” ನಾಗರ ಪಂಚಮಿ” ಆಚರಣೆಯಾ ಹಿಂದಿನ ಕಥೆ ಏನು ಗೊತ್ತೇ?

ಬರಹಗಾರರು : ಶ್ರೀನಾಥ ಹರದೂರ ಚಿದಂಬರ   ಮೂಲ : ಮಹಾಭಾರತ 

ಪಾಂಡವರ ಕಾಲಾನಂತರ ಅಭಿಮನ್ಯುವಿನ ಮಗ ಪರೀಕ್ಷಿತ ಹಸ್ತಿನಾಪುರದಲ್ಲಿ ರಾಜ್ಯಭಾರವನ್ನು ನಡೆಸಲು ಶುರು ಮಾಡುತ್ತಾನೆ. ಅವನು  ರಾಜ್ಯಭಾರವನ್ನು ಎಷ್ಟು ಚೆನ್ನಾಗಿ ಮಾಡುತ್ತಾನೆಂದರೆ ದ್ವಾಪರ ಯುಗ ಅಂತ್ಯಮಾಡಿ ಕಲಿಯುಗ ಶುರುಮಾಡಲು ಕಲಿಪುರುಷನಿಗೆ ಯಾವುದೇ ಅವಕಾಶವನ್ನು ಕೊಟ್ಟಿರುವುದಿಲ್ಲ.  ಕೊನೆಗೆ  ಕಲಿಪುರುಷನು ಪರೀಕ್ಷಿತನ ಅಪ್ಪಣೆ ಪಡೆದು ಅವನ ಚಿನ್ನದ ಕಿರೀಟದ ಮೂಲಕ ಪ್ರವೇಶ ಮಾಡಿ  ಕಲಿಯುಗ ಶುರುಮಾಡಲು ಮೊದಲ ಹೆಜ್ಜೆ ಇಡುತ್ತಾನೆ.  ಅಲ್ಲಿಯವರೆಗೂ ಯಾವುದೇ ತಪ್ಪನ್ನ ಮಾಡದ ಪರೀಕ್ಷಿತನ ಕೈಯಲ್ಲಿ ತಪ್ಪನ್ನು ಮಾಡಿಸುತ್ತಾನೆ. ಒಂದು ದಿನ ಪರೀಕ್ಷಿತ ಬೇಟೆಯಾಡಲು ಕಾಡಿಗೆ ಬಂದು ಬೇಟೆಯಾಡಿ,  ದಣಿದು, ಶಮೀಕ ಋಷಿಯ ಆಶ್ರಮ ಪ್ರವೇಶಿಸುತ್ತಾನೆ. ಶಮೀಕ ಋಷಿಗಳು ಧ್ಯಾನದಲ್ಲಿ ಕುಳಿತಿರುವುದನ್ನು ನೋಡಿ ಅಲ್ಲಿಗೆ ಹೋಗಿ ಕುಡಿಯಲು ನೀರು ಕೇಳುತ್ತಾನೆ. ಆದರೆ ಧ್ಯಾನದಲ್ಲಿದ್ದ ಶಮೀಕ ಋಷಿಗಳು ಯಾವುದೇ ಉತ್ತರ ನೀಡುವುದಿಲ್ಲ.   ಸುತ್ತ ಮುತ್ತ ಆಶ್ರಮದಲ್ಲಿ ಯಾರು ಕಾಣುವುದಿಲ್ಲ.  ಕಲಿಪುರಷನ ಪ್ರೇರಣೆಯಿಂದ ಕೋಪಗೊಂಡು, ಯೋಚನಾ ಶಕ್ತಿ ಕಳೆದುಕೊಂಡು , ಅಲ್ಲಿಯೇ ಸತ್ತು ಬಿದ್ದಿದ್ದ ಒಂದು ನಾಗರ  ಹಾವನ್ನು ತೆಗೆದು ಶಮೀಕ ಋಷಿಯಾ  ಕುತ್ತಿಗೆಗೆ ಸುತ್ತಿ ಅಲ್ಲಿಂದ  ಹೊರಟುಬಿಡುತ್ತಾನೆ.  ಹೊರಗಡೆ ಹೋಗಿದ್ದ ಶಮೀಕ ಋಷಿಯ ಮಗ ಶೃಂಗಿ ಆಶ್ರಮಕ್ಕೆ ಬಂದು ಆ ದೃಶ್ಯವನ್ನು ನೋಡಿ  ಕೋಪಗೊಂಡು,   ಯಾರು ಈ ಕೃತ್ಯವನ್ನು ಮಾಡಿದ್ದರೋ ಅವರು ಇನ್ನು ಏಳು ದಿವಸದೊಳಗೆ ತಕ್ಷಕನಿಂದ ಕಚ್ಚಲ್ಪಟ್ಟು ಸಾಯಲಿ ಎಂದು ಶಾಪ ನೀಡುತ್ತಾನೆ. 

ಶಮೀಕ ಋಷಿಗೆ ಎಚ್ಚರವಾಗಿ ನಡೆದು ಹೋದದ್ದೆಲ್ಲ ತಿಳಿದು,  ಮಹಾ ಧರ್ಮಾತ್ಮನಾದ ಪರೀಕ್ಷಿತನಿಗೆ ತನ್ನ ಮಗ ಶಾಪ ನೀಡಿದ್ದನ್ನು ತಿಳಿದು  ಬೇಜಾರುಗೊಂಡು, ತನ್ನ ಶಿಷ್ಯರನ್ನು ಪರೀಕ್ಷಿತನಲ್ಲಿಗೆ ಕಳುಹಿಸಿ, ತನ್ನ ಮಗ ನೀಡಿದ್ದ ಶಾಪ ನಿವಾರಣೆಗೆ ಪರಿಹಾರ ಸೂಚಿಸುತ್ತಾನೆ. ಆದರೆ ತಾನು ಮಾಡಿದ್ದ ಪಾಪದ ಕೆಲಸದಿಂದ ದುಃಖಿತನಾದ ಪರೀಕ್ಷಿತ  ತನ್ನ ತಪ್ಪಿಗೆ ಪ್ರಾಯಶ್ಚಿತ್ತ ಅಂದರೆ ನನ್ನ  ಸಾವೇ ಅದಕ್ಕೆ ಸರಿಯಾದ ಮಾರ್ಗ ಎಂದುಕೊಳ್ಳುತ್ತಾನೆ. ಏಳು ದಿವಸದವರಗೆ ಸಕಲ ಒಳ್ಳೆ ಕಾರ್ಯ ಮಾಡುತ್ತಾ, ದೇವರ ಧ್ಯಾನ ಮಾಡುತ್ತಾ ಕಾಲ ಕಳೆಯಲು ನಿರ್ಧರಿಸುತ್ತಾನೆ. ಮಂತ್ರಿಗಳು, ಪರಿವರಾದವರು ಮಾತ್ರ ಪರೀಕ್ಷಿತನನ್ನು ಕಾಪಾಡಲು ಭದ್ರವಾದ ಕೊಣೆಯಲ್ಲಿ ಅವನನ್ನಿಟ್ಟು,  ಅವನ  ಸುತ್ತ ಒಂದು ಹುಳವು ಬರದಂತೆ ಕಾವಲು ಇರಿಸುತ್ತಾರೆ.  ಇತ್ತ ತಕ್ಷಕನು ಶೃಂಗ ಮುನಿಯಾ ಶಾಪದಿಂದ ಪೇಚಿಗೆ ಸಿಲುಕುತ್ತಾನೆ. ಅವನಿಗೆ ಪರೀಕ್ಷಿತನ ಮೇಲೆ ಯಾವುದೇ ದ್ವೇಷವಿರುವುದಿಲ್ಲ, ಯಾವುದೇ ಕಾರಣವಿಲ್ಲದೆ ಪರೀಕ್ಷಿತನನ್ನ ಕಚ್ಚಬೇಕು,  ಇಲ್ಲದಿದ್ದರೆ ಶೃಂಗ ಮುನಿಯ ಕೋಪಕ್ಕೆ ತಾನು ತುತ್ತಾಗಬೇಕಾಗುತ್ತದೆ ಎಂದು ಚಿಂತಾಕ್ರಾಂತನಾಗುತ್ತಾನೆ.  ನಂತರ ಹಿಂದೆ ಅರ್ಜುನ  ಖಾಂಡವವನವನ್ನು ದಹಿಸುವಾಗ ತನ್ನ ಮಗ ಮತ್ತು ಹೆಂಡತಿಯನ್ನು ಸಾಯಿಸಿದ್ದ ನೆಪ ಇಟ್ಟುಕೊಂಡು ಪರೀಕ್ಷಿತನನ್ನು ಕೊಲ್ಲುತ್ತೇನೆ ಎಂದು ಹೊರಡುತ್ತಾನೆ.  ಆದರೆ  ಪರೀಕ್ಷಿತನ ಸುತ್ತ ಇದ್ದ ಭದ್ರತೆ ನೋಡಿ ಒಂದು ಸಣ್ಣ ಹುಳುವಿನ ರೂಪದಲ್ಲಿ  ರಾಜನಿಗೆ ಕೊಡುವ ಹಣ್ಣಿನಲ್ಲಿ ಸೇರಿ ಅವನ ಕೋಣೆಯೊಳಗೆ ಒಳಗಡೆ ಪ್ರವೇಶ ಮಾಡುತ್ತಾನೆ.  ಯಾವಾಗ ಪರೀಕ್ಷಿತ ಮಹಾರಾಜಾ ಹಣ್ಣು ತಿನ್ನಲು ಅದನ್ನು ಕತ್ತರಿಸುತ್ತಾನೋ, ಆಗ ಅದರಿಂದ ಹೊರಬಂದು ನಿಜ ರೂಪ ಪಡೆದು ಅವನ್ನು ಕಚ್ಚುತ್ತಾನೆ.  ಸಾಯುವ ಮುನ್ನ ಪರೀಕ್ಷಿತನು ರಾಣಿ ಇರಾವತಿಯನ್ನು ಕರೆದು ನೀನು ನನ್ನೊಂದಿಗೆ ಸಹಗಮನ  ಮಾಡದೆ ಮಗ ಜನಮೇಜಯನನ್ನು ಬೆಳೆಸಿ ಅವನಿಗೆ  ರಾಜಪಟ್ಟವನ್ನು ಕಟ್ಟು ಹಾಗು ನನ್ನ ಸಾವಿನ ರಹಸ್ಯ ತಿಳಿಸಬೇಡ. ರಹಸ್ಯ ತಿಳಿದರೆ ನಾಗಕುಲದ ಮೇಲೆ ದ್ವೇಷ ಸಾಧಿಸುವ ಸಾಧ್ಯತೆಗಳಿವೆ ಹಾಗಾಗಿ ನಾನು ನಾಗನಿಂದ ಪ್ರಾಣ ಕಳೆದುಕೊಂಡೆ ಎಂಬುದನ್ನು ಹೇಳಬೇಡ ಎಂದು ಹೇಳಿ ಸಾಯುತ್ತಾನೆ.  

ಮುಂದೆ ಜನಮೇಜಯನು ಬೆಳೆದು ಪಟ್ಟವೇರುತ್ತಾನೆ. ದ್ವಾಪರ ಯುಗ ಕೊನೆಯಾಗಿ ಕಲಿಯುಗ ಆರಂಭವಾಗುವ ಯುಗಸಂದಿ ಕಾಲದಲ್ಲಿ ರಾಜ್ಯವನ್ನು ಅಳಿದವನು ಜನಮೇಜಯ. ಹಲವು ವರ್ಷಗಳ ಕಾಲ ಭರತ ಖಂಡವನ್ನು ಆಳುತ್ತಾನೆ. ಆದರೆ ಅವನಿಗೆ ತನ್ನ ತಂದೆಯ ಸಾವಿನ  ರಹಸ್ಯ ತಿಳಿದಿರುವುದಿಲ್ಲ.  

ಹೀಗಿರುವಾಗ ವೇದ ಮುನಿಗಳ ಆಶ್ರಮದಲ್ಲಿ ಉತ್ತಂಕ ಎಂಬ ಶಿಷ್ಯನು ತನ್ನ ವಿದ್ಯಾಭ್ಯಾಸ ಮುಗಿಸಿ ವೇದ ಮುನಿಗಳ ಹತ್ತಿರ ಬಂದು  ಗುರು ಕಾಣಿಕೆ ಏನು ಕೊಡಲಿ ಎಂದು ಕೇಳುತ್ತಾನೆ. ಆಗ ವೇದ ಮುನಿಗಳು ನನಗೆ ನೀನು ಒಳ್ಳೆಯ ಮಾರ್ಗದಲ್ಲಿ ನಡೆಯುವುದೇ ಗುರುಕಾಣಿಕೆ,  ನನಗೆ ಏನು ಬೇಡ,  ನನ್ನ ಪತ್ನಿಯನ್ನು ಕೇಳಿನೋಡು ಎಂದು ಅವನನ್ನು ಅವನ ಪತ್ನಿಯ ಬಳಿ ಕಳಿಸುತ್ತಾನೆ. ಗುರುಪತ್ನಿಯನ್ನು ಅವನು ನಾನು ಏನು ಗುರುಕಾಣಿಕೆ ನೀಡಲಿ ಎಂದು ಕೇಳಿದಾಗ, ಗುರುಪತ್ನಿಯು ನಾನು ಪೂಜೆಗೆಂದು ಸುಮಂಗಲಿಯರನ್ನು ಕರೆದಿದ್ದೇನೆ.  ಅವರೆಲ್ಲ ಬರುವ ಸಮಯದಲ್ಲಿ ಬರಿ ಕಿವಿಯಲ್ಲಿ ಇರುವುದು ಸೂಕ್ತವಲ್ಲ,  ಹಾಗಾಗಿ ಪೌಷ್ಯ ರಾಜನ ಹೆಂಡತಿಯ ಕಿವಿ ಓಲೆಗಳನ್ನು   ಒಂದು ದಿನದ  ಮಟ್ಟಿಗೆ ತರಲು ಸಾಧ್ಯವೇ ಎಂದು ಕೇಳುತ್ತಾಳೆ.  ಶಿಷ್ಯ ಉತ್ತಂಕ ಖಂಡಿತ ತೆಗೆದುಕೊಂಡು ಬರುತ್ತೇನೆ ಎಂದು ಅಲ್ಲಿಂದ ಹೊರಟು,  ಪುಷ್ಯ ರಾಜನ  ಹೆಂಡತಿಯ ಹತ್ತಿರ ಬಂದು ಈ ವಿಚಾರವನ್ನು ತಿಳಿಸುತ್ತಾನೆ. ಅದಕ್ಕೆ  ರಾಣಿಯು ತುಂಬ ಸಂತುಷ್ಟಳಾಗಿ, ಗುರುಪತ್ನಿಯು ನನ್ನ ಓಲೆಗಳನ್ನು ಕೇಳಿದ್ದೆ ನನ್ನ ಸೌಭಾಗ್ಯ, ಒಂದು ದಿನ  ಅಲ್ಲ ಅವರಿಗೆ ಈ ಓಲೆಗಳನ್ನು ಶಾಶ್ವತವಾಗಿ  ಕೊಡುತ್ತೇನೆ ಎಂದು ಹೇಳಿ ಓಲೆಗಳ ಜೊತೆ ಪುಷ್ಯ ಮಣಿ ಮತ್ತು ಬೇರೆ ಒಡವೆಗಳನ್ನು ಕೊಡುತ್ತಾಳೆ .  ಶಿಸ್ಯ ಉತ್ತಂಕನಿಗೆ,  ನೋಡು ಈ ಒಡವೆಗಳು ಮೂರು ಲೋಕದಲ್ಲಿ ಪ್ರಸಿದ್ದಿ ಹೊಂದಿದೆ ಹಾಗು ತಕ್ಷಕ ಇದನ್ನು ಕದಿಯಲು ಹೊಂಚು ಕೂಡ ಹಾಕುತ್ತಿದ್ದಾನೆ, ತುಂಬ ಜಾಗರೂಕತೆಯಿಂದ ತೆಗೆದುಕೊಂಡು ಹೋಗು ಎಂದು ಹೇಳುತ್ತಾಳೆ.   ಒಡವೆಗಳನ್ನು  ತೆಗೆದುಕೊಂಡು ಬರುವಾಗ ದಾರಿಯಲ್ಲಿ ಅವನನ್ನು ತಕ್ಷಕ  ಅಡ್ಡಗಟ್ಟಿ, ಅವುಗಳನ್ನು ಕದ್ದು  ಪಾತಾಳಲೋಕಕ್ಕೆ ಹೋಗಿಬಿಡುತ್ತಾನೆ.  ಶಿಷ್ಯ ಉತ್ತಂಕ ಬಹಳ ಬೇಸರಗೊಂಡು, ಕೋಪದಿಂದ ಹಸ್ತಿನಾಪುರಕ್ಕೆ ಹೋಗಿ ತಕ್ಷಕನಿಗೆ ತಕ್ಕ ಶಾಸ್ತಿ ಮಾಡಲು ಜನಮೇಜಯನನ್ನು ಭೇಟಿಯಾಗಿ ಪರೀಕ್ಷಿತನ ಸಾವಿನ ರಹಸ್ಯವನ್ನು  ಹೇಳಿಬಿಡುತ್ತಾನೆ. ಜನಮೇಜಯನು ತನ್ನ ತಂದೆಯ ಸಾವಿನ ರಹಸ್ಯ ತಿಳಿದು ತುಂಬ ಕೋಪಗೊಳ್ಳುತ್ತಾನೆ.  ಶಿಷ್ಯ ಉತ್ತಂಕನು,  ನೀನು ತಕ್ಷಕನ ಮೇಲೆ ಸೇಡು ತೀರಿಸಿಕೊಳ್ಳಬೇಕು, ಅದಕ್ಕಾಗಿ ಸರ್ಪಯಾಗ ಮಾಡಿ ಇಡಿ ನಾಗ ಕುಲವನ್ನೇ ನಾಶ ಮಾಡು ಎಂದು ಹೇಳಿ, ಜನಮೇಜಯನಲ್ಲಿ  ನಾಗದ್ವೇಷದ ಬೀಜ ಬಿತ್ತಿ ಹೊರಟುಹೋಗುತ್ತಾನೆ. 

ಇಲ್ಲಿಯವರೆಗೆ ತನ್ನ ತಂದೆಯ ಸಾವಿನ ರಹಸ್ಯ ಯಾರು ಹೇಳಲಿಲ್ಲ ಎಂದು ಕೋಪಗೊಂಡು, ಯಾರ ಮಾತನ್ನು ಆಲಿಸದೆ ಇಡೀ ನಾಗಕುಲವನ್ನೇ ನಾಶಮಾಡುತ್ತೇನೆ ಎಂದು ಸರ್ಪ ಯಾಗ ಮಾಡಲು ನಿರ್ಧಾರ ಮಾಡುತ್ತಾನೆ. ಬಹಳ ದೊಡ್ಡದಾದ ಯಾಗ ಶಾಲೆ  ಕಟ್ಟಿ, ಋಷಿ ಮುನಿಗಳು, ಪುರೋಹಿತರು ಮತ್ತು ವಿಪ್ರರನ್ನು ಕರೆಸಿ, ಕೇಳಿದ ದಾನ ಮಾಡುತ್ತಾ ಯಾಗವನ್ನು ನಡೆಸುತ್ತಾನೆ. ಪುರೋಹಿತರು ಮಾಡಿದ ವಶೀಕರಣ   ಮಂತ್ರದ   ವಶೀಕರಣಕ್ಕೆ ಸಿಕ್ಕಿ ಒಂದೆಂದೇ ನಾಗಗಳು ಹೋಮ ಕುಂಡಕ್ಕೆ ಬಿದ್ದು ಆಹುತಿಯಾಗತೊಡಗುತ್ತವೆ. 

ಅನೇಕ ನಾಗ ಸಂತತಿಗಳು ನಾಶವಾಗಿ ಹೋಗುತ್ತವೆ. ಆದರೆ ತಕ್ಷಕ ಮಾತ್ರ ಇಂದ್ರನ ರಕ್ಷಣೆಯಲ್ಲಿ ಸುರಕ್ಷಿತವಾಗಿದ್ದ. ಇದನ್ನು ಅರಿತ ಪುರೋಹಿತರು ಇಂದ್ರನ ಸಮೇತ ತಕ್ಷಕನು ಬರುವ ಹಾಗೆ ಮಂತ್ರ ಹೇಳಲು ಶುರುಮಾಡುತ್ತಾರೆ. ಆಗ ಮಂತ್ರದ ಶಕ್ತಿಗೆ ಇಂದ್ರನ ಸಮೇತ ತಕ್ಷಕ ಅಗ್ನಿಯ ಕಡೆ ಎಳೆಯಲ್ಪಡುತ್ತಾನೆ. ಇದರಿಂದ ಹೆದರಿದ ಇಂದ್ರ ಮಾನಸಾದೇವಿಯ ಮೊರೆ ಹೋಗುತ್ತಾನೆ. ಮಾನಸಾದೇವಿಯು ತನ್ನ ಮಗ ಆಸ್ತಿಕನನ್ನ ಜನಮೇಜಯ ಬಳಿಗೆ ಅವನ್ನು ಸಂತ್ಯೆಸಲು ಕಳುಹಿಸುತ್ತಾಳೆ. ಆಸ್ತಿಕನು  ಜನಮೇಜಯನ ಬಳಿಗೆ ಬಂದು ಯಾಗವನ್ನು  ನಿಲ್ಲಿಸಲು  ಹೇಳುತ್ತಾನೆ. ಜನಮೇಜಯನು ಆಸ್ತಿಕನ  ವೇದ ಶಾಸ್ತ್ರಗಳ ಪಾಂಡಿತ್ಯದ ಬಗ್ಗೆ ತಿಳಿದಿರುತ್ತಾನೆ. ಅವನನ್ನು ಯಾಕೆ ನಿಲ್ಲಿಸಬೇಕು ಎಂದು ಕೇಳಿದಾಗ ಪರೀಕ್ಷಿತನ  ಸಾವಿನ ಹಿಂದಿನ ಕಥೆ ವಿವರಿಸಿ,  ಇದರಲ್ಲಿ ತಕ್ಷಕನ  ತಪ್ಪೇನು ಇಲ್ಲ,  ನಿನ್ನ ತಂದೆ ಮಾಡಿದ ತಪ್ಪಿನಿಂದ ಈ ಘಟನೆಗಳು ನಡೆದವು ಎಂದು ಜನಮೇಜಯನನ್ನು ಸಂತಯಿಸಿ ಯಾಗವನ್ನು ನಿಲ್ಲಿಸುತ್ತಾನೆ. ತಕ್ಷಕನ ಕುಲ ಉಳಿಯುತ್ತದೆ. ಜನಮೇಜಯನು  ತಕ್ಷಕನ  ಕ್ಷಮೆ ಯಾಚಿಸುತ್ತಾನೆ. ತಕ್ಷಕನು ತನ್ನ ಕುಲವನ್ನು ಉಳಿಸಿದ ಆಸ್ತಿಕನ ಬಗ್ಗೆ ತುಂಬ ಸಂತುಷ್ಟನಾಗುತ್ತಾನೆ.   ಯಾರು ಮೂರು ಬಾರಿ ” ಆಸ್ತಿಕ ”  ಎಂದು ಹೇಳುತ್ತಾರೋ ಅವರು ನಾಗ ದೋಷದಿಂದ ಮುಕ್ತರಾಗುತ್ತಾರೆ ಎಂದು ವರ ಕೊಡುತ್ತಾನೆ. 

ತಕ್ಷಕನು ಜನಮೇಜಯನನ್ನು ಕ್ಷಮಿಸಿದರೂ ,  ಅನೇಕ ನಾಗ ಕುಲಗಳನ್ನು ನಾಶ ಮಾಡಿದ್ದರಿಂದ ನಾಗ ದೋಷ ಉಂಟಾಗಿ ಅವನಿಗೆ  ಕುಷ್ಠರೋಗ ಬಾಧಿಸುತ್ತದೆ.  ಮುಂದೆ ಗುರವಾಯುರು ಹರಿ ದರ್ಶನ ಮಾಡಿ ಆತ ತನ್ನ ದೋಷ ಪರಿಹಾರ ಮಾಡಿ ಕೊಳ್ಳುತ್ತಾನೆ. ಮುಂದೆ ಅನೇಕ ವರುಷಗಳ ಕಾಲ ಭರತ ಖಂಡವನ್ನು  ಕಲಿಯುಗದಲ್ಲಿ ಆಳುತ್ತಾನೆ. 

ಜನಮೇಜಯನು ಸರ್ಪಯಾಗವನ್ನು ನಿಲ್ಲಿಸಿದ ದಿನವೇ ಶ್ರಾವಣ ಮಾಸದ ಶುಕ್ಲ ಪಕ್ಷದ ಪಂಚಮಿ ತಿಥಿ.  ಅದನ್ನೇ ನಾವು ನಾಗರ ಪಂಚಮಿ ಎಂಬುದಾಗಿ ಆಚರಿಸುತ್ತೇವೆ ಮತ್ತು ನಾಗರ ದೇವರನ್ನು ಪೂಜಿಸುತ್ತೇವೆ. 

ಈ ಕಥೆಯನ್ನು ಓದಿ , ನಿಮ್ಮ ಮಕ್ಕಳಿಗೆ ತಿಳಿಸಿ. 

ಶ್ರೀ 

ಥಿಂಕ್ ರೈಟ್ 

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s