ಗೀಜಗದ ಗೂಡು ಮತ್ತು ಬೇಲಿ

ಛಾಯಾಚಿತ್ರಣ : ಪ್ರಜ್ಞಾ ಹೆಚ್ ಪಿ  

ಕಥೆ  : ಶ್ರೀನಾಥ್ ಹರದೂರ ಚಿದಂಬರ 

ಪ್ರತಿ ದಿನ  ಬಿಸಿಲು ಇಳಿಯುವ ಹೊತ್ತಿಗೆ ಅವಳು ಹಳ್ಳದ ಹತ್ತಿರ ಬಂದು ಕೂರುತ್ತಿದ್ದಳು.  ತಣ್ಣಗೆ ಹರಿಯುವ ನೀರಿನಲ್ಲಿ ತನ್ನ ಕಾಲನ್ನು ಇಟ್ಟುಕೊಂಡು, ಕಾಲಿಗೆ ಸಣ್ಣ ಸಣ್ಣ ಮೀನುಗಳು ಬಂದು ಮುತ್ತಿಕ್ಕುವುದನ್ನೇ ನೋಡುತ್ತಾ ಕುಳಿತರೆ ಕಾಲ ಕಳೆಯುವುದೇ  ಅವಳಿಗೆ ಗೊತ್ತಾಗುತ್ತಿರಲಿಲ್ಲ.  ನೀರಿನ ಜುಳು ಜುಳು ಶಬ್ದ , ಪಕ್ಷಿಗಳ ಚಿಲಿಪಿಲಿ  ಅವಳನ್ನು ಯಾವುದೋ ಸುಂದರ ಲೋಕಕ್ಕೆ ಕರೆದುಕೊಂಡ ಹಾಗೆ ಅನಿಸುತಿತ್ತು.  ಆದರೆ ಒಂದು ತಿಂಗಳಿನಿಂದ ಅವಳ ಗಮನ ಪೂರ್ತಿ ಹಳ್ಳದ ಇನ್ನೊಂದು ಬಾಗದಲ್ಲಿ ಗೀಜಗ ಪಕ್ಷಿ ಕಟ್ಟುತ್ತಿದ್ದ ಗೂಡಿನ ಕಡೆ ಇತ್ತು. ಗೀಜಗದ ಗೂಡು ಮುಗಿಯುವ ಹಂತಕ್ಕೆ ಬಂದು ನಿಂತಿತ್ತು. ಹಳ್ಳದ ಇನ್ನೊಂದು ಬದಿಯಲ್ಲಿ ತುಂಬಾ ನೀರಿದ್ದ ಕಾರಣ ಅಲ್ಲಿಗೆ ಹೋಗಲು ಆಗುತ್ತಿರಲಿಲ್ಲ.   ನೀರಿನಿಂದ ಕೆಲವೇ ಅಡಿಗಳಷ್ಟು ಮೇಲೆ, ನೀರಿಗೆ ಬಾಗಿದ ಬಿದಿರಿಗೆ  ಗೂಡು ನೇತಾಡುತಿತ್ತು. ಗೂಡಿನ ಒಳಗಡೆ ಹೋಗಿ ಬರುವ ಗೀಜಗವನ್ನು ನೋಡುತ್ತಾ, ಗೂಡಿನ ಒಳಗಡೆ ಅವು ಏನು ಮಾಡಬಹುದು ಅಂತ ಕಲ್ಪನೆ  ಮಾಡುತ್ತಾ ಕುಳಿತುಕೊಳ್ಳುತ್ತಿದ್ದಳು. ಎಂದಿನಂತೆ ಅವತ್ತು ಕೂಡ, ಸ್ವಲ್ಪ ಹೊತ್ತು ಹಳ್ಳದ ಬಳಿ ಸಮಯ ಕಳೆದು,  ಇನ್ನೇನು ಕೆಲವೇ ದಿನಗಳಲ್ಲಿ ಗೂಡು ಸಂಪೂರ್ಣವಾಗಿ ಮುಗಿಯುತ್ತದೆ, ಒಂದು ವಾರ ಕಾಲೇಜಿನಲ್ಲಿ ಪರೀಕ್ಷೆ ಇದೆ, ಮುಗಿಸಿ ಬರುವ ಹೊತ್ತಿಗೆ ಮೊಟ್ಟೆ ಕೂಡ ಇಟ್ಟಿರುತ್ತವೆ ಅಂದುಕೊಳ್ಳುತ್ತ ಮನೆ ದಾರಿ ಹಿಡಿದಳು. 

ಒಂದು ವಾರ ಪರೀಕ್ಷೆಯ ಸಿದ್ದತೆಯಲ್ಲಿ ಸಮಯ ಹೋಗಿದ್ದೆ ಗೊತ್ತಾಗಲಿಲ್ಲ. ಪರೀಕ್ಷೆ ಮುಗಿದ ದಿನವೇ ಅವಳು ಹಳ್ಳದ ಕಡೆ ಹೊರಟಳು. ಗೀಜಗ ಗೂಡು ಕಟ್ಟಿ, ಮೊಟ್ಟೆ ಇಟ್ಟಾಗಿದಿಯೋ ಏನೋ, ನೋಡಲಿಕ್ಕೆ ಆಗುತ್ತದೆಯೋ ಇಲ್ಲವೊ ಅಂತೆಲ್ಲ ಅಂದುಕೊಳ್ಳುತ್ತ ಹಳ್ಳದ ಹತ್ತಿರ ಬಂದಳು. ಅಲ್ಲಿನ ದೃಶ್ಯ ನೋಡಿ  ಅವಳ ಹೃದಯ ಒಡೆದಂತಾಯಿತು. ಅಲ್ಲಿ ಗೀಜಗದ ಗೂಡಿರಲಿ , ಅದು ಗೂಡು  ಕಟ್ಟುತ್ತಿದ್ದ ಬಿದಿರಿನ ಕುರುಹು ಕೂಡ  ಇರಲಿಲ್ಲ. ಅವಳು ಶತಪಥ ಈ ಕಡೆ ದಡದಲ್ಲಿ ಓಡಾಡತೊಡಗಿದಳು. ಏನಾಯ್ತು ಅಂತ ಹೇಳಲಿಕ್ಕೆ ಯಾರು ಇರಲಿಲ್ಲ.  ಕಣ್ಣಲ್ಲಿ ನೀರು ಜಿನುಗ ತೊಡಗಿತ್ತು. ಗೀಜಗದ ಹಕ್ಕಿಗಳನ್ನು  ನೋಡುತ್ತಾ ಅವುಗಳ ಜೊತೆಗೆ ಭಾವನಾತ್ಮಕ ಸಂಬಂಧ ಬೆಳೆದಿತ್ತು. ಅವುಗಳು ಕಟ್ಟಿಕೊಳ್ಳಿತ್ತಿರುವ ಮನೆಯನ್ನು ತನ್ನ ಮನೆ ಅಂತಲೇ ಅಂದುಕೊಂಡಿದ್ದಳು. ಒಮ್ಮೆಲೇ ಪ್ರವಾಹ ನುಗ್ಗಿಬಂದು ಎಲ್ಲವನ್ನು ಕೊಚ್ಚಿಕೊಂಡು ಹೋದ ಅನುಭವ ಆಗತೊಡಗಿ ಅತ್ತ ಇತ್ತ ಹುಡುಕತೊಡಗಿದಳು.  ಅದೇ ಜಾಗವ ಅಥವಾ ಬೇರೆ ಕಡೆ ಏನಾದರು ಬಂದೇನ ಅಂತ ಮತ್ತೆ ಮತ್ತೆ ಖಚಿತ ಪಡಿಸಿಕೊಂಡಳು.  ಜಾಗ ಅದೇ ಆಗಿತ್ತು ಆದರೆ ಗೀಜಗದ ಗೂಡು ಇರಲಿಲ್ಲ. ಸ್ವಲ್ಪ ದೂರದಲ್ಲಿ ಏನೋ ಬಿದ್ದಿರುವ ಹಾಗೆ ಕಾಣಿಸಿತು. ಹತ್ತಿರ ಹೋಗಿ ನೋಡಿದರೆ ಅದು ಗೀಜಗದ ಗೂಡಾಗಿತ್ತು. ನೀರಿನಲ್ಲಿ ತುಂಬ ದಿನ ಬಿದ್ದುದ್ದರಿಂದ ಏನೋ ಗೂಡು ಪೂರ್ತಿ ಹರಿದು ಹೋಗಿತ್ತು. ಅದನ್ನು ನೋಡಿ ಅವಳಿಗೆ ದುಃಖ ಉಮ್ಮಳಿಸಿ ಬಂದು  ಜೋರಾಗಿ ಕೂಗಬೇಕೆನಿಸಿತು. ಆ ಗೂಡನ್ನು ಕೈಯಲ್ಲಿ ಹಿಡಿದುಕೊಂಡು ಅಳುತ್ತ ಮನೆ ಕಡೆ ಹೊರಟಳು. 

ಮನೆಗೆ ಬರುವಷ್ಟರಲ್ಲಿ ಮನಸ್ಸು ಭಾರವಾಗಿ ಏನು ಬೇಡವಾಗಿತ್ತು. ಕೈಯಲ್ಲಿ ಗೂಡನ್ನು ಹಿಡಿದುಕೊಂಡು ಮನೆಯ ವರಾಂಡದಲ್ಲಿ ಕುಳಿತಳು. ಅಷ್ಟರಲ್ಲಿ ಅವಳ ಅಪ್ಪ ಮನೆಯಾ ಒಳಗಡೆಯಿಂದ ಬಂದು ಅವಳ ಹತ್ತಿರ ಪರೀಕ್ಷೆ ಹೇಗಾಯಿತು ಅಂತ ಕೇಳಿದರು. ಅವಳು ಚೆನ್ನಾಗಿ ಆಯಿತು ಅಂದಳು.  ಮನೆ ಹಿತ್ತಲಿನಲ್ಲಿ ನಿನ್ನ ಹೂವಿನ ತೋಟಕ್ಕೆ ಬೇಲಿ ಹಾಕಿಸುತ್ತ  ಇದ್ದೇನೆ,  ನೋಡಲ್ವಾ ? ಅಂತ ಕೇಳಿದರು.  ಅವಳು ಪರೀಕ್ಷೆಯ ಗಡಿಬಿಡಿಯಲ್ಲಿ ನೋಡಲಾಗಲಿಲ್ಲ, ಈಗ ನೋಡುತ್ತೇನೆ ಅಂದಳು. ಅವಳು ಬೆಳೆಸುತ್ತಿದ್ದ ಹೂವಿನ ತೋಟವನ್ನು ದನ ಕರುಗಳು ಬಂದು ತಿನ್ನುತಿತ್ತು,  ಹಾಗಾಗಿ ಅದಕ್ಕೆ ಬೇಲಿ ಹಾಕಿಸಿಕೊಡಿ  ಅಂತ ಯಾವಾಗಲು ಅಪ್ಪನಿಗೆ  ಕೇಳುತ್ತಿದ್ದಳು.  ಭಾರವಾದ  ಮನಸ್ಸಿನಲ್ಲಿ ಬೇಲಿ ಹಾಕಿಸುವುದನ್ನು ನೋಡಲು ಹೋದಳು. ಅಲ್ಲಿ ದೊಡ್ಡ ಬಿದಿರಿನ ರಾಶಿ ಬಿದ್ದಿತ್ತು. ಕೆಲಸದವರು  ಬಿದಿರು ಕಡಿದು ಬೇಲಿ ಹಾಕುತ್ತಿದ್ದರು.   ಬಿದಿರು ಎಲ್ಲಿಂದ ತಂದಿರಿ ಅಂತ ಕೇಳಿದಳು. ಅವರು ಹಳ್ಳದ ಹತ್ತಿರ ಒಳ್ಳೆ ಬಿದಿರು ಬೆಳೆದಿತ್ತು ಅದನ್ನು ಮೊನ್ನೆ ಕಡಿದು ತಂದ್ವಿ ಅಂದರು. ಅವರು ಹೇಳಿದ್ದನ್ನು  ಕೇಳಿ ಅವಳು ಅಲ್ಲಿಯೇ ಕುಸಿದು ಕುಳಿತಳು. ಅವಳ ಕಿವಿಯ ಹತ್ತಿರ ಗೀಜಗದ ಹಕ್ಕಿಗಳು ನೋವಿನಿಂದ ಕೂಗುತ್ತಿರುವ  ಆಕ್ರಂದನ  ಕೇಳತೊಡಗಿತು. 

6 thoughts on “ಗೀಜಗದ ಗೂಡು ಮತ್ತು ಬೇಲಿ

  1. ಮನುಷ್ಯನ ಸ್ವಾರ್ಥದ ಮುಂದೆ ಎಲ್ಲ ನಗಣ್ಯ.. ಧನ್ಯವಾದಗಳು.. ಮನಸ್ಸಿಗೆ ನಾಟುವಂತೆ ಬರೆದಿದ್ದೀರಿ.🙏

    Like

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s