್ಲಿ ಅವನಿಗೆ ತುಂಬಾ  ಲಾಸ್ ಆಗಿ ದುಡ್ಡಿಗಾಗಿ ಅಲೆಯುತ್ತಿದ್ದ ಸಮಯದಲ್ಲಿ ಬಕ್ರಾಗಳಾಗಿ ನಾವು ಸಿಕ್ಕಿದ್ವಿ. ನನ್ನ ಸ್ನೇಹವನ್ನು ಅವನು ಚೆನ್ನಾಗಿ ಉಪಯೋಗಿಸಿಕೊಂಡು ನಮಗೆ ಮೋಸ ಮಾಡಿದ್ದ. ಅನೇಕ ತಿಂಗಳುಗಳ ಕಾಲ ಅವನ ಹಿಂದೆ ಅಲೆದು  ನಮಗೆ ವಾಪಸು ಸಿಕ್ಕಿದ ಹಣ ಕೇವಲ ನಲವತ್ತೈದು ಸಾವಿರ.  ಕಷ್ಟ ಅಂತ ಹೇಳಿದ್ದರೆ ಸ್ನೇಹಿತರಾಗಿ ಕೈಲಾದ ಸಹಾಯ ಮಾಡುತ್ತಿದ್ವಿ. ಆದರೆ ನಂಬಿಕೆ ಮತ್ತು ವಿಶ್ವಾಸಕ್ಕೆ  ಬೆಲೆ ಕೊಡದೆ ಎರಡನ್ನು ಸಾಯಿಸಿಬಿಟ್ಟಿದ್ದ. ಸ್ನೇಹ ಕಳೆದುಕೊಂಡಿದ್ದ. 

ನನ್ನ ಮೇಲಿನ ನಂಬಿಕೆಯಿಂದ ಶ್ರೀನಿವಾಸ್ ದುಡ್ಡನ್ನು ಇನ್ವೆಸ್ಟ್ ಮಾಡಿದ್ದು. ಆದರೆ ಅವನು  ನನಗೆ ಒಂದೇ ಒಂದು ಭಾರಿ ಕೂಡ ನಿನ್ನಿಂದ  ಹೀಗೆ ಆಯಿತು ಅಂತ ಹೇಳಲಿಲ್ಲ. ಮೋಸ ಹೋಗಿದ್ದ ದುಡ್ಡು ನೀನು  ಕೊಡಬೇಕು ಅಂತ ಕೇಳಲಿಲ್ಲ. ಅವನ  ಮುಖದಲ್ಲಿ ಸ್ವಲ್ಪ ಕೂಡ ಅಸಹನೆ ಕಾಣಿಸಲಿಲ್ಲ.  ಅವನು  ದುಡ್ಡು ಕಳೆದುಕೊಂಡಿದ್ದಕ್ಕೆ ಯಾವತ್ತೂ ದುಃಖವನ್ನು ಕೂಡ ತೋರಿಸಲಿಲ್ಲ. ನನ್ನ ಮೇಲಿನ ನಂಬಿಕೆ ಮತ್ತು ವಿಶ್ವಾಸಕ್ಕೆ ಬೆಲೆ ಕೊಟ್ಟು ಸ್ನೇಹವನ್ನು ಉಳಿಸಿಕೊಂಡಿದ್ದ.   

ಆ ಘಟನೆಯಿಂದ ಇಬ್ಬರಿಂದಲೂ ನಾನು ಪಾಠ ಕಲಿತೆ.  ಒಬ್ಬರಿಂದ ಹೇಗೆ ಸ್ನೇಹ ಉಳಿಸಿಕೊಳ್ಳಬೇಕು ಅಂತ, ಇನ್ನೊಬ್ಬರಿಂದ ಹೇಗೆ ಸ್ನೇಹ ಕಳೆದುಕೊಳ್ಳಬಹುದು  ಅಂತ.    ಪರಿಸ್ಥಿತಿ ಏನೇ ಇರಲಿ,  ಸ್ನೇಹದಲ್ಲಿ ನಂಬಿಕೆ ಮತ್ತು ವಿಶ್ವಾಸವನ್ನು ಉಳಿಸಿಕೊಳ್ಳಬೇಕು.  

– ಶ್ರೀನಾಥ್ ಹರದೂರ ಚಿದಂಬರ 

2 thoughts on “ಹದಿನೆಂಟು ವರುಷಗಳ ಹಿಂದೆ ಕಲಿತ ಪಾಠ ….

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s