ತರ್ಕ ಮತ್ತು ಜ್ಞಾನ !! ಗುರು ಶಿಷ್ಯರ ಸಂಭಾಷಣೆ…

ಬರಹಗಾರರು : ಶ್ರೀನಾಥ್ ಹರದೂರ  ಚಿದಂಬರ 

ಒಂದು ದಿನ ೨೫ರ ಆಸುಪಾಸಿನಲ್ಲಿರುವ ಒಬ್ಬ ಬೇರೆ ದೇಶದ ಯುವಕ ಹೆಸರಾಂತ ಗುರುವನ್ನು ಭೇಟಿಯಾಗಲು ಬರುತ್ತಾನೆ. ಗುರುವಿನ ಮನೆಯ ಬಾಗಿಲನ್ನು ತಟ್ಟುತ್ತಾನೆ. ಒಳಗಿನಿಂದ ಬಂದ  ಗುರುವು ಏನೆಂದು ಕೇಳಿದಾಗ , ಯುವಕನು ” ನಾನು ವೇದ ಅಭ್ಯಾಸ ಮಾಡಲು ಬಂದಿದ್ದೇನೆ, ನನಗೆ ಆ ಅವಕಾಶವನ್ನು ಮಾಡಿಕೊಡಿ” ಎಂದು ಕೇಳುತ್ತಾನೆ.

ಆಗ ಗುರುವು ” ನಿನಗೆ ಸಂಸ್ಕೃತ ಬರುತ್ತದೆಯೇ” ಎಂದು ಕೇಳುತ್ತಾನೆ.

ಅದಕ್ಕೆ ಯುವಕ ” ಇಲ್ಲ ಬರುವುದಿಲ್ಲ” ಎಂದು ಹೇಳುತ್ತಾನೆ.

ಮತ್ತೆ ಗುರುವು ” ಭಾರತದ ತತ್ವಶಾಸ್ತ್ರ ಅಭ್ಯಾಸವೇನಾದರೂ ಮಾಡಿದ್ದೀಯಾ ?” ಎಂದು ಕೇಳುತ್ತಾರೆ.

ಯುವಕ ಪ್ರತ್ಯುತ್ತರವಾಗಿ ” ಇಲ್ಲ ನಾನು ತತ್ವಶಾಸ್ತ್ರ  ಅಭ್ಯಾಸ ಮಾಡಿಲ್ಲ,  ಆದರೆ ಏನು ತೊಂದರೆ ಇಲ್ಲ, ನನಗೆ ಹಾರ್ವರ್ಡ್ ಯೂನಿವರ್ಸಿಟಿಯಲ್ಲಿ  ತರ್ಕಶಾಸ್ತ್ರ ಪ್ರಬಂಧಕ್ಕೆ  ಡಾಕ್ಟರೇಟ್ ಸಿಕ್ಕಿದೆ, ಹಾಗಾಗಿ ತರ್ಕಶಾಸ್ತ್ರದ ಪರಿಣಿತಿಯ ಜೊತೆಗೆ ಸ್ವಲ್ಪ ವೇದಶಾಸ್ತ್ರವನ್ನು ಕಲಿತು ಅಧ್ಯಯನವನ್ನು ಸಂಪೂರ್ಣ  ಮಾಡಬೇಕೆಂದಿದ್ದೇನೆ”  ಎಂದು ಹೇಳುತ್ತಾನೆ.

ಗುರುವು ಅದಕ್ಕೆ ” ಸಾಧ್ಯವಿಲ್ಲ,  ನನಗೆ ನೀನು ವೇದ ಶಾಸ್ತ್ರ  ಅಧ್ಯಯನ ಮಾಡಲು ನಿನ್ನ ತರ್ಕ   ಸಾಕಾಗಲ್ಲ  ಎಂದೆನಿಸುತ್ತದೆ,  ವೇದಶಾಸ್ತ್ರ ಎಂಬುದು  ತುಂಬ ಆಳವಾದ ಜ್ಞಾನದ  ವಿಷಯ,  ಆದರೂ ನಿನ್ನ ತರ್ಕಶಾಸ್ತ್ರದ ಪರಿಣಿತಿಯನ್ನು ಪರೀಕ್ಷಿಸಿಸುತ್ತೇನೆ, ಅದರಲ್ಲಿ ನೀನು ತೇರ್ಗಡೆ ಹೊಂದಿದರೆ ನಾನು ವೇದಶಾಸ್ತ್ರ ಹೇಳಿಕೊಡುತ್ತೇನೆ  ” ಎನ್ನುತ್ತಾರೆ.

ಯುವಕ ಅದಕ್ಕೆ ಒಪ್ಪಿಕೊಳ್ಳುತ್ತಾನೆ.

ಗುರು ತನ್ನ ಎರಡು ಬೆರಳುಗಳನ್ನು ಯುವಕನಿಗೆ ತೋರಿಸುತ್ತ,  ” ಇಬ್ಬರು ಒಂದು ಹೊಗೆ ಗೂಡನ್ನು ಶುದ್ದಿ ಮಾಡಿ ಹೊರಗಡೆ ಬಂದಾಗ ಒಬ್ಬನ ಮುಖ ತುಂಬ ಕೊಳೆಯಾಗಿರುತ್ತದೆ, ಇನ್ನೊಬ್ಬನ ಮುಖ ಕೊಳೆಯಾಗಿರುವುದಿಲ್ಲ, ಹಾಗಾದರೆ ಅವರಲ್ಲಿ ಯಾರು ತಮ್ಮ ಮುಖವನ್ನು  ತೊಳೆಯುತ್ತಾರೆ ”  ಎಂದು ಗುರು ಪ್ರಶ್ನೆ ಕೇಳುತ್ತಾರೆ.

ಅದಕ್ಕೆ ಯುವಕ ಗುರುವನ್ನು ಅನುಮಾನದಿಂದ ನೋಡುತ್ತಾ ” ನಿಜವಾಗಿಯೂ ಇದು ಪರೀಕ್ಷೆಯೇ ?” ಎಂದು ಕೇಳುತ್ತಾನೆ.

ಗುರುವು ಮಾತನಾಡದೆ  ಹೌದು ಎನ್ನುವಂತೆ ತಲೆ ಅಲ್ಲಾಡಿಸುತ್ತಾರೆ.

ಯುವಕ ತುಂಬ ಆತ್ಮವಿಶ್ವಾಸದಿಂದ ” ಯಾರ ಮುಖ ಕೊಳೆಯಾಗಿರುತ್ತೋ ಅವನು ತೊಳೆಯುತ್ತಾನೆ” ಎಂದು ಉತ್ತರ ಕೊಡುತ್ತಾನೆ.

ಗುರುವು  ” ನಿನ್ನ ಉತ್ತರ ತಪ್ಪು,  ಯಾರ ಮುಖ ಕೊಳೆಯಾಗಿರುವುದಿಲ್ಲವೋ ಅವನು ತೊಳೆಯುತ್ತಾನೆ, ಯಾಕಂದರೆ ಅವರಿಬ್ಬರೂ ಒಬ್ಬರನ್ನೊಬ್ಬರು ನೋಡಿಕೊಂಡಾಗ,  ಯಾರ ಮುಖ ಕೊಳೆಯಾಗಿದೆಯೋ ಅವನು ಕೊಳೆಯಾಗದಿರುವವನ ಮುಖ ನೋಡಿ ತನ್ನ ಮುಖವು ಕೂಡ ಕೊಳೆಯಾಗಿಲ್ಲ ಅಂದುಕೊಳ್ಳುತ್ತಾನೆ,  ಯಾರೋ ಮುಖ ಕೊಳೆಯಾಗಿರುವುದಿಲ್ಲವೋ ಅವನು ಕೊಳೆಯಾಗಿರುವವನ ಮುಖ ನೋಡಿ ತನ್ನ ಮುಖ ಕೂಡ ಕೊಳೆಯಾಗಿದೆ ಅಂದುಕೊಂಡು ಮುಖ ತೊಳೆಯುತ್ತಾನೆ” ಎಂದು ಉತ್ತರ ಕೊಡುತ್ತಾರೆ.

ಯುವಕ ” ತುಂಬ ಜಾಣ ಉತ್ತರ,  ನನಗೆ ಇನ್ನೊಂದು ಪರೀಕ್ಷೆ ನೀಡಿ ” ಎಂದು ಕೇಳುತ್ತಾನೆ. 

ಗುರು ತನ್ನ ಎರಡು ಬೆರಳುಗಳನ್ನು ಯುವಕನಿಗೆ ತೋರಿಸುತ್ತ,  ” ಇಬ್ಬರು ಹೊಗೆ ಗೂಡನ್ನು ಶುದ್ದಿ ಮಾಡಿ ಹೊರಗಡೆ ಬಂದಾಗ ಒಬ್ಬನ ಮುಖ ತುಂಬ ಕೊಳೆಯಾಗಿರುತ್ತದೆ, ಇನ್ನೊಬ್ಬನ ಮುಖ ಕೊಳೆಯಾಗಿರುವುದಿಲ್ಲ, ಹಾಗಾದರೆ ಅವರಲ್ಲಿ ಯಾರು ತಮ್ಮ ಮುಖವನ್ನು ತೊಳೆಯುತ್ತಾರೆ ”  ಎಂದು ಗುರು ಪ್ರಶ್ನೆ ಕೇಳುತ್ತಾರೆ.

ಯುವಕ ” ಆಗಲೇ ಇದಕ್ಕೆ  ಉತ್ತರ  ಗೊತ್ತಿದೆ, ಯಾರ ಮುಖ ಕೊಳೆಯಾಗಿರುವುದಿಲ್ಲವೋ ಅವನು ತೊಳೆಯುತ್ತಾನೆ” ಎಂದು ಉತ್ತರ ಕೊಡುತ್ತಾನೆ. 

ಗುರುವು ” ಉತ್ತರ ತಪ್ಪು, ಇಬ್ಬರು ಮುಖ ತೊಳೆಯುತ್ತಾರೆ, ಸರಿಯಾದ ತರ್ಕ ಮಾಡಿನೋಡು, ಯಾರ ಮುಖ ಕೊಳೆಯಾಗಿದೆಯೋ ಅವನು ಕೊಳೆಯಾಗದಿರುವವನ ಮುಖ ನೋಡಿ ತನ್ನ ಮುಖವು ಕೂಡ ಕೊಳೆಯಾಗಿಲ್ಲ ಅಂದುಕೊಳ್ಳುತ್ತಾನೆ,  ಯಾರೋ ಮುಖ ಕೊಳೆಯಾಗಿರುವುದಿಲ್ಲವೋ ಅವನು ಕೊಳೆಯಾಗಿರುವವನ ಮುಖ ನೋಡಿ ತನ್ನ ಮುಖ ಕೂಡ ಕೊಳೆಯಾಗಿದೆ ಅಂದುಕೊಂಡು ಮುಖ ತೊಳೆಯುತ್ತಾನೆ,  ಕೊಳೆಯಾಗದ ಮುಖದವನು ತನ್ನ ಮುಖವನ್ನು ತೊಳೆಯುವುದನ್ನು ನೋಡಿ  ಕೊಳೆಯಾಗಿರುವ ಮುಖದವನು ಕೂಡ ತನ್ನ ಮುಖವನ್ನು ತೊಳೆದುಕೊಳ್ಳುತ್ತಾನೆ”. 

ಯುವಕ ” ಆಯಿತು, ನಾನು ಆ ರೀತಿಯಾಗಿ ತರ್ಕ ಮಾಡಲಿಲ್ಲ, ನನಗೆ ನನ್ನ ತರ್ಕ ತಪ್ಪಾಯಿತು ಅನ್ನುವುದು ಆಶ್ಚರ್ಯವಾಗುತ್ತಿದೆ, ಇನ್ನೊಂದು ಪರೀಕ್ಷೆ ನೀಡಿ” ಎಂದು ಅನ್ನುತ್ತಾನೆ. 

ಗುರು ತನ್ನ ಎರಡು ಬೆರಳುಗಳನ್ನು ಯುವಕನಿಗೆ ತೋರಿಸುತ್ತ,  ” ಇಬ್ಬರು ಹೊಗೆ ಗೂಡನ್ನು ಶುದ್ದಿ ಮಾಡಿ ಹೊರಗಡೆ ಬಂದಾಗ ಒಬ್ಬನ ಮುಖ ತುಂಬ ಕೊಳೆಯಾಗಿರುತ್ತದೆ, ಇನ್ನೊಬ್ಬನ ಮುಖ ಕೊಳೆಯಾಗಿರುವುದಿಲ್ಲ, ಹಾಗಾದರೆ ಅವರಲ್ಲಿ ಯಾರು ತಮ್ಮ ಮುಖವನ್ನು ತೊಳೆಯುತ್ತಾರೆ ”  ಎಂದು ಗುರು ಪ್ರಶ್ನೆ ಕೇಳುತ್ತಾರೆ.

ಯುವಕ  ” ಇಬ್ಬರು ತಮ್ಮ ಮುಖವನ್ನು  ತೊಳೆದುಕೊಳ್ಳುತ್ತಾರೆ”. 

ಗುರುವು  ” ನಿನ್ನ ಉತ್ತರ ತಪ್ಪು,  ಯಾರು ಮುಖವನ್ನು ತೊಳೆದುಕೊಳ್ಳುವುದಿಲ್ಲ,  ಸರಿಯಾಗಿ ತರ್ಕ ಮಾಡಿನೋಡು,  ಕೊಳೆ  ಮುಖದವನು ಕೊಳೆಯಾಗದ ಮುಖದವನನ್ನು ನೋಡಿ ತನ್ನ ಮುಖ ಕೊಳೆಯಾಗಿಲ್ಲ ಅಂದುಕೊಳ್ಳುತ್ತಾನೆ,  ಕೊಳೆಯಾಗದ  ಮುಖದವನು ಕೊಳೆ ಆಗಿರುವವನ ಮುಖ ನೋಡಿ ತನ್ನ ಮುಖವು ಕೊಳೆಯಾಗಿದೆ ಅಂತ ಅಂದುಕೊಳ್ಳುತ್ತಾನೆ. ಯಾವಾಗ ಕೊಳೆ ಮುಖದವನು ತನ್ನ ಮುಖ ತೊಳೆದುಕೊಳ್ಳುವುದಿಲ್ಲವೊ  ಆಗ ಅದನ್ನು ನೋಡಿ ಕೊಳೆಯಾಗದ ಮುಖದವನು ತಾನು ತನ್ನ ಮುಖವನ್ನು ತೊಳೆಯುವುದಿಲ್ಲ”. 

ಆಗ ಯುವಕ ” ಹತಾಶೆಗೆ ಒಳಗಾಗಿ,  ನಾನು ಖಂಡಿತ ತೇರ್ಗಡೆಯಾಗುತ್ತೇನೆ ಮತ್ತು ವೇದಶಾಸ್ತ್ರ ಕಲಿಯುತ್ತೇನೆ, ಇನ್ನೊಂದು ಪರೀಕ್ಷೆ ನೀಡಿ ”  ಎಂದು ಎನ್ನುತ್ತಾನೆ. 

ಗುರು ತನ್ನ ಎರಡು ಬೆರಳುಗಳನ್ನು ಯುವಕನಿಗೆ ತೋರಿಸುತ್ತ,  ” ಇಬ್ಬರು ಹೊಗೆ ಗೂಡನ್ನು ಶುದ್ದಿ ಮಾಡಿ ಹೊರಗಡೆ ಬಂದಾಗ ಒಬ್ಬನ ಮುಖ ತುಂಬ ಕೊಳೆಯಾಗಿರುತ್ತದೆ, ಇನ್ನೊಬ್ಬನ ಮುಖ ಕೊಳೆಯಾಗಿರುವುದಿಲ್ಲ, ಹಾಗಾದರೆ ಅವರಲ್ಲಿ ಯಾರು ತಮ್ಮ ಮುಖವನ್ನು ತೊಳೆಯುತ್ತಾರೆ ”  ಎಂದು ಗುರು ಪ್ರಶ್ನೆ ಕೇಳುತ್ತಾರೆ.

ಗುರು ಬೆರಳು ಎತ್ತುತ್ತಲೇ ಯುವಕ ” ಹೂಂ”  ಎಂದು ತನ್ನ ಹತಾಶೆಯನ್ನು ತೋರಿಸುತ್ತ ” ಇಬ್ಬರು  ತಮ್ಮ ಮುಖ ತೊಳೆಯುವುದಿಲ್ಲ ” ಎಂದು ಉತ್ತರ ಕೊಡುತ್ತಾನೆ. 

ಗುರುವು” ನಿನ್ನ ಉತ್ತರ ತಪ್ಪು,  ನೋಡಿದೆಯಾ ತರ್ಕಶಾಸ್ತ್ರ ವೇದಶಾಸ್ತ್ರವನ್ನು ಅಭ್ಯಾಸ ಮಾಡಲು ಸಾಕಾಗುವುದಿಲ್ಲ ಎಂದು, ಈಗ ಹೇಳು, ಇಬ್ಬರು ಒಂದೇ ಚಿಮಣಿಯಲ್ಲಿ ಇಳಿದು, ಒಬ್ಬನ ಮುಖ ಕೊಳೆಯಾಗಿ ಇನ್ನೊಬ್ಬನ ಮುಖ ಕೊಳೆಯಾಗದಿರಲು ಸಾಧ್ಯ?

ನಾನು  ಕೇಳಿದ ಪ್ರಶ್ನೆಯೇ ಅಸಂಬದ್ಧವಾಗಿದೆ, ನಿನ್ನ ಇಡೀ ಜೀವನವನ್ನು ತರ್ಕದಿಂದ  ಅಸಂಬದ್ಧ  ಪ್ರಶ್ನೆಗಳಿಗೆ ಉತ್ತರ ಹುಡುಕಲು ಶುರುಮಾಡಿದರೆ ನಿನಗೆ ಸಿಗುವ ಉತ್ತರವೂ ಅಸಂಬದ್ಧವಾಗೇ  ಇರುತ್ತದೆ,  

” ತರ್ಕಕ್ಕಿಂತ ಜ್ಞಾನ ಮುಖ್ಯ  ” ಎಂದು ಹೇಳುತ್ತಾನೆ. 

ಶ್ರೀ 

ಮೂಲ : ಗೊತ್ತಿಲ್ಲ 

ಇಂಗ್ಲಿಷಿನಿಂದ  ಕನ್ನಡಕ್ಕೆ  ಅನುವಾದಿಸಿದ್ದು 

2 thoughts on “ತರ್ಕ ಮತ್ತು ಜ್ಞಾನ !! ಗುರು ಶಿಷ್ಯರ ಸಂಭಾಷಣೆ…

  1. ಇಂದಿನ ಯುವ ಜನತೆಗೆ ಎಲ್ಲವೂ Google ಮೂಲಕ ಬೆರಳುಗಳ ಅಡಿಯಲ್ಲಿಯೇ ಸಿದ್ಧವಾಗಿ ಸಿಗುವ ಕಾರಣ ‌ಅಲೋಚನೆ ಮಾಡುವುದನ್ನೇ ಮರೆತು ಹೋಗಿರುವುದು ಆಘಾತಕಾರಿ

    Like

Leave a comment