ಮನೆ ಕೆಲಸ ತಾನೇ!! ಏನು ಮಹಾ ಅಲ್ವಾ ?

ಕಥೆ : ಶ್ರೀನಾಥ್ ಹರದೂರ ಚಿದಂಬರ 

ಬೆಳಿಗ್ಗೆ ೫:೩೦ಕ್ಕೆ ಅಲಾರಾಂ ಶಬ್ದ ಮಾಡಲು ಶುರು  ಮಾಡಿತು. ಅವಳು ಎಂದಿನಂತೆ ಎದ್ದು ಅಲಾರಾಂ ಆಫ್ ಮಾಡಿ  ದೇವರಿಗೆ ನಮಸ್ಕರಿಸಿ ಮಂಚದಿಂದ ಇಳಿದು ಬಚ್ಚಲು ಮನೆಗೆ   ಹೋದಳು.  ನಿತ್ಯ  ಕರ್ಮಗಳನ್ನು ಮುಗಿಸಿಕೊಂಡು ಅಡುಗೆ ಮನೆಗೆ ಹೋಗಿ ಬೆಳಗ್ಗಿನ ತಿಂಡಿ, ಹಾಗು ಮಕ್ಕಳಿಗೆ ಮತ್ತು ಗಂಡನಿಗೆ ಮದ್ಯಾಹ್ನದ  ಊಟಕ್ಕೆ ಅಡುಗೆ ಮಾಡಲು ಶುರು ಹಚ್ಚಿಕೊಂಡಳು. ಸಮಯ ಜಾರುತ್ತಿತ್ತು, ಆಗಾಗ ಗಡಿಯಾರದ ಕಡೆ ನೋಡುತ್ತಾ ತಿಂಡಿ ತಯಾರು ಮಾಡಿದಳು. ಆಮೇಲೆ ಕೋಣೆಗೆ ಹೋಗಿ  ಮಗನನ್ನು ಎಬ್ಬಿಸಿ ರೆಡಿ ಆಗಲು ಹೇಳಿ, ಮತ್ತೆ ಅಡುಗೆ ಮನೆಗೆ ಹೋಗಿ ಮಧ್ಯಾಹ್ನದ ಅಡುಗೆ ಶುರು ಹಚ್ಚಿಕೊಂಡಳು. ಕಣ್ಣುಗಳು ಮಾತ್ರ ಗಡಿಯಾರದ ಕಡೆ ಆಗಾಗ ಹೊರಳುತ್ತಿತ್ತು.  ಮಗ ಸ್ನಾನ ಮುಗಿಸಿಕೊಂಡು ಬಂದಿದ್ದನ್ನು ನೋಡಿ,  ಮತ್ತೆ ಕೋಣೆಗೆ ಹೋಗಿ ಮಗಳನ್ನು ಎಬ್ಬಿಸಿದಳು. ಅವಳು ರೆಡಿ ಆಗಿ ಬರುವದೊರಳಗೆ ಅಡುಗೆ ಕೆಲಸ ಮುಗಿಸಿದ್ದಳು. ನಂತರ ಗಂಡನನ್ನು ಎಬ್ಬಿಸಿದಳು.  ಸಮಯ ಆಗಲೇ ೭:೩೦ ಆಗಿತ್ತು. ಮಗಳಿಗೆ ತಲೆ ಬಾಚಿ,  ಶಾಲೆಯ ಸಮವಸ್ತ್ರ ಹಾಕಿ ತಿಂಡಿ ತಿನ್ನಿಸಲು ಶುರು ಮಾಡಿದಳು. ಮಗಳು ತಿಂದು ಮುಗಿಸುವುದರಲ್ಲಿ  ಮಗ ತಿಂಡಿ ತಿಂದು ಶಾಲೆಗೆ ರೆಡಿ ಆಗಿ ನಿಂತಿದ್ದ. ಅಷ್ಟರಲ್ಲಿ ಶಾಲೆಯ ಬಸ್ಸಿನ ಹಾರ್ನ್ ಕೇಳಿತು.  ಓಡಿ  ಹೋಗಿ ಮಕ್ಕಳನ್ನು ಬಸ್ ಹತ್ತಿಸಿ ವಾಪಸು ಬರುವಷ್ಟರಲ್ಲಿ ಗಂಡ ಸ್ನಾನ ಮಾಡಿ ಆಫೀಸ್ಗೆ  ರೆಡಿ ಆಗಿದ್ದ.  ಅವನು ತಿಂಡಿ  ತಿನ್ನುವುದರಲ್ಲಿ ಊಟದ ಬಾಕ್ಸ್  ರೆಡಿ ಮಾಡಿ  ತಂದಳು. ಅವನು ಊಟದ ಬಾಕ್ಸ್ ಮತ್ತು ಆಫೀಸ್ ಬ್ಯಾಗ್ ತೆಗೆದು ಕೊಂಡು ಬೈಕಿನಲ್ಲಿ ಆಫೀಸ್ ಗೆ ಹೊರಟುಹೋದ. ಸಮಯ ೮ ಗಂಟೆ ಆಗಿತ್ತು. ಅಡುಗೆ ಮನೆ ಸ್ವಚ್ಛ ಮಾಡಿ, ಎಲ್ಲ ಪಾತ್ರೆ ತೊಳೆದು ತಿಂಡಿ ತಿನ್ನಲು ಶುರು ಮಾಡುವಾಗ ಸಮಯ ೯ ಗಂಟೆ ಆಗಿತ್ತು. ಅವಳ ದಿನಚರಿಯ ಮೊದಲ  ಘಟ್ಟ ಮುಗಿದಿತ್ತು. 

ಅವಳ ತಿಂಡಿ ತಿಂದು ಸ್ವಲ್ಪ ಸುಧಾರಿಸಿಕೊಂಡು ಮನೆ ಸ್ವಚ್ಛ ಮಾಡಿ, ಬಟ್ಟೆ ತೊಳೆದು, ಸ್ನಾನ ಮಾಡುವಷ್ಟರಲ್ಲಿ ಸಮಯ ೧೨ ಗಂಟೆ ಆಗಿತ್ತು. ದೇವರ ಪೂಜೆ ಮುಗಿಸಿಕೊಂಡು ಬಂದು ಅವತ್ತಿನ ದಿನ ಪತ್ರಿಕೆ ಓದುವಷ್ಟರಲ್ಲಿ ಸಮಯ ಒಂದು ವರೆ ಆಗಿತ್ತು. ಒಬ್ಬಳೇ ಕುಳಿತು ಊಟ ಮಾಡಿದಳು.  ಊಟ ಮಾಡಿದ ನಂತರ ಹೊರಗಡೆ ಬಾಲ್ಕನಿಯಲ್ಲಿ ಬೆಳೆಸಿದ ಗಿಡಗಳಿಗೆ ನೀರು ಹಾಕಿ, ಹೂ ಗಿಡಗಳ ಆರೈಕೆ ಮಾಡುತ್ತಾ ಸ್ವಲ್ಪ ಹೊತ್ತು ಅವುಗಳ ಜೊತೆ ಕಾಲ ಕಳೆದಳು.  ದಿನಚರಿಯ ಎರಡನೇ ಘಟ್ಟ ಮುಗಿದಿತ್ತು. 

ಸಮಯ ಮೂರು ಗಂಟೆ ಆಗಿತ್ತು. ಮಕ್ಕಳು ಬರುವ ಹೊತ್ತಿಗೆ ಅವರಿಗೆ ತಿನ್ನಲು ಏನಾದರು ಮಾಡಲು ಅಡುಗೆ ಮನೆಗೆ ಹೋದಳು. ಅವಳು ತಿಂಡಿ ರೆಡಿ ಮಾಡಿಟ್ಟು  ಮಕ್ಕಳನ್ನು ಕರೆದುಕೊಂಡು ಬರಲು ಶಾಲೆಯ ಬಸ್ ಬರುವ ಜಾಗಕ್ಕೆ ಬಂದಳು. ಬಂದ  ಐದು ನಿಮಿಷಕ್ಕೆ ಶಾಲೆಯ ಬಸ್ ಬಂದಿತು. ಮಕ್ಕಳನ್ನು ಕರೆದುಕೊಂಡು ಮನೆಗೆ ಬಂದಳು. ಮಕ್ಕಳು ಕೈ ಕಾಲು ತೊಳೆದುಕೊಂಡು ಬರುವಷ್ಟರಲ್ಲಿ ಅವಳು ಮಾಡಿದ ತಿಂಡಿ ತಂದು ಕೊಟ್ಟಳು. ಮಕ್ಕಳು ತಿಂಡಿ ತಿಂದು,  ಸ್ವಲ್ಪ ಹೊತ್ತು ಆಟ ಆಡಿ  ಓದಲು ಕುಳಿತರು. ಅವಳು ಕೂಡ ಅವರೊಡನೆ ಕುಳಿತಳು. ಅವರಿಬ್ಬರ ಹೋಂ ವರ್ಕ್ ಮಾಡಿಸಿ, ಓದಿಸಿ ಮುಗಿಸುವ ಹೊತ್ತಿಗೆ ಅವಳ ಗಂಡ ಆಫೀಸ್ ಕೆಲಸ ಮುಗಿಸಿಕೊಂಡು ಮನೆಗೆ ಬಂದನು. ಸಮಯ ೬:೩೦ ಆಗಿತ್ತು.  ಅವನಿಗೆ  ಕಾಫಿ ಜೊತೆಯಲ್ಲಿ ಮಕ್ಕಳಿಗೆ ಮಾಡಿದ ತಿಂಡಿಯನ್ನು  ಕೊಟ್ಟಳು.  ಅವಳು ಕೂಡ ಅವನ ಜೊತೆಯಲ್ಲಿ ಕಾಫಿ ಕುಡಿದಳು. ಸ್ವಲ್ಪ ಹೊತ್ತು ಗಂಡನ ಜೊತೆಯಲ್ಲಿ ಮಾತನಾಡಿ ಮತ್ತೆ ಅಡುಗೆ ಮನೆಗೆ ಹೋಗಿ ಕಾಫಿ ಲೋಟ, ತಿಂಡಿ ತಿಂದ ತಟ್ಟೆಗಳನ್ನು ತೊಳೆದು ಇಟ್ಟಳು. ಹೊರಗಡೆ ಹೋಗಿ ಒಣಗಿದ ಬಟ್ಟೆಗಳನ್ನು ತಂದು ಅದನ್ನು ಮಡಚಿಟ್ಟು , ರಾತ್ರಿ ಊಟಕ್ಕೆ ಅಡುಗೆ ಮನೆಗೆ ಕಾಲಿಟ್ಟಳು.  ದಿನಚರಿಯ ಮೂರನೇ ಘಟ್ಟ ಮುಗಿದಿತ್ತು. 

ರಾತ್ರಿ ಊಟಕ್ಕೆ ಚಪಾತಿ ಪಲ್ಯೆ  ಮಾಡಿ ಮುಗಿಸುವ  ವೇಳೆಗೆ ರಾತ್ರಿ ೮:೩೦ ಆಗಿತ್ತು.  ಅವಳು ಎಲ್ಲರನ್ನು ಊಟಕ್ಕೆ ಕರೆದಳು. ಎಲ್ಲರು   ಒಟ್ಟಿಗೆ ಜೊತೆಯಲ್ಲಿ ಕೂತು  ಊಟ ಮಾಡಿ ಮುಗಿಸಿದರು.  ಗಂಡ ಮಕ್ಕಳು ಊಟ ಮಾಡಿ ಟಿವಿ ನೋಡಲು ಕುಳಿತರು . ಅವಳು ಮತ್ತೆ ಅಡುಗೆ ಮನೆಗೆ ಹೋಗಿ ಊಟ ಮಾಡಿದ ಪಾತ್ರೆಗಳನ್ನೆಲ್ಲ ತೊಳೆದು, ಅಡುಗೆ ಮನೆಯಲ್ಲ ಸ್ವಚ್ಛ ಮಾಡುವ ಹೊತ್ತಿಗೆ ರಾತ್ರಿ ೯:೩೦ ಆಗುತ್ತಾ ಬಂದಿತ್ತು. ಮಕ್ಕಳಿಗೆ ಹಾಲು ಬಿಸಿ ಮಾಡಿ ತಂದು ಕೊಟ್ಟಳು. ಮಕ್ಕಳು ಹಾಲು ಕುಡಿದ ಮೇಲೆ ಲೋಟಗಳನ್ನು  ತೊಳೆದಿಟ್ಟಳು. ಗಂಡ ಮತ್ತು ಮಕ್ಕಳು ಸ್ವಲ್ಪ ಹೊತ್ತು ಟಿವಿ ನೋಡಿ, ರಾತ್ರಿ ೧೦ ಗಂಟೆಗೆ ಮಲಗಲಿಕ್ಕೆ ಹೋದರು. ಅವಳು  ಮಾರನೇ ದಿವಸಕ್ಕೆ ತಿಂಡಿ ಮತ್ತು ಮಧ್ಯಾಹ್ನ  ಊಟಕ್ಕೆ ಬೇಕಾದ ತಯಾರಿ ಮಾಡಲು ಅಡುಗೆ ಮನೆಗೆ ಹೋದಳು. ತಯಾರಿ ಮುಗಿಸಿ, ಮಕ್ಕಳ ಸಮವಸ್ತ್ರ, ಶೂ, ಟೈ ಮತ್ತು ಸಾಕ್ಸ್ ಎಲ್ಲ ರೆಡಿ ಮಾಡಿಟ್ಟಳು. ದಿನಚರಿಯ  ನಾಲ್ಕನೇ ಘಟ್ಟ ಮುಗಿದಿತ್ತು. 

ಅಷ್ಟರಲ್ಲಿ ಗಂಡ ಮಕ್ಕಳನ್ನು ಮಲಗಿಸಿ ಹೊರಗಡೆ ಬಂದನು. ಅವಳು ಗಂಡನಿಗೆ  ನಾಡಿದ್ದು ಶಾಲೆಯಲ್ಲಿ ಪೇರೆಂಟ್ ಮೀಟಿಂಗ್ ಇದೆ,  ನಾಳೆ ಎಲೆಕ್ಟ್ರಿಸಿಟಿ ಬಿಲ್ ಕಟ್ಟಲಿಕ್ಕೆ ಕೊನೆ ದಿವಸ, ರೇಷನ್ ಮುಗಿಯುತ್ತ  ಬಂದಿದೆ, ನಾಳೆ ಆಫೀಸಿನಿಂದ ಬರಬೇಕಾದರೆ ತನ್ನಿ ಎಂದಳು. ಅದನ್ನೆಲ್ಲಾ ಕೇಳಿಸಿಕೊಂಡ ಗಂಡ ಎಲ್ಲ ನಾನೇ ಮಾಡಬೇಕಾ,  ಆಫೀಸ್ನಲ್ಲಿ ಎಷ್ಟು ಕೆಲಸ ಇರುತ್ತೆ ಗೊತ್ತಾ ? ಮುಗಿಸೋ ಹೊತ್ತಿಗೆ ಸಾಕಾಗಿ ಹೋಗಿರುತ್ತೆ.  ನಿನಗೆಲ್ಲ ಇವೆಲ್ಲ ಎಲ್ಲಿ ಗೊತ್ತಾಗುತ್ತೆ,  ಮನೇಲೆ ನಿನಗೇನೂ ಕೆಲಸ ಇರುತ್ತೆ, ಆರಾಮಾಗಿ ಕೂತಿರ್ತೀಯ,  ಬರಿ ಮನೆ ಕೆಲಸ ತಾನೇ, ಏನ್ ಮಹಾ ಕೆಲಸ ಇರುತ್ತೆ,    ಮನೇಲೆ ಸುಮ್ಮನೆ ಕೂರೋ ಬದಲು,  ಸ್ವಲ್ಪ ಈ ಕೆಲಸಾನು ಮಾಡು ಅಂತ ಅಂದನು.   ಅವಳು ಏನು ಮಾತನಾಡದೆ ಆಯಿತು ನಾನೇ ಮಾಡ್ತೀನಿ ಬಿಡಿ ಅಂದು ಮಲಗಲು ಹೊರಟಳು.  ರಾತ್ರಿ ೧೧ ಗಂಟೆ ಆಗುತ್ತಾ ಬಂದಿತ್ತು. ದಿನಚರಿಯ ಐದನೇ ಘಟ್ಟ ಮುಗಿದಿತ್ತು. 

ಅವನ ಮಾತುಗಳನ್ನು  ಕೇಳಿಸಿಕೊಂಡ  ಅಡುಗೆಮನೆಯ ಗ್ಯಾಸ್ ಸ್ಟವ್,  ಪಾತ್ರೆಗಳು,  ಸಿಂಕ್,  ಕಸಬರಿಗೆ,  ನೆಲ ಒರೆಸುವ ಬಟ್ಟೆ,  ಬಟ್ಟೆ ಒಗೆಯುವ ಕಲ್ಲು,  ಒಗೆದು, ಒಣಗಿಸಿ  ಮಡಚಿಟ್ಟ ಬಟ್ಟೆಗಳು, ಬಾಲ್ಕನಿಯಲ್ಲಿದ್ದ ಗಿಡಗಳು ಕೇಳಿಸಿಕೊಂಡು ನಕ್ಕವು. 

ಮರು ದಿನ ಬೆಳಿಗ್ಗೆ ೫:೩೦ಕ್ಕೆ ಮತ್ತೆ  ಅಲಾರಾಂ ಶಬ್ದ ಮಾಡಲು ಶುರು  ಮಾಡಿತು…. 

ಮನೆ ಕೆಲಸ ತಾನೇ ಏನ್ ಮಹಾ !!

6 thoughts on “ಮನೆ ಕೆಲಸ ತಾನೇ!! ಏನು ಮಹಾ ಅಲ್ವಾ ?

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s