ಇಂದು ಮನಸ್ಸಿಗೆ ತುಂಬ ಸಂತೋಷ ಕೊಡುವ ಒಂದು ಕಾರ್ಯಕ್ರಮದಲ್ಲಿ ಭಾಗವಹಿಸುವ ಅದೃಷ್ಟ ಒಲಿಯಿತು. ಪ್ರತಿ ವರುಷ ರಕ್ಷಾಬಂಧನಕ್ಕೆ ಸೀಮಿತವಾಗಿದ್ದ ನಮ್ಮ ಆಚರಣೆ ವಿಶ್ವ ಸಂಸ್ಕೃತ ದಿನಾಚರಣೆ ಆಚರಿಸುವ ಮೂಲಕ ಇಂದು ಸಂಪೂರ್ಣವಾಯಿತು. ಇಂದು Dr. ವಿದ್ವಾನ್ ವಿನಾಯಕ ಭಟ್, ಪ್ರಾಂಶುಪಾಲರು, ಅಂಬಿಕಾ ಮಹಾವಿದ್ಯಾಲಯ ಇವರು, ವಿಶ್ವ ಸಂಸ್ಕೃತ ದಿನಾಚರಣೆಯನ್ನು (ಆನ್ ಲೈನ್ ಮುಖಾಂತರ) ನಡೆಸಿಕೊಟ್ಟರು. ಅವರ ಗುರುಗಳು, ಮಾರ್ಗದರ್ಶಿಗಳು, ಹಿತೈಷಿಗಳು ಹಾಗು ಅವರ ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಬಾಗವಹಿಸಿದ್ದರು. ಕಾರ್ಯಕ್ರಮಕ್ಕೆ ಕೇವಲ ಕರ್ನಾಟಕ ಅಲ್ಲದೆ, ಬೇರೆ ರಾಜ್ಯಗಳಿಂದ ಮತ್ತು ಬೇರೆ ದೇಶಗಳಿಂದ ಕೂಡ ವಿದ್ಯಾರ್ಥಿಗಳು ಹಾಗು ಪೋಷಕರು ಭಾಗವಹಿಸಿದ್ದರು.
ದೇವ ಭಾಷೆ ಸಂಸ್ಕೃತವನ್ನು ಕೇವಲ ನಮ್ಮ ದೇಶದಲ್ಲಿ ಅಲ್ಲದೇ, ವಿದೇಶಗಳಲ್ಲಿ ಕೂಡ ಮಾನ್ಯತೆ ಕೊಟ್ಟು ಅದನ್ನು ಬೆಳೆಸುತ್ತಿದ್ದಾರೆ. ಅದರ ಪ್ರಯೋಜನ ಅವರು ಕೂಡ ಕಂಡುಕೊಂಡಿದ್ದಾರೆ. ಸಂಸ್ಕೃತ ಅನ್ನುವುದು ಯಾವುದೊ ಒಂದು ಧರ್ಮಕ್ಕೆ ಸೇರಿದ್ದು, ಅದು ನಮಗಲ್ಲ ಅಂತ ಹೇಳುವ ಜನಕ್ಕೆ ವಿದೇಶಗಳಲ್ಲಿರುವ ಶಾಲೆಗಳಲ್ಲಿ ಸಂಸ್ಕೃತ ಅಧ್ಯಯನ ಮಾಡಿಸುತ್ತಿರುವ ನಿದರ್ಶನಗಳನ್ನೂ ತೋರಿಸಿದರೆ, ಏನು ಹೇಳುತ್ತಾರೋ ಅನ್ನುವ ಕುತೂಹಲ ಅಂತೂ ಖಂಡಿತ ಇದೆ. ಸಂಸ್ಕೃತ ವೇದ ಘೋಷಗಳಿಂದ, ಮಂತ್ರಗಳಿಂದ ನಮಗೆ ಮಾನಸಿಕವಾಗಿ ಮತ್ತು ದೈಹಿಕವಾಗಿ ಆಗುವ ಲಾಭಗಳು ಅನೇಕ. ಇವೆಲ್ಲವೂ ವಿದೇಶದವರು ಅರ್ಥ ಮಾಡಿಕೊಂಡು ಅದನ್ನು ತಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ಅಳವಡಿಸಿಕೊಳ್ಳುತ್ತಿರುವಾಗ ನಮ್ಮ ಸರ್ಕಾರಗಳು ಮತ್ತು ನಾವು ಸಂಸ್ಕೃತವನ್ನು ಕಡೆಗಾಣಿಸುತ್ತಿರುವುದು ತುಂಬ ಖೇದದ ವಿಷಯ.
ಕಾರ್ಯಕ್ರಮದಲ್ಲಿ ಗಮನ ಸೆಳೆದ ವಿಷಯ ಅಂದರೆ ಅದು ಸಂಸ್ಕೃತ ಕಲಿಯುತ್ತಿರುವ ವಿದ್ಯಾರ್ಥಿಗಳು. ಯಾಕೆಂದರೆ ಅಲ್ಲಿದ್ದ ವಿದ್ಯಾರ್ಥಿಗಳ ವಯೋ ಮಿತಿ ೧೦ರಿಂದ ೬೦ರ ವರೆಗೆ ಇದ್ದಿದ್ದು. ಯಾವುದೊ ಕಾರಣಕ್ಕೆ, ಶಾಲೆ ಓದುವಾಗ ಸಂಸ್ಕೃತ ಕಲಿಯಲು ಅವಕಾಶ ವಂಚಿತರಾದ ಅನೇಕರು, ಈಗ ಗಮನ ಕೊಟ್ಟು ಕಲಿಯುವದನ್ನು ನೋಡಿದರೆ ಎಂತವರಿಗೂ ಪ್ರೇರಣೆ ನೀಡುತ್ತದೆ. ಅಯ್ಯೋ ಅದೆಲ್ಲ ಕಲಿಯಲಿಕ್ಕೆ ಎಲ್ಲಿ ಸಮಯ ಇದೆ ಬಿಡಿ ಅಂತ ಅನ್ನುವವರಿಗೆ, ಮನಸ್ಸು ಮಾಡಿದರೆ ಎಲ್ಲವು ಸಾಧ್ಯ ಆಗುತ್ತದೆ ಅಂತ ತೋರಿಸಲಿಕ್ಕೆ ಈ ಹಿರಿಯ ವಿದ್ಯಾರ್ಥಿಗಳೇ ಒಂದು ಉದಾಹರಣೆ. ಇವರಲ್ಲಿ ವೈದ್ಯರು, ವ್ಯವಹಾರ ಮಾಡುವವರು, ಬೇರೆ ಸಂಸ್ಥೆಗಳಲ್ಲಿ ಕೆಲಸ ಮಾಡುವವರು, ತಾವು ಕಲಿತು ತಮ್ಮ ಮಕ್ಕಳಿಗೆ ಅದನ್ನು ಕಲಿಸಲು ಪ್ರಯತ್ನಿಸುತ್ತಿರುವ ತಾಯಂದಿರು ಮತ್ತು ಕೆಲಸದಿಂದ ನಿವೃತ್ತಿ ಹೊಂದಿದವರು ಸಂಸ್ಕೃತವನ್ನು ಅಧ್ಯಯನ ಮಾಡಲೇಬೇಕೆಂದು ಹಠ ಹಿಡಿದು ಕಲಿಯುವುದನ್ನು ನೋಡಿ ನಿಜಕ್ಕೂ ರೋಮಾಂಚನವಾಯಿತು. ನಮ್ಮ ಭಾರತೀಯ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯಲು, ಇಂದಿನ ಪೀಳಿಗೆಯ ಮಕ್ಕಳಿಗೆ ಸಂಸ್ಕೃತ ಅಧ್ಯಯನ ಮಾಡಿಸಲು ಪೋಷಕರು ಮಾಡುತ್ತಿರುವ ಪ್ರಯತ್ನ ನಿಜಕ್ಕೂ ಶ್ಲಾಘನೀಯ.
ಮೊದಲ ಬಾರಿಗೆ ಭಾರತೀಯ ತತ್ವಶಾಸ್ತ್ರವನ್ನು ವಿಜ್ಞಾನ ವಿಭಾಗದಲ್ಲಿ ಸಂಯೋಜಿಸಿದ ಏಕೈಕ ಸಂಸ್ಥೆ ಅಂದರೆ ಅದು ದಕ್ಷಿಣ ಕನ್ನಡದ ಪುತ್ತೂರಿನ ಅಂಬಿಕಾ ಮಹಾವಿದ್ಯಾಲಯ. ಭಾರತೀಯ ತತ್ವ ಶಾಸ್ತ್ರ ಮತ್ತು ಭೌತಶಾಸ್ತ್ರ, ಮನಃಶಾಸ್ತ್ರ ಮತ್ತು ಸಂಸ್ಕೃತ ಅಥವಾ ಇಂಗ್ಲಿಷ್, ಈ ರೀತಿಯ ವಿಭಿನ್ನ ಸಂಯೋಜನೆಯಲ್ಲಿ ಓದುವ ಆಸಕ್ತಿ ಇರುವ ವಿದ್ಯಾರ್ಥಿಗಳಿಗೆ ಇದೊಂದು ಸುವರ್ಣಾವಕಾಶ. ಭಾರತೀಯ ಸಂಸ್ಕೃತಿಯನ್ನು ಬೆಳೆಸುವ ಈ ರೀತಿಯ ವಿಭಿನ್ನ ಪ್ರಯತ್ನಗಳಿಗೆ ಬೆಂಬಲ ಕೊಡಬೇಕು ಹಾಗು ಅದನ್ನು ಆದಷ್ಟು ಜನರಿಗೆ ತಲುಪಿಸುವ ಪ್ರಯತ್ನ ನಾವು ಮಾಡಬೇಕು.
ಭಾರತೀಯ ಸಂಸ್ಕೃತಿಯನ್ನು ನಾವು ಅರ್ಥ ಮಾಡಿಕೊಂಡು ಅದನ್ನು ಮುಂದಿನ ಪೀಳಿಗೆಗೆ ತಲುಪಿಸುವ ಜವಾಬ್ಧಾರಿ ನಮ್ಮ ಮೇಲಿದೆ.

ಶ್ರೀ
ಥಿಂಕ್ ರೈಟ್
ನಮ್ಮ ಹೆಮ್ಮೆ, ನಮ್ಮ ಸಂಸ್ಕೃತಿ 🙏🙏
LikeLike