ಬರೆಹ: ಭವಾನಿ ಶಂಕರ

ಊರಿನಲ್ಲಿದ್ದಾಗ ಆಸ್ರಿಗೆ ಎಂಥಾ ಮಾಡ್ಲಾ …! ಅಂತ ಅಮ್ಮ ಕೇಳುತ್ತಿದ್ದ ನೆನಪು. ಆಸ್ರಿ ಅಂದರೆ ಬೆಳಗಿನ ತಿಂಡಿ ಎಂದರ್ಥ. ವಿಶೇಷವಾಗಿ ಹವ್ಯಕ ಭಾಷೆ ಮಾತನ್ನಾಡುವ ಸಿರ್ಸಿ, ಸಿದ್ದಾಪುರ, ಸಾಗರದ ಆಸುಪಾಸಿನಲ್ಲಿ ಈ ಮಾತು ಎಲ್ಲರ ಮನೆಯಲ್ಲಿ ಬೆಳಿಗ್ಗೆ ಕೇಳುವ ಅಭ್ಯಾಸ. ಆಸ್ರಿ ಅಂದರೆ ಎಲ್ಲರ ಮನೆಯಲ್ಲಿ ಸಾಮಾನ್ಯವಾಗಿ ಹಲವು ಬಗೆಯ ದೋಸೆಗಳು ಅಥವಾ ರೊಟ್ಟಿಗಳು , ಅವಲಕ್ಕಿ, ಉಪ್ಪಿಟ್ಟು, ಇಡ್ಲಿ, ಅದು ಹೋಟೆಲ್ನಲ್ಲಿ ಸಿಗುವ ತೆಳ್ಳನೆಯ ಬೆಳ್ಳನೆಯ ಇಡ್ಲಿ ಅಲ್ಲ, ಅದರ ಆಕಾರ, ರುಚಿ, ಎಲ್ಲವು ಬೇರೆಯೇ, ಅದರ ಜೊತೆ ಕಾಯಿಯ ಚಟ್ನಿ… ಅದೊಂದು ಅದ್ಭುತ…
ಬೆಂಗಳೂರಿಗೆ ಸಮೀಪ ಬಂದಷ್ಟು … ಈ ಎಲ್ಲ ಬಗೆ, ಬಗೆಗಳು ಮಾಯವಾಗಿ , ತಿಂಡಿ ಅಂದರೆ, ಅನ್ನ … ಅನ್ನದಲ್ಲಿ ಬಗೆ ಬಗೆಯ ರೂಪವನ್ನು ತೋರಿಸಲಾಗುತ್ತದೆ. ಚಿತ್ರಾನ್ನ, ಪುಳಿಯೋಗರೆ, ಬಿಸಿಬೇಳೆ ಬಾತ್ , ಹಲವು ಬಗೆಯ ಪಲಾವುಗಳು, ಹಲವು ತರಕಾರಿಗಳು ಸೇರಿದ ರೈಸ್ ಬಾತ್ ಗಳು, ಟೊಮೇಟೊ ರೈಸ್, ಆಲೂ ರೈಸ್, ಪೆಪ್ಸಿಕಮ್ ರೈಸ್, ಜೀರಾ ರೈಸ್, ಇತ್ಯಾದಿ ಅನ್ನಗಳೇ… ಅನ್ನಗಳು. ಹೋಟೆಲ್ಗಳಲ್ಲಿ ಕೂಡ ಇಡ್ಲಿ ವಡೆ, ಕೇಸರಿ ಬಾತ್, ಪೂರಿ , ದೋಸೆ ಮುಂತಾದ ತಿಂಡಿಗಳ ಜೊತೆ… ಯೂವುದೋ ಒಂದು ರೈಸ್ ಐಟಮ್ ಕೂಡ ತಯಾರಾಗಿರುತ್ತದೆ.
ಈ ಎಲ್ಲ ಅನ್ನಗಳಲ್ಲಿ ತುಂಬ ಪ್ರಮುಖ ಸ್ಥಾನದಲ್ಲಿರುವದು ಚಿತ್ರಾನ್ನ … !
ಏಕೆಂದರೆ, ಮಾಡಲು ಸುಲಭ, ನಿನ್ನೆ ರಾತ್ರಿ ಮಿಕ್ಕಿದ್ದ ಅನ್ನವಾಗಬಹುದು ಅಥವಾ ಫ್ರೆಶ್ ಆಗಿ ಮಾಡಿದ ಅನ್ನವೇ ಆಗಬಹುದು. ಅರಿಶಿನ, ಹಸಿ ಮೆಣಸಿನಕಾಯಿ, ಕಡಲೆ ಬೀಜ ಹೀಗೆ ಕೆಲವು ಬೇಸಿಕ್ ingredients ಇದ್ದರೆ ಸಾಕು. ಕೆಲಸ ಮುಗಿಯುತ್ತದೆ. ಅವಾಗ ಈವಾಗ ಅದರ ಜೊತೆಯಲ್ಲಿ ಮಾವಿನಕಾಯಿ ಸೇರಿಕೊಂಡು ಮಾವಿನಕಾಯಿ ಚಿತ್ರಾನ್ನವೂ ಆಗುತ್ತದೆ.
ಆಫೀಸಿಗೋ ಅಥವಾ ಮಕ್ಕಳಿಗೆ ಶಾಲೆಗೇ ತೆಗೆದುಕೊಂಡು ಹೋಗಲು ಇದು ಸುಲಭ. ಒಂದೇ ಒಂದು ಡಬ್ಬಿಯಲ್ಲಿ ತುಂಬಿಸಿಕೊಂಡು ಹೋದರೆ ಆಯಿತು. ಚಟ್ನಿಯ ಡಬ್ಬಿಯ ಬೇಕಿಲ್ಲ. ಪಲ್ಯದ ಸಾಥ್ ಬೇಕಿಲ್ಲ. ಒಟ್ಟಿನಲ್ಲಿ ಡಬ್ಬಿಗಳ ಸಂಖ್ಯೆ ಕಡಿಮೆ ಆಗುತ್ತದೆ.
ಮುಂಚೆಯೇ ಪಾತ್ರೆಗಳ ಸಂಖ್ಯೆ ಕಡಿಮೆ ಇರುವುದರಿಂದ ಕೊನೆಯಾದಾಗಿ ಪಾತ್ರೆ ತೊಳೆಯುವುದು ಸುಲಭವೇ. ಚಿತ್ರಾನ್ನದಲ್ಲಿರುವ ಕೊನೆಯ ಉದ್ದಿನ ಬೇಳೆ , ಸಾಸಿವೆ ಕಾಳನ್ನು ತಿಂದು ಮುಗಿಸಿದರೆ ಡಬ್ಬಿಯಲ್ಲಿ ಏನು ಉಳಿದಿರುವದಿಲ್ಲ. ಒಮ್ಮೆ ಹಾಗೆ ನೀರನ್ನು ಹಾಕಿ, ಸುಲಭವಾಗಿ ಪಾತ್ರೆ ತೊಳೆದುಬಿಡಬಹುದು. ಹೀಗೆ ಚಿತ್ರಾನ್ನ ಬೆಳಗಿನ ತಿಂಡಿ ಆಗಬಹುದು, ಮಧ್ಯಾಹ್ನದ ಊಟ ಆಗಬಹುದು, ರಾತ್ರಿಯೂ ಕೊಟ್ಟರೆ ಬೇಡ ಅನ್ನದೆ ತಿನ್ನಬಹುದು.
ಒಂದು ಕಾಲದಲ್ಲಿ ನನಗೆ ನೆನಪು ಇದ್ದ ಹಾಗೆ, ಚಿತ್ರಾನ್ನ ಅನ್ನುವುದು , ಮದುವೆ , ಉಪನಯನ, ಇನ್ಯಾವುದೋ ಸಮಾರಂಭದ ಊಟದಲ್ಲಿ, ಕಲಸನ್ನ ಅನ್ನುವ ಹೆಸರಿನಲ್ಲಿ ಎಲೆಯ ಎಡ ಭಾಗದಲ್ಲಿ ಬಂದು ಬೀಳುತ್ತಿತ್ತು. ಅದರ ಮೇಲೆ ಹಪ್ಪಳ ಇರುತ್ತಿತ್ತು. ಇಂದು ಬಹುಶ ಈ ಕಲಸನ್ನದ ಜಾಗ ವಂಚಿತವಾಗಿ , ಇತರೆ ಅನ್ನಗಳು ಅದರ ಸ್ಥಾನಕ್ಕೆ ಲಗ್ಗೆ ಇಟ್ಟಂತಿದೆ. ಘೀ ರೈಸ್ , ಫ್ರೈಡ್ ರೈಸ್, ವೆಜ್ ಬಿರಿಯಾನಿ ಮುಂತಾದ ಅನ್ನಗಳು ಹಳ್ಳಿ ಹಳ್ಳಿಗೂ ತಲುಪಿದೆ.
ಈ ವರುಷವಂತೂ ಕೊರೋನಾ ದ ಹಿನ್ನಲೆಯಲ್ಲಿ ಯಾವ ಸಮಾರಂಭಗಳೂ ನಡೆದಿಲ್ಲ. ನಡೆಸಿದವರು ಊಟಕ್ಕೆ ಕರೆದಿಲ್ಲ. ಕರೆದರೂ ಹೋಗಲು ೫೪ ಇಂಚಿನ ಎದೆ ನಮಗಿಲ್ಲ.
ಕಳೆದ ನಾಲ್ಕೈದು ತಿಂಗಳಿನಿಂದ , ಈ ಕೊರೋನಾದಿಂದ , ನಮ್ಮ ಸಂಸ್ಥೆಯವರು ಮಧ್ಯಾಹ್ನದ ಭೋಜನದ ವ್ಯವಸ್ಥೆ ನಿಲ್ಲಿಸಿ ಬಿಟ್ಟಿದ್ದಾರೆ. ಮತ್ತೆ ಆರಂಭಿಸುವ ಯಾವುದೇ ಲಕ್ಷಣ ಕಾಣುತ್ತಿಲ್ಲ. ಹಾಗಾಗಿ ಇಷ್ಟು ದಿನ ಆರಾಮಾಗಿ ಊಟ ಮಾಡುತ್ತಿದ್ದ ನಾನು ಮತ್ತು ನನ್ನ ಸಹದ್ಯೋಗಿಗಳು, ಡಬ್ಬಾವಾಲಗಳಾಗಿ ಬಿಟ್ಟಿದ್ದೇವೆ. ಹೆಚ್ಚಿನ ದಿನಗಳಲ್ಲಿ, ಈ ಡಬ್ಬದಲ್ಲಿ ಇರುವುದೇ ಚಿತ್ರಾನ್ನ…! ಅಥವಾ ಅದರ ಇನ್ಯಾವುದೋ ರೂಪ.
ಅಷ್ಟರಮಟ್ಟಿಗೆ ಚಿತ್ರಾನ್ನಕ್ಕೆ ಸ್ಟಾರ್ ವ್ಯಾಲ್ಯೂ ಕೊಟ್ಟಿದೆ ಬೆಂಗಳೂರು ಹಾಗು ಸುತ್ತಮುತ್ತಲಿನ ಊರುಗಳು. ಹಾಗಾಗಿ ಚಿತ್ರಾನ್ನ ಎಲ್ಲರ ಮೆಚ್ಚಿನ ಪರಮಾನ್ನ…!