ಮದಿರೆಯ ಮತ್ತಿನಲ್ಲಿ…….. ಮತ್ತಿನ ಮಾತುಗಳು..

ಬರಹಗಾರರು :  ಶ್ರೀನಾಥ್ ಹರದೂರ ಚಿದಂಬರ 

ವಿಷಯ ಸೂಚನೆ:  ಕಡ್ಡಾಯವಾಗಿ  ಮದ್ಯಪಾನ ಮಾಡುವವರಿಗೆ ಮಾತ್ರ ಸಂಬಂಧಪಟ್ಟಿರುತ್ತದೆ. 

ಆರೋಗ್ಯ ಸಂಬಂಧ ಪಟ್ಟ ಸೂಚನೆ:  ಮದ್ಯಪಾನ  ಆರೋಗ್ಯಕ್ಕೆ ಹಾನಿಕಾರಕ. 

ವಾರಾಂತ್ಯದಲ್ಲಿ ಪಾರ್ಟಿಗೆ   ಸ್ನೇಹಿತರ  ದೊಡ್ಡ ಗುಂಪೇ ಸೇರಿತ್ತು.  ಮದ್ಯಪಾನ ಮಾಡುವವರು ಹಾಗು ಮಾಡದವರು ಎಲ್ಲರು ಸೇರಿದ್ದರು.  ಮದ್ಯಪಾನ ಮಾಡುವವರ ಗುಂಪಿನಲ್ಲಿ  ಆಗಲೇ ಒಂದು  ಸುತ್ತು ಮುಗಿದಿತ್ತು.  ವೈಯುಕ್ತಿಕ ಕುಶಲೋಪರಿ ಸುತ್ತು ಮುಗಿದು ಸಾಮಾಜಿಕ ಕಳಕಳಿಯ ವಿಷ್ಯ ಆರಂಭ ಆಗಿತ್ತು.  ಆಗ ಒಬ್ಬ ಮದ್ಯಪಾನ ಮಾಡದ ಸ್ನೇಹಿತರೊಬ್ಬರು    ಕುಡಿಯುವದರಿಂದ ದೇಶಕ್ಕೆ ಏನು ಉಪಯೋಗ ಇಲ್ಲ , ಏನಕ್ಕೆ ಕುಡಿತೀರೋ  ಅಂತ ಅಂದಿದ್ದಕ್ಕೆ ಇನ್ನೊಬ್ಬ ಮದ್ಯಪಾನ ಮಾಡುವ ಸ್ನೇಹಿತರು ಅದಕ್ಕೆ ವಿರೋಧ ವ್ಯಕ್ತ ಪಡಿಸಿ ದೂಡ್ಡ ಭಾಷಣವನ್ನೇ ಮಾಡಲು ಶುರು ಹಚ್ಚಿಕೊಂಡರು. 

ಅವರು  ಬಾಟಲಿಯನ್ನೇ ಮೈಕ್ ತರಹ ಹಿಡಿದು ನಿಂತು ಬಾಷಣ ಶುರು ಮಾಡಿದರು. 

ನನ್ನ ಮದ್ಯಪಾನ ಮಿತ್ರರೇ ಹಾಗು ಪಕ್ಕದಲ್ಲಿ ಕಂಪನಿಗೆ ಅಂತ ಕುಳಿತು ಮದ್ಯಪಾನ ಮಾಡದೆ ಬರಿ ಸ್ನ್ಯಾಕ್ ಕಾಲಿ ಮಾಡುವ ಸ್ನೇಹಿತರೆ,

ಮೊದಲಿಗೆ ನಿತ್ಯ ಮದ್ಯಪಾನ  ಮಾಡುವವರಿಗೆ ಒಂದು ಸಣ್ಣ ಗೌರವ ಸೂಚಿಸುತ್ತ ,  ಕೇವಲ ವಾರಾಂತ್ಯದಲ್ಲಿ ಮದ್ಯಪಾನ  ಮಾಡುವವರಿಗೆ ಪ್ರೀತಿ  ತೋರಿಸುತ್ತ ನನ್ನ ಮಾತುಗಳನ್ನು ಶುರು ಮಾಡುತ್ತೇನೆ ಎಂದು ಮಾತನಾಡಲಂಬಿಸಿದರು.  

ಮೊತ್ತ ಮೊದಲಿಗೆ ನಮ್ಮನ್ನು ಯಾರು ಕುಡುಕರು ಎಂದು ಕೇವಲವಾಗಿ  ಕರೆಯಬಾರದು ಎಂಬ ಬಗ್ಗೆ ಒಂದು ಉಗ್ರ ಹೋರಾಟ ಮಾಡುವ ಸಮಯ ಬಂದಿದೆ ಎಂದು ಹೇಳಲು ಇಚ್ಛಿಸುತ್ತೇನೆ.  ಮಧುಪಾನ ದೇವಾಧಿದೇವತೆಗಳು ಕೂಡ ಮಾಡುತ್ತಿದ್ದರು ಅಂದ ಮೇಲೆ ನಮಗೇಕೆ ಕುಡುಕರು ಎಂದು ಕೇವಲವಾಗಿ ಕರೆಯಬೇಕು  ಎಂಬುದು ನನ್ನ ಪ್ರಶ್ನೆ? ಇದರ ಬಗ್ಗೆ ನಾವೆಲ್ಲರೂ ಸೇರಿ ಒಗ್ಗಟ್ಟಾಗಿ ಹೋರಾಟ ಮಾಡಬೇಕು. ವಿಪರೀತ ಕುಡಿದು ದಾರಿಯಲ್ಲಿ ಬಿದ್ದು,  ಬೇಡದ ಅನಾಹುತ ಸೃಷ್ಟಿ ಮಾಡುವರ ಪರವಾಗಿ ನಾವು ಯಾವತ್ತಿಗೂ ನಿಲ್ಲುವುದಿಲ್ಲ. ಅದು ತಪ್ಪು,  ಕುಡಿದರೆ ದೇಹ ನಮ್ಮ ಕಂಟ್ರೋಲ್ನಲ್ಲಿ ಇರುವ ಹಾಗೆ ಕುಡಿಯಬೇಕು. ಕುಡಿಯಿರಿ ಅಂತ ಹೇಳುವ ಸರಕಾರ, ಹೇಗೆ ಕುಡಿಯಬೇಕು ಎನ್ನುವದರ ಬಗ್ಗೆ   ಒಂದು ಟ್ರೇನಿಂಗ್  ಸೆಂಟರ್ ಕೂಡ  ಶುರು ಮಾಡಬೇಕು. ಇದರ ಬಗ್ಗೆ ಸರಕಾರಕ್ಕೆ ನಾವು ಒತ್ತಾಯ ಮಾಡಬೇಕು. ನಮ್ಮಿಂದಲೇ ಸರಕಾರ ಅನ್ನುವುದನ್ನು ನಾವು ಪದೇ ಪದೇ ಸರಕಾರದ  ಕಷ್ಟ ಕಾಲದಲ್ಲಿ ನಿರೂಪಿಸಿದ್ದೇವೆ. ಕೊರೊನ ಸಮಯದಲ್ಲಂತೂ ನಾವು ಏನು,  ನಮ್ಮ ಒಗ್ಗಟ್ಟು ಏನು,  ಎಂಬುದನ್ನು ನಾವು  ಹೆಣ್ಣು ಮಕ್ಕಳ ಸಮೇತ  ಕ್ಯೂನಲ್ಲಿ ನಿಂತು   ನಿರೂಪಿಸಿದ್ದೇವೆ. ನೀವೇ ಯೋಚಿಸಿ ನೋಡಿ ನಾವು ಏನಾದರು ಕುಡಿಯುವುದನ್ನು ನಿಲ್ಲಿಸಿದರೆ ಈ ಸರಕಾರದ ಗತಿ ಏನಾಗುತ್ತದೆ ಎಂದು. 

ನಿಮಗೆ ಗೊತ್ತಿದೆಯೋ ಇಲ್ಲವೊ ಗೊತ್ತಿಲ್ಲ ಸ್ನೇಹಿತರೆ,  ನಮ್ಮಲ್ಲಿ ವಿವಿಧ ರೀತಿಯ ಮದ್ಯಪಾನಿಗಳಿದ್ದಾರೆ ಹಾಗು ಅವರವರ ಯೋಗ್ಯತೆಗೆ ಅನುಸಾರ  ದೇಶದ ಅಭಿವೃದ್ಧಿಗೆ ತಮ್ಮ ಕಾಣಿಕೆಯನ್ನು ಸಲ್ಲಿಸುತ್ತಿದ್ದಾರೆ. ನಮ್ಮ ದೇಶ ಆರ್ಥಿಕವಾಗಿ  ಗಟ್ಟಿ  ಇರಲಿಕ್ಕೆ ಈ ವಿವಿಧ ರೀತಿಯ ಮದ್ಯಪಾನಿಗಳು ಕಾರಣಕರ್ತರಾಗಿರುತ್ತಾರೆ. 

ನಿತ್ಯ ಮದ್ಯಪಾನಿಗಳು – ಇವರು ನಮ್ಮ ದೇಶದ ಬೆನ್ನೆಲುಬು ಅಂತ ಹೇಳಬಹುದು.  ತಮ್ಮ ಮನೆ ಹಾಳಾದರೂ ಸರಿ ದೇಶ ಅಭಿವೃದ್ಧಿ ಆಗಬೇಕು ಅಂತ ನಿಲುವು ಹೊಂದಿರುವವರು. ಇವರು ಖುಷಿಗೆ ಅಂತ ಕುಡಿಯುವವರಲ್ಲ , ತಮ್ಮ ಹೆಂಡತಿ ಮಕ್ಕಳ ಜವಾಬ್ಧಾರಿ ಮರೆತು, ದೇಶವೇ ಮುಖ್ಯ ಅಂತ ಕುಡಿಯುವವರು. 

ವಾರಾಂತ್ಯ ಮದ್ಯಪಾನಿಗಳು – ಇವರು ಹೇಳಲಿಕ್ಕೆ ಮಾತ್ರ ವಾರಾಂತ್ಯದಲ್ಲಿ ಕುಡಿಯುವವರು, ಯಾಕಂದರೆ  ವಾರ ಪೂರ್ತಿ ಕುಡಿಯಲಾಗದನ್ನ ಒಂದು ದಿವಸದಲ್ಲಿ ಕುಡಿದು ಹಾಕುತ್ತಾರೆ. ಹಾಗಾಗಿ ಇವರ ಕೊಡುಗೆ ಅಪಾರ ಎಂದೇ ಹೇಳಬೇಕು. ಇವರು ಖುಷಿ ಬೇಕು ಅಂತ ಕುಡಿಯುವವರು. ಹೆಂಡತಿ ಕಾಟ, ಬಾಸಿನ ಕಿರುಕುಳ,  ದುಡ್ಡಿನ ಸಮಸ್ಯೆ, ಹೀಗೆ ಸಾವಿರಾರು ಸಮಸ್ಯೆಗಳಿದ್ದರೂ, ಅದೇನೆಲ್ಲ ಮರೆತು  ದೇಶದ  ಹಿತ ಮುಖ್ಯ ಎಂದು ಕುಡಿಯುವವರು. 

ಸಾಂದರ್ಭಿಕ ಮದ್ಯಪಾನಿಗಳು – ಇವರ ಕೊಡುಗೆ  ಕಮ್ಮಿ ಅಂತ  ಹೇಳಂಗಿಲ್ಲ,  ಸಾಂದರ್ಭಿಕ ಸಮಯ ಅಂತ ಹೇಳುತ್ತಾ ತಿಂಗಳಲ್ಲಿ ೧೦ ಬಾರಿಯಾದರೂ ಕುಡಿದು ಸರಕಾರದ ಬೊಕ್ಕಸಕ್ಕೆ ಹಣ ತುಂಬುತ್ತಾರೆ. 

ಕೊನೆಯದಾಗಿ 

ಕದ್ದುಮುಚ್ಚಿ ಕುಡಿಯುವವರು –  ಇವರು ಗುಪ್ತವಾಗಿ ಕುಡಿದು  ನಮಗೆ ಹಾಗು ನಮ್ಮ ಘನ ಸರಕಾರಕ್ಕೆ ಆರ್ಥಿಕವಾಗಿ ತಮ್ಮ ಕೈಲಾದ ಕೊಡುಗೆ  ನೀಡುತ್ತಿದ್ದಾರೆ. ಇವರಲ್ಲಿ ಕೆಲವರು ಮನೆಯಲ್ಲಿ ದುಡ್ಡು ಕದ್ದು ಅಥವಾ ಮನೆಯಲ್ಲಿ ಸುಳ್ಳು ಹೇಳಿ ದುಡ್ಡು  ತಂದು ಮದ್ಯ ಸೇವಿಸಿ ಆ ದುಡ್ಡನ್ನು ಸಹ ಸರಕಾರದ ಖಜಾನೆಗೆ ಹಾಕುತ್ತಾರೆ. ಕೆಲ ವಿದ್ಯಾರ್ಥಿಗಳು ಈ ಗುಂಪಿನಲ್ಲಿ ಸೇರಿರುವುದು ಕಂಡು ಬಂದಿದೆ.   

 ಇನ್ನು ನಾವು ಹೇಗೆ  ದೇಶ ಸೇವೆ ಬಗ್ಗೆ ಮಾಡುತ್ತೇವೆ ಅನ್ನುವುದನ್ನು  ಕೇಳಿ,

ದೇಶದ ಅನೇಕ ಸಮಸ್ಯೆಗಳಿಗೆ ಪರಿಹಾರ ಎಲ್ಲಿ ಸಿಗುತ್ತದೆ ಅಂದುಕೊಂಡಿದ್ದೀರಿ? ಅದು ನಾವು ಮದ್ಯಪಾನ ಮಾಡುವಾಗ  ಮಾತ್ರ ಸಿಗುವುದು. ಸರಕಾರ ತಮ್ಮ ಅಧಿಕಾರಿಗಳನ್ನು ನಾವು ಮದ್ಯಪಾನ ಮಾಡಿದಾಗ  ನಮ್ಮ ಹತ್ತಿರ ಕಳುಹಿಸಿದರೆ ಎಂತ ಸಮಸ್ಯೆಗಳಾದರೂ  ಅದಕ್ಕೆ ನಾವು ಪರಿಹಾರ ಹೇಳುತ್ತೇವೆ.   ನಾವು ಮದ್ಯಪಾನ ಮಾಡುವಾಗ ,  ಮೊದಲ ಮತ್ತು ಎರಡನೇ  ಸುತ್ತಿನಲ್ಲಿ ಮಾತ್ರ ನಮ್ಮ ವೈಯುಕ್ತಿಕ ವಿಷಯಗಳನ್ನು ಚರ್ಚಿಸುತ್ತೇವೆ. ನಂತರ  ಮುಂದಿನ ಸುತ್ತುಗಳಲ್ಲಿ ನಮ್ಮಂತ ದೇಶಭಕ್ತರು ನಿಮಗೆ ಎಲ್ಲೂ ಸಿಗುವುದಿಲ್ಲ.  ದೇಶದ ಪ್ರಧಾನಿಗೂ ಗೊತ್ತಾಗದ  ವಿಷಯಗಳು ನಮಗೆ ಸುಲಭವಾಗಿ ಅರ್ಥವಾಗಿ ಅದಕ್ಕೆ ಪರಿಹಾರ ಕೂಡ ಕೊಡುತ್ತೇವೆ.  ಕುಡಿದಾಗ ನಮಗೆ ಬಾಷೆಗಳ ಅಡೆತಡೆಗಳಿರುವುದಿಲ್ಲ. ಎಲ್ಲ ಬಾಷೆಗಳನ್ನು ಪ್ರೀತಿಸುತ್ತೇವೆ. ಕೆಲವೊಮ್ಮೆ ಅತಿಯಾಗಿ ಇಂಗ್ಲಿಷ್ ಮಾತನಾಡುತ್ತೇವೆ. ಅದಕ್ಕೆ ಕಾರಣ ಬ್ರಿಟಿಷರ ಮೇಲಿರುವ ನಮ್ಮ ಸಿಟ್ಟು. ನಿಮಗಿಂತ ಚೆನ್ನಾಗಿ ಇಂಗ್ಲೀಷನಲ್ಲಿ ಮಾತನಾಡುತ್ತೇವೆ ಎಂದು ತೋರಿಸುವುದಕ್ಕೆ ಅಷ್ಟೇ.  PM ಮತ್ತು  CMಗಳು ಕೂಡ ಚಿಕ್ಕಪ್ಪ, ದೊಡ್ಡಪ್ಪನ ಮಕ್ಕಳ ತರಹ ಕಾಣಿಸುತ್ತಾರೆ. ಹಾಗಾಗಿ ಅವರನ್ನು ನಾವು ಅವನು,  ಇವನು ಅಂತ  ಸಂಬೋದಿಸುತ್ತೇವೆ. ಯಾವ ಸಮಸ್ಯೆಗಳು ನಮಗೆ ದೊಡ್ಡದಾಗಿ ಕಾಣುವುದಿಲ್ಲ. ಕಾವೇರಿ ಸಮಸ್ಯೆ ಕೂಡ ನಾವು ಕೆಲವೊಮ್ಮೆ ಬಗೆಹರಿಸಿದ್ದುಂಟು.  ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಯಾವುದೇ ರಾಜ್ಯದ ಸಮಸ್ಯೆ ಇರಲಿ, ಅದಕ್ಕೆ  ನಮ್ಮ ಹತ್ತಿರ  ಪರಿಹಾರ ಇದೆ.  ಹಾಗಾಗಿ ಸರಕಾರ ನಮ್ಮ ಹತ್ತಿರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಬರಬೇಕು ಎಂದು  ಒತ್ತಾಯ ಮಾಡಬೇಕು ನಾವು. 

ಇನ್ನು ನಮ್ಮ ತ್ಯಾಗದ ಬಗ್ಗೆ ಹೇಳದಿದ್ದರೆ ಮಾತು ಕೊನೆ ಮಾಡಲಿಕ್ಕೆ ಸಾಧ್ಯವೇ ಇಲ್ಲ. ಅನೇಕ ಬಾರಿ ನಮ್ಮಲ್ಲಿ ಕೆಲವರು ತಮ್ಮ ಹೆಂಡತಿ ಮಕ್ಕಳನ್ನು ಉಪವಾಸ ಹಾಕಿದರು ಸರಿ, ದೇಶ ಅಭಿವೃದ್ಧಿಗೆ ಬೇಕಾಗಿರುವ ಹಣವನ್ನು ಸರಕಾರಕ್ಕೆ ಯಾವುದೇ ತೊಂದರೆ ಆಗದಂತೆ ನೀಡುತ್ತಾರೆ. ಯಾವತ್ತಿಗೂ ನಾವು ರೋಡ್ ಸರಿಯಿಲ್ಲ, ಕರೆಂಟ್ ಇಲ್ಲ,  ಆಸ್ಪತ್ರೆ ಸರಿ ಇಲ್ಲ ಅಂತ ದೂಷಣೆ ಮಾಡುವುದನ್ನು ನೋಡಿದ್ದೀರಾ? ಖಂಡಿತ ಇಲ್ಲ.  ನಾವು ಕೇಳುವುದು ಒಂದೇ,  ಎಲ್ಲ ಕಡೆ ಸುಲಭವಾಗಿ ಮದ್ಯ ಸಿಗಲಿ ಅಂತ. ನಮ್ಮದು ಕೊಡುಗೈ , ನಾವು ಕೊಡುತ್ತೇವೆ ಅಷ್ಟೇ , ಕೇಳುವುದಿಲ್ಲ.  ನಾವು ಇನ್ನೊಬ್ಬರ ಹತ್ತಿರ ಸಾಲ ತೆಗೆದುಕೊಳ್ಳುವ ಹಣ  ಕೂಡ ದೇಶದ ಅಭಿವೃದ್ಧಿಗೆ ಹಾಕುತ್ತೇವೆ.  ಮನೆ, ತೋಟ ಮಾರಿಯಾದರೂ ಸರಿ, ದೇಶದ  ಅಭಿವೃದ್ಧಿಗೆ ನಾವು ಬದ್ದ.  

ಇತ್ತೀಚಿಗೆ ಸಿನಿಮಾ  ಕ್ಷೇತ್ರದಲ್ಲೂ ಸಹ ನಮ್ಮ ಮೇಲೆ ಸಾಹಿತ್ಯ ಬರೆದು ಅನೇಕ ಜನ ತಮ್ಮ ಜೀವನ ಕಂಡುಕೊಂಡಿದ್ದಾರೆ.  ದೇಶದ ಅಭಿವೃದ್ಧಿ ಜೊತೆಗೆ ನಾವು ಮನರಂಜನೆ ಕೂಡ ಒದಗಿಸುವಲ್ಲಿ ಯಶಸ್ವಿ ಆಗಿದ್ದೇವೆ. ನಮ್ಮ ವಿಡಿಯೋಗಳು ವೈರಲ್ ಆಗುವಷ್ಟು ಬೇರೆ ಯಾವ ವಿಡಿಯೋಗಳು ವೈರಲ್ ಆಗುವುದಿಲ್ಲ. ಇದೆಲ್ಲ ನಾವು ಮಾಡುವುದು ಕೇವಲ ಜನರ ಮನರಂಜಗಾಗಿ ಮಾತ್ರ.  ಅವರ ಸಮಸ್ಯೆಗಳ ನಡುವೆ ಅವರ ಮುಖದಲ್ಲಿ ಸ್ವಲ್ಪ ನಗು ಕಾಣಿಸುವಂತೆ ಮಾಡುವ ಉದ್ದೇಶ ಅಷ್ಟೇ. 

ಬಡವನಿಲ್ಲದ ದೇಶ ನೋಡಬಹುದು ಆದರೆ ಮದ್ಯಪಾನಿಗಳು ಇರದ ದೇಶ ಸಿಗಲಾರದು.  ಕುಡಿದು ನಡೆಯುತ್ತಿದ್ದರೆ ನಮಗೆ ಪ್ರತಿಯೊಬ್ಬರೂ ದಾರಿ ಬಿಟ್ಟು ಗೌರವಿಸುತ್ತಾರೆ. ಎಲ್ಲರು ನಮ್ಮನ್ನೇ ಗಮನಿಸುತ್ತಾರೆ.  ಸರಕಾರಕ್ಕೆ  ಆರ್ಥಿಕ ಸಹಾಯ, ದೇಶಕ್ಕೆ ನಮ್ಮ ಜೀವನದ ತ್ಯಾಗ ಹಾಗು  ಜನರಿಗೆ  ನಾವು ಕೊಡುವ   ಮನರಂಜನೆ ..  ಎಷ್ಟೆಲ್ಲ   ಇರಬೇಕಾದರೆ  ನಮ್ಮಿಂದ ದೇಶಕ್ಕೆ ಏನು ಉಪಯೋಗ ಇಲ್ಲ ಎಂದು ಹೇಗೆ ಹೇಳುತ್ತೀರಿ ? ಎಂದು  ಹೇಳಿ ಬಾಷಣ ಮುಗಿಸಿ ಮತ್ತೊಂದು ಸುತ್ತಿನ ಮದ್ಯಪಾನಕ್ಕೆ  ತಯಾರಾದರು. ಮದ್ಯಪಾನ ಮಾಡುತ್ತಾ ಕುಳಿತವರು ಆಗಲೇ ಮೂರು ನಾಲ್ಕು ಸುತ್ತಿ ಮುಗಿಸಿದ್ದರು. ಅವರಿಗೆ ಏನು ಅರ್ಥವಾಯಿತೋ ಏನೋ ಎಲ್ಲರು ಹೆಬ್ಬರೆಳನ್ನು ತೋರಿಸುತ್ತ ಲೈಕ್ ಒತ್ತಿ ಮುಂದಿನ ಸುತ್ತಿಗೆ ತಯಾರಾದರು. 

ಅವರು ಮದ್ಯಪಾನಿಗಳನ್ನು ಹೊಗಳಿದರೋ ಅಥವಾ  ತೆಗಳಿದರೋ ಅರ್ಥವಾಗದೇ,  ಮದ್ಯಪಾನ ಮಾಡದವರು ಯೋಚನೆ ಮಾಡುತ್ತಾ ಗೋಬಿ ಮಂಚೂರಿಗೆ ಕೈ ಹಾಕಿದರು. 

ಮದಿರೆಯ ಮತ್ತಿನಲ್ಲಿ …  ಮತ್ತಿನ  ಮಾತುಗಳ ನಡುವೆ  ರಾತ್ರಿ ಕಳೆದು ಹೋಯಿತು. 

6 thoughts on “ಮದಿರೆಯ ಮತ್ತಿನಲ್ಲಿ…….. ಮತ್ತಿನ ಮಾತುಗಳು..

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s