ರಂಗೋಲಿ ಮತ್ತು ಇಯರ್ ಫೋನ್!!

 

ಛಾಯಾಚಿತ್ರಣ: ಕೀರ್ತನ್ ಭಟ್ 

ಕಿರು ಕಥೆ: ಶ್ರೀನಾಥ್ ಹರದೂರ ಚಿದಂಬರ 

 

ಆತ ಪ್ರತಿ ದಿನ ಬೆಳಿಗ್ಗೆ ತಪ್ಪದೆ ಹಾಲು ತರಲು ಅವಳ ಮನೆಯ ಮುಂದಿನಿಂದ ಹೋಗುತ್ತಿದ್ದ. ಅವಳು ಕೂಡ ಅದೇ ಸಮಯದಲ್ಲಿ ತಲೆ ಬಗ್ಗಿಸಿ ಮನೆ ಮುಂದೆ   ರಂಗೋಲಿ ಹಾಕುತ್ತ  ಕುಳಿತಿರುತ್ತಿದ್ದಳು.  ಅವಳು ಅವನನ್ನು  ನೇರವಾಗಿ ನೋಡುತ್ತಿರಲಿಲ್ಲ.  ಅವನು ಅವಳನ್ನು ನೋಡುತ್ತಾ,    ಕಿವಿಗೆ  ಇಯರ್ ಫೋನ್ ಹಾಕಿಕೊಂಡು ಯಾರದೋ ಜೊತೆ ಮಾತನಾಡುವ ಹಾಗೆ  ಅವಳ   ರಂಗೋಲಿ, ಅವಳ ಬಟ್ಟೆ , ಅವಳ ಸೌಂದರ್ಯದ ಬಗ್ಗೆ ಮಾತನಾಡುತ್ತ, ಅವಳಿಗೆ ಕೇಳುವ ಹಾಗೆ ಹೇಳುತ್ತಾ ಹೋಗುತ್ತಿದ್ದ. ಪ್ರತಿದಿನ ಅವಳು  ತನ್ನ ಮನಸ್ಸಿನ ಭಾವನೆಗಳನ್ನು ರಂಗೋಲಿಯ ಮೂಲಕ ವ್ಯಕ್ತ ಪಡಿಸುತ್ತಿದ್ದಳು.  ಅವಳು  ಹಾಕುವ ರಂಗೋಲಿ  ಮತ್ತು ಅವನು ಅವಳ ಮುಂದೆ ಇಯರ್ ಫೋನ್ ಹಾಕಿಕೊಂಡು  ಮಾತನಾಡುವುದೇ  ಅವರಿಬ್ಬರ ಮಾತುಕಥೆಯಾಗಿತ್ತು.  ಅನೇಕ ದಿನಗಳಿಂದ  ಪರಸ್ಪರ ರಂಗೋಲಿ ಮತ್ತು ಇಯರ್ ಫೋನ್ ಮಾತುಕತೆ ನಡೆದಿತ್ತು.  ಅವತ್ತು ಎಂದಿನಂತೆ ಅವಳು ರಂಗೋಲಿ ಹಾಕುತ್ತ ಅವನಿಗೋಸ್ಕರ ಕಾಯುತ್ತಿದ್ದಳು. ಆದರೆ ಅವತ್ತು ಅವನು ಬರಲಿಲ್ಲ. ಮರುದಿನವೂ ಬರಲಿಲ್ಲ. ಹದಿನೈದು  ದಿನಗಳು ಕಳೆದರು,  ಅವನ ಸುಳಿವಿರಲಿಲ್ಲ. ಅವಳ  ರಂಗೋಲಿ ಕಳೆಗುಂದಿತ್ತು. ಅವನು  ವಾಪಸು ಬಂದೆ ಬರುತ್ತಾನೆ ಅನ್ನುವ ನಂಬಿಕೆಯಿಂದ ಅವಳು   ರಂಗೋಲಿ ಹಾಕುವುದನ್ನು ನಿಲ್ಲಿಸಲಿಲ್ಲ. ಹದಿನಾರನೇ ದಿವಸ ಎಂದಿನಂತೆ ರಂಗೋಲಿ ಹಾಕುತ್ತ ಇದ್ದಳು. ಆಗ ದೂರದಲ್ಲಿ ಬಹಳ ಪರಿಚಯವಿದ್ದ ಧ್ವನಿ ಕೇಳಿಸಿತು.   ಅವಳ ಮುಖ ಅರಳಿತು, ಮನಸ್ಸು ಸಂತೋಷದಿಂದ ಹುಚ್ಚೆದ್ದು ಕುಣಿಯಿತು. ಯಾವತ್ತೂ ತಲೆ ಎತ್ತದವಳು ತಲೆ ಎತ್ತಿ ನೋಡಿದಳು. ಅವನು ಬರುತ್ತಿದ್ದ,  ಅವನ ಜೊತೆಯಲ್ಲಿ ಮತ್ತೊಂದು ಹುಡುಗಿ  ಕೂಡ ಬರುತ್ತಿದ್ದಳು. ಅವಳ ಕೈಯಲ್ಲಿ ಹಾಕಿದ ಮದರಂಗಿ ಎದ್ದು ಕಾಣುತ್ತಿತ್ತು.  ಮದರಂಗಿ ಅವರಿಬ್ಬರ ಮದುವೆಯ   ಕಥೆ  ಹೇಳುತ್ತಿತ್ತು.  ಇಂದು  ಅವನಿಗೆ  ಇಯರ್ ಫೋನ್ ಅವಶ್ಯಕತೆ ಇರಲಿಲ್ಲ. ಈ ದಿನ  ಅವನು ನೇರವಾಗಿ  ಮಾತನಾಡುತ್ತಿದ್ದ.   ಆದರೆ ಅವನ ಮಾತುಗಳು  ಅವಳಿಗಾಗಿರಲಿಲ್ಲ. ಅವನು ಮತ್ತು ಆ ಹುಡುಗಿ ಇಬ್ಬರು  ಮಾತನಾಡುತ್ತ ಅವಳನ್ನು ದಾಟಿ ಹೋದರು. ಅವಳ ಕಣ್ಣಂಚಿನಲ್ಲಿ ನೀರು ತುಂಬಿತ್ತು.  ಯಾರಿಗೂ ಕಾಣಬಾರದೆಂದು  ಮತ್ತೆ ರಂಗೋಲಿ ಹಾಕುವ ನೆಪದಲ್ಲಿ  ತಲೆ ಬಗ್ಗಿಸಿದಳು.  ರಂಗೋಲಿ ಮೇಲೆ ಆ ಹುಡುಗಿಯ ಹೆಜ್ಜೆ ಗುರುತು ಬಿದ್ದಿತ್ತು.  ಅವಳು ರಂಗೋಲಿಯ ಪ್ರಪಂಚಕ್ಕೆ ಬೇರೆಯವರು ಕಾಲಿಟ್ಟಿದ್ದರು.  ಅವಳು ಅಲ್ಲಿಂದ ಎದ್ದು ಮನೆ ಒಳಗಡೆ ಹೋದಳು.  ರಂಗೋಲಿ ಅಪೂರ್ಣವಾಗಿತ್ತು. 

One thought on “ರಂಗೋಲಿ ಮತ್ತು ಇಯರ್ ಫೋನ್!!

Leave a reply to kamala Belagur Cancel reply