ಛಾಯಾಚಿತ್ರಣ: ಅಂಕಿತ
ಕಥೆ : ಶ್ರೀನಾಥ್ ಹರದೂರ ಚಿದಂಬರ

ಮನೆಯಲ್ಲಿ ಅಕ್ಕ ಮತ್ತು ಅವಳ ತಮ್ಮಂದಿರು ಮಾತ್ರ ಇದ್ದರು. ಅಪ್ಪ ಅಮ್ಮ ಇಬ್ಬರು ಹೊರಗಡೆ ಪೇಟೆಗೆ ಹೋಗಿದ್ದರು. ಸಾಯಂಕಾಲ ೬ ಗಂಟೆ ಆಗುತ್ತಾ ಬಂದಿತ್ತು. ಕೂಗಿ ಕರೆದರೇ, ಕೂಡಲೇ ಬರುವಷ್ಟು ಹತ್ತಿರದಲ್ಲಿ ಬೇರೆ ಯಾವ ಮನೆಯು ಇರಲಿಲ್ಲ. ಅಕ್ಕ ಕಾಲೇಜಿನಲ್ಲಿ ಓದುತ್ತಿದ್ದಳು ಮತ್ತು ತಮ್ಮಂದಿರು ಇನ್ನು ಪ್ರಾಥಮಿಕ ಶಾಲೆಯಲ್ಲಿ ಓದುತ್ತಿದ್ದರು. ಎಲ್ಲರು ಮನೆಯ ನಡುಮನೆಯಲ್ಲಿ ಓದುತ್ತಾ ಕುಳಿತ್ತಿದ್ದರು. ಆಗ ಮನೆಯ ಹಿಂಭಾಗದಲ್ಲಿ ಇದ್ದಕ್ಕಿದ್ದಂತೆ ಯಾರೋ ಹೆಣ್ಣು ಹುಡುಗಿ ವಿಕಾರವಾಗಿ ಕೂಗಿದ ಹಾಗೆ ಆಯಿತು. ಮೂರು ಜನರು ಬೆಚ್ಚಿ ಬಿದ್ದರು. ಓದುವುದನ್ನು ನಿಲ್ಲಿಸಿ ಮನೆಯ ಹಿಂಬಾಗಿಲ ಕಡೆ ನೋಡ ತೊಡಗಿದರು. ಮತ್ತೊಮ್ಮೆ ಯಾರೋ ಕಿರುಚಿದ ಹಾಗೆ ಧ್ವನಿ ಕೇಳಿಸಿತು. ತಮ್ಮಂದಿರು ಭಯಗೊಂಡು ಅಕ್ಕನ ಹಿಂದೆ ಸೇರಿಕೊಂಡರು. ಅಕ್ಕನಿಗೆ ಭಯವಾದರೂ ಸಾವರಿಸಿಕೊಂಡು ಸ್ವಲ್ಪ ಧೈರ್ಯ ತಂದುಕೊಂಡಳು. ಆಗ ಮತ್ತೊಮ್ಮೆ ಜೋರಾಗಿ ಯಾರೋ ಕಿರುಚಿದ ಧ್ವನಿ ಕೇಳಿತು. ಮೂರು ಜನ ಭಯದಿಂದ ನಡುಗ ತೊಡಗಿದರು. ತಮ್ಮಂದಿರಂತೂ ಅಳಲು ಶುರು ಮಾಡಿದರು. ಪ್ರತಿ ಸಲ ಯಾರೋ ಬೇರೆ ಬೇರೆ ಧ್ವನಿಯಲ್ಲಿ ಕಿರುಚಿದ ಹಾಗೆ ಕೇಳುತ್ತಿತ್ತು. ಅಕ್ಕ ಸ್ವಲ್ಪ ಧೈರ್ಯ ತಂದುಕೊಂಡು ಯಾರದು ಅಂತ ಕೂಗಿದಳು. ತಮ್ಮಂದಿರು ಅಳುವುದನ್ನು ನಿಲ್ಲಿಸಿ ತಮ್ಮ ಗಮನವನ್ನು ಹಿಂಬಾಗಿಲ ಕಡೆ ತಿರುಗಿಸಿದರು. ಅಕ್ಕ ನಿಧಾನವಾಗಿ ಹಿಂಬಾಗಿಲ ಕಡೆ ಹೊರಟಳು. ತಮ್ಮಂದಿರು ಅಕ್ಕನ ಲಂಗವನ್ನು ಹಿಡಿದುಕೊಂಡು ಅವಳ ಹಿಂದೇನೆ ಹೋದರು. ಅಕ್ಕ ಬಾಗಿಲ ಬಳಿ ಬಂದು ಜೋರಾಗಿ ಯಾರದು ಕೇಳಿದಳು. ಬರುತ್ತಿದ್ದ ಧ್ವನಿ ನಿಂತು ಹೋಯಿತು. ಬಾಗಿಲ ಬಳಿಯಲ್ಲೇ ನಿಂತು ಏನಾದರೂ ಕೇಳುವುದೇ ಅಂತ ನೋಡತೊಡಗಿದರು. ಆಗ ಮತ್ತೆ ಕಿರುಚಿದ ಧ್ವನಿ ಕೇಳಿತು ಆದರೆ ಜೋರಾಗಿ ಕೇಳಲಿಲ್ಲ , ತುಂಬ ನಿಧಾನವಾಗಿ ಕೇಳಿತು. ಅಕ್ಕ ಬಾಗಿಲ ಮೂಲೆಯಲ್ಲಿ ಇದ್ದ ಪೊರಕೆ ತೆಗೆದುಕೊಂಡು, ಇದ್ದಬದ್ದ ಧೈರ್ಯವನ್ನು ಒಟ್ಟು ಗೂಡಿಸಿ ಹಿಂಬಾಗಿಲನ್ನು ತೆಗೆದಳು. ನೋಡಿದರೆ ಅಲ್ಲಿ ಯಾರು ಕಾಣಲಿಲ್ಲ. ಅವರಿಗೆ ಏನು ಅಂತ ಅರ್ಥವಾಗದೆ ಅಲ್ಲೇ ನಿಂತು ನೋಡತೊಡಗಿದರು. ಆಗ ಮತ್ತೆ ಬಾಗಿಲ ಬಳಿಯಲ್ಲಿದ್ದ ನೀರಿನ ಕೊಳಾಯಿ ಇಂದ ಕಿರುಚುವ ಧ್ವನಿ ಕೇಳಿತು. ಪೊರಕೆಯನ್ನು ಕೈಯಲ್ಲಿ ಹಿಡಿದುಕೊಂಡು ಹೊಡೆಯಲು ತಯಾರಾಗಿ ಕೊಳಾಯಿಯ ಮುಚ್ಚಳ ತೆಗೆದರು. ಆದರೆ ಅಲ್ಲಿ ಕೂಡ ಏನು ಇರಲಿಲ್ಲ. ಅವರು ಹಾಗೆ ನಿಂತುಕೊಂಡು ನೋಡತೊಡಗಿದರು. ಮತ್ತೆ ಕಿರುಚಿದ ಧ್ವನಿ ಕೇಳಿತು. ಮೂವರಿಗೂ ಆ ಧ್ವನಿ ಏನು ಅಂತ ಗೊತ್ತಾಗಿ ಜೋರಾಗಿ ನಗತೊಡಗಿದರು.
ಕೊಳಾಯಿಯಲ್ಲಿದ್ದ ನಲ್ಲಿಯಿಂದ ಜೋರಾಗಿ ಗಾಳಿ ಬಿಟ್ಟು ಬಿಟ್ಟು ಬರುತ್ತಿತ್ತು. ನಲ್ಲಿಯಿಂದ ಪ್ರತಿ ಸಲ ಗಾಳಿ ಬಂದಾಗ ಕೊಳಾಯಿಯಲ್ಲಿ ಪ್ರತಿಧ್ವನಿಸಿ ಯಾರೋ ಕಿರುಚಿದ ಹಾಗೆ ಕೇಳುತ್ತಿತ್ತು ಅಷ್ಟೇ.