” NO ಅಥವಾ ಆಗಲ್ಲ ” ಅಂತ ಹೇಳಲು ಹಿಂದೇಟು ಏಕೆ ?

NO ಅಥವಾ ಆಗಲ್ಲ    ಅಂತ ಹೇಳುವುದು ಅಷ್ಟು ಸುಲಭ ಅಲ್ಲ, ಹಾಗೇನಾದರು ಹೇಳಿದರೆ ಅದರ ಪರಿಣಾಮ ಎದುರಿಸುವುದು ತುಂಬ ಕಷ್ಟ ಅಂತ ತುಂಬ ಜನರ ಅಭಿಪ್ರಾಯ. ಅದು ಕಾರ್ಯ ಕ್ಷೇತ್ರದಲ್ಲಾಗಬಹುದು, ಸ್ನೇಹಿತರು ಮತ್ತು ಬಂಧುಗಳ ನಡುವೆಯಲ್ಲಾದರೂ ಆಗಬಹುದು.   ನೀವು ನಿಮ್ಮ   ಅಭಿಪ್ರಾಯ ತಿಳಿಸುವಾಗ , ಸ್ನೇಹಿತರಿಗೆ ಅಥವಾ ಬಂಧುಗಳಿಗೆ ಏನಾದರು   ಹಣ ಕಾಸಿನ ಸಹಾಯ ಮಾಡುವಾಗ  ಅಥವಾ   ಕೆಲಸ ಮಾಡುವ ಜಾಗದಲ್ಲಿ  ನಿಮ್ಮ ಕೈ ಕೆಳಗೆ ಮಾಡುವವರಿಗೆ ಮತ್ತು ಮೇಲಧಿಕಾರಿಗೆ ಆಗಲ್ಲ  ಅಂತ ಹೇಳುವ ಪರಿಸ್ಥಿತಿ ಬರಬಹುದು.  ನೀವೆಷ್ಟು ಸಲ ಇಂತ  ಪರಿಸ್ಥಿತಿಯಲ್ಲಿ ಆಗಲ್ಲ ಅಂತ ಹೇಳಿದ್ದಿರಾ?  ಹೇಳಬೇಕೆಂದಿದ್ದರು ಹೇಳದೆ ತೊಂದರೆ ಅನುಭವಿಸಿದ್ದೀರಾ? ಅಥವಾ ಹೇಳಿ ತೊಂದರೆ ಅನುಭವಿಸಿದ್ದೀರಾ?  ಪ್ರತಿಯೊಬ್ಬರಿಗೂ ಯಾವುದೋ  ಒಂದು ಸಮಯದಲ್ಲಿ ಖಂಡಿತವಾಗಿಯೂ ಈ ರೀತಿಯ ಇಕ್ಕಟ್ಟಿನ  ಸನ್ನಿವೇಶ ಬಂದಿರುತ್ತದೆ. 

ಅನೇಕ ಜನರು  ಆಗಲ್ಲ ಅಂತ ಹೇಳದಿದ್ದರೂ ಅಥವಾ ಹೇಳಿದರೂ ತೊಂದರೆ ಅನುಭವಿಸುವುದು  ನಾವೇ  ಎಂದು ಹೇಳುವುದನ್ನು ನಾನು ಕೇಳಿದ್ದೇನೆ.  ಯಾರೋ ಗೊತ್ತಿಲ್ಲದ ವ್ಯಕ್ತಿಗೆ  ಅಥವಾ  ಮನೆಯವರಿಗೆ  ನಾವು ಬಹಳ ತುಂಬ ಸುಲಭವಾಗಿ  ಆಗಲ್ಲ ಅಂದುಬಿಡುತ್ತೇವೆ. ಯಾಕಂದರೆ ಏನನ್ನು ಕಳೆದುಕೊಳ್ಳುವ ಭಯ ಇರುವುದಿಲ್ಲ ಮತ್ತು ಅವರು ನಮ್ಮನ್ನು ಅರ್ಥ  ಮಾಡಿಕೊಳ್ಳುತ್ತಾರೆ ಎಂಬ ಭರವಸೆ ಇರುತ್ತದೆ.  ಆಗಲ್ಲ ಅಂತ ಹೇಳಬೇಕೋ ಅಥವಾ ಹೇಳಬಾರದೋ   ಎಂಬ ಸಂದಿಗ್ದ ಪರಿಸ್ಥಿತಿ ಯಾವಾಗ ಬರುತ್ತದೆ ಅಂದರೆ  ಎದುರಿಗಿರುವ ವ್ಯಕ್ತಿ  ಸ್ನೇಹಿತ, ಸಂಬಂಧಿಕ, ಅಥವಾ ಕೆಲಸದಲ್ಲಿ ನಿಮ್ಮ ಮೇಲಧಿಕಾರಿ, ಸಹದ್ಯೋಗಿ  ಇದ್ದಾಗ ಮಾತ್ರ.    ಅದಕ್ಕೆ ಒಂದು ಉದಾಹರಣೆ ಹೇಳುತ್ತೇನೆ. ನಿಮಗೆ ಯಾವುದೊ ಒಂದು ಭಾನುವಾರ ಮನೆಯಲ್ಲಿಯೇ ಇರಬೇಕು,  ಎಲ್ಲಿಗೂ ಹೋಗುವುದು ಬೇಡ, ಸುಮ್ಮನೆ ಕಾಲ ಕಳೆದುಬಿಡೋಣ ಅಂದುಕೊಂಡಿರುತ್ತೀರಿ. ಆಗ ನಿಮ್ಮ ಒಬ್ಬ ಸ್ನೇಹಿತರು ಫೋನ್ ಮಾಡಿ ನಾವು ಹೊರಗಡೆ ಹೋಗುತ್ತಿದ್ದೇವೆ ನಮ್ಮ ಮಕ್ಕಳನ್ನು ನಿಮ್ಮ ಮನೆಯಲ್ಲಿ ಬಿಡೋಣ ಅಂತ ಇದ್ದಿವಿ ಎಂದು ಹೇಳುತ್ತಾರೆ. ಅದಕ್ಕೆ ನೀವು ಏನು ತೊಂದರೆ ಇಲ್ಲ ಬಿಟ್ಟುಹೋಗಿ ನಾವು ನೋಡಿಕೊಳ್ಳುತ್ತೀವಿ ಎನ್ನುತ್ತೀರಾ? ಅಥವಾ ನಾವು ಹೊರಗಡೆ ಹೋಗ್ತಾ ಇದ್ದೀವಿ ಅಂತ ಸುಳ್ಳು ಹೇಳ್ತೀರಾ?  ಅಥವಾ ನಿಜವಾದ ಕಾರಣವನ್ನು   ಮರೆಮಾಚದೇ  ಹೇಳುತ್ತೀರಾ?

ಇಂಥ ಪರಿಸ್ಥಿತಿಯಲ್ಲಿ ನಿಮಗೆ ಸಿಗುವ  ಆಯ್ಕೆ  ಯಾವುದು ಅಂದರೆ  ಒಂದೋ   ನಿಜವಾದ ಕಾರಣ ಹೇಳಿ ಆಗಲ್ಲ ಅಂತ  ಹೇಳುವುದು.  ಎರಡನೆಯದು  ಸುಳ್ಳು ಸಬೂಬು  ಹೇಳಿ ಆಗಲ್ಲ  ಅಂತ ಹೇಳುವುದು.  ಮೂರನೆಯದು  ಆಗಲ್ಲ ಅಂತ ಹೇಳಲು ಆಗದೆ ಆ ಕಾರ್ಯವನ್ನು ಮಾಡುವುದು.  ಎಲ್ಲರಿಗು ಯಾವುದು  ಪ್ರಿಯ ಅಂದರೆ ಸುಳ್ಳು ಸಬೂಬು ಹೇಳಿ ಆಗಲ್ಲ ಅನ್ನುವುದು ಅಲ್ಲವೇ? ಯಾಕಂದರೆ ಆ ಸುಳ್ಳಿನಿಂದ ಎದುರುಗಡೆ ವ್ಯಕ್ತಿಗೆ ನೋವು ಆಗುವುದಿಲ್ಲ ಅನ್ನುವ  ಭಾವನೆ.   ಬಹಳಷ್ಟು ಸಲ ಈ ತರಹದ ಸಮಯದಲ್ಲಿ ಸಹದ್ಯೋಗಿ, ಸ್ನೇಹಿತರು ಮತ್ತು ಸಂಬಂಧಿಕರು  ಆದರೆ   ಸುಳ್ಳು ಸಬೂಬು  ಹೇಳಿ  ಆಗಲ್ಲ ಅನ್ನುವುದೇ  ನಮಗೆ ಕಾಣಿಸುವ ದಾರಿ.

ಕಾರ್ಯ ಕ್ಷೇತ್ರದಲ್ಲಿ  ಮೇಲಾಧಿಕಾರಿಗೆ  ಆಗಲ್ಲ ಅನ್ನುವ ಆಯ್ಕೆ  ತುಂಬ ಕಮ್ಮಿ. ಯಾಕಂದರೆ ತುಂಬ ಜನಕ್ಕೆ   ಕೆಲಸದ ಅಭದ್ರತೆ ಇರುತ್ತದೆ.  ಎಲ್ಲರು ಹೇಳುವುದು  ಕೆಲಸದ ಮಾಡುವ ಸ್ಥಳದಲ್ಲಿ  ಆಗಲ್ಲ ಅನ್ನುವ ಆಯ್ಕೆ ಇರುವುದಿಲ್ಲ. ಅದರಿಂದ ನಿಮ್ಮ ಉದ್ಯೋಗದ  ಬೆಳವಣಿಗೆ ಕುಂಠಿತವಾಗುತ್ತದೆ ಅನ್ನುವವರೇ ಜಾಸ್ತಿ.  ನೀವು ಮಾಡುವ ಕೆಲಸವಾಗಲಿ ಅಥವಾ  ಅಲ್ಲದಿರಲಿ ನಿಮ್ಮ  ಮೇಲಧಿಕಾರಿ ಹೇಳಿದ ಮೇಲೆ ಮುಗಿತು ನೀವು ಮಾಡಲೇ ಬೇಕು ಅನ್ನುವ ವಾಡಿಕೆಯೇ ಇವತ್ತಿಗೂ ಮುಂದುವರಿದಿದೆ. ಆದರೆ ನಿಮ್ಮ ಮೇಲಾಧಿಕಾರಿಗು ಕೂಡ ಆಗಲ್ಲ ಅಂತ ಹೇಳಬಹುದು ಆದರೆ  ಜೊತೆಯಲ್ಲಿ ಅವರಿಗೆ ನೀವು ಯಾಕೆ  ಆಗಲ್ಲ ಎಂದು ಕಾರಣಗಳನ್ನು ಮತ್ತು ಅದರಿಂದ  ಆಗುವ ಪರಿಣಾಮಗಳನ್ನು ಮನವರಿಕೆ ಮಾಡಿಕೊಡಬೇಕಾಗುತ್ತದೆ. ಆಗಲ್ಲ ಅನ್ನುವುದಕ್ಕೆ ಕಾರಣ ನಿಮಗೆ ಮಾತ್ರ ಗೊತ್ತಿರುತ್ತದೆ ಹಾಗಾಗಿ ಅದನ್ನು ತಿಳಿ ಹೇಳಬೇಕಾದ ಜವಾಬ್ಧಾರಿ ಕೂಡ ನಿಮ್ಮದೇ ಆಗಿರುತ್ತದೆ.  ಕೊಡುವ ಕಾರಣಗಳು ಅರ್ಥಪೂರ್ಣವಾಗಿರಬೇಕು.  ಹೇಳುವ ಕೆಲಸ ಆಗುವುದಾದರೆ ನೀವು ಆಗಲ್ಲ ಅಂದರೆ ಅದು ಖಂಡಿತ ತಪ್ಪು. 

ಆಗಲ್ಲ ಅನ್ನುವ ಸಂದರ್ಭ ಯಾವಾಗಲು ಒಂದೇ ಇರುತ್ತದೆ ಅಂತಲೂ ಹೇಳಲಿಕ್ಕೆ ಆಗುವುದಿಲ್ಲ. ಕೆಲವೊಮ್ಮೆ ನೀವು ಮಾಡಲೇ ಬೇಕಾಗುತ್ತದೆ. ಆದರೆ ಎದುರಿಗಿರುವ ವ್ಯಕ್ತಿಗೆ ನೀವು ಅವರಿಗೆ ತುಂಬ ಅವಶ್ಯಕತೆ ಇರುವುದರಿಂದ ಮಾಡುತ್ತಿದ್ದೀರಿ ಅನ್ನುವುದು  ತಿಳಿದಿರಬೇಕು ಇಲ್ಲದಿದ್ದರೆ ಅವರು ನೀವು ಆಗಲ್ಲ ಅಂತ ಹೇಳದೆ ಮಾಡುವುದನ್ನೇ ನಿಮ್ಮ ದೌರ್ಬಲ್ಯ ಎಂದುಕೊಂಡು ಅದರ  ಅನುಕೂಲ ಪಡೆಯಲು ಶುರುಮಾಡುವ ಸಾಧ್ಯತೆ ಜಾಸ್ತಿ ಇರುತ್ತದೆ.  ಅದಕ್ಕೆ ಯಾವತ್ತಿಗೂ ಅವಕಾಶ ಕೊಡಬಾರದು. ಸ್ನೇಹಿತರಾಗಲಿ, ಸಂಬಂಧಿಕರಾಗಲಿ, ಸಹದ್ಯೋಗಿಯಾಗಲಿ ಅಥವಾ ನಿಮ್ಮ ಮೇಲಾಧಿಕಾರಿಯಾಗಲಿ ಅವರಿಗೆ ನೀವು ನಿಮ್ಮದಲ್ಲದ ಕೆಲಸವನ್ನು  ಆಗಲ್ಲ ಅಂತ ಹೇಳದೆ ಮಾಡಿದರೆ ಅದು ನಿಮ್ಮ ದೌರ್ಬಲ್ಯ ಅಂತ ಅನಿಸಬಾರದು. ಅದು ನೀವು ಅವರಿಗೆ ಕೊಡುತ್ತಿರುವ ಗೌರವ ಅಥವಾ  ಪ್ರೀತಿ ಅನ್ನುವುದು  ತಿಳಿದಿರಬೇಕು. ನಿಮಗೆ ಯಾವಾಗ ಆಗಲ್ಲ ಅನ್ನಬೇಕು ಅಥವಾ ಅನ್ನಬಾರದು ಎನ್ನುವ ತಿಳುವಳಿಕೆ ಇರಬೇಕು. ಇಲ್ಲದಿದ್ದರೆ ಅದು ಉದ್ದಟತನ ಆಗುತ್ತದೆ. 

ಹಾಗಾದರೆ ನಿಜವಾದ ಕಾರಣ  ಹೇಳಿ ಆಗಲ್ಲ  ಅಂದರೆ ಏನಾಗುತ್ತದೆ ? ಸಂಬಂಧ , ಸ್ನೇಹ ಹಾಳಾಗುತ್ತದೆ, ನಿಮ್ಮ ಮೇಲಾಧಿಕಾರಿ ಸಿಟ್ಟಾಗುತ್ತಾನೆ  ಎಂಬ ಅಭಿಪ್ರಾಯವಿದ್ದರೆ ಅದು ತಪ್ಪು.  ಸತ್ಯ ಮತ್ತು ನೇರವಾಗಿ  ಹೇಳುವುದರಿಂದ ನಿಮ್ಮಲ್ಲಿ ಆತ್ಮವಿಶ್ವಾಸ ಜಾಸ್ತಿ ಆಗುತ್ತದೆ. ಎದುರುಗಡೆ ಇರುವ ವ್ಯಕ್ತಿಯಲ್ಲಿ ನಿಮ್ಮ ಬಗ್ಗೆ ನಂಬಿಕೆ ಮತ್ತು  ಗೌರವ ಭಾವನೆ  ಜಾಸ್ತಿಯಾಗುತ್ತದೆ.  ಕೆಲವರಿಗೆ ಮೊದಲು ನೀವು ಹೇಳುವುದು ತುಂಬ ಒರಟು ಅನ್ನಿಸಬಹುದು ಆದರೆ ನಿಮ್ಮನ್ನು ಅರ್ಥ ಮಾಡಿಕೊಂಡಾದ ಮೇಲೆ ನಿಮ್ಮ ನೇರ ವ್ಯಕ್ತಿತ್ವದ ಅರಿವು ಆಗುತ್ತದೆ. ಪ್ರಿಯವಾದ ಸುಳ್ಳು ಹೇಳಿ ಅದರ ಭಾರ ಹೊರುವುದಕ್ಕಿಂತ ಅಪ್ರಿಯವಾದ ಸತ್ಯ ಹೇಳಿ ಮನಸ್ಸನ್ನು ಹಗುರ ಮಾಡಿಕೊಳ್ಳುವುದು ಮೇಲು ಅಲ್ಲವೇ.  ಸತ್ಯ ಹೇಳುವವರಿಗೆ ಸ್ನೇಹಿತರು, ಸಂಬಂಧಿಕರು ಸ್ವಲ್ಪ ಕಮ್ಮಿನೆ ಬಿಡಿ. ಎಲ್ಲೋ ಒಂದು ಕಡೆ ಸಂಬಂಧ, ಸ್ನೇಹ ಮತ್ತು ಕೆಲಸಗಳನ್ನೂ  ಸಮತೋಲನದಲ್ಲಿ ಇಟ್ಟುಕೊಳ್ಳುವ ಪ್ರಯತ್ನದಲ್ಲಿ ನಮ್ಮತನವನ್ನು ಕಳೆದುಕೊಳ್ಳುತ್ತಾ ಹೋಗುತ್ತಿದ್ದೀವಿ.   ನಮ್ಮಲ್ಲಿ ಆತ್ಮವಿಶ್ವಾಸ ಜಾಸ್ತಿ ಆದಷ್ಟು ಆಗಲ್ಲ   ಅನ್ನುವುದು ಸುಲಭವಾಗುತ್ತ ಹೋಗುತ್ತದೆ.

ಕೊನೆಪಕ್ಷ ತುಂಬ ಅವಶ್ಯಕ ಎಂದು ಅನಿಸಿದಾಗಲಾದರೂ  ಆಗಲ್ಲ ಅಂತ ಹೇಳುವ ಅಭ್ಯಾಸ ಮಾಡಿಕೊಳ್ಳುವುದು ಉತ್ತಮ. ಆದರೆ  ಆಗಲ್ಲ ಹೇಳುವುದಕ್ಕೆ ಸಂಕೋಚ ಮಾಡಿಕೊಳ್ಳುವ  ಅಥವಾ ಹಿಂದೇಟು ಹಾಕುವ ಅವಶ್ಯಕತೆ ಇಲ್ಲ.

ಶ್ರೀ

ಥಿಂಕ್ ರೈಟ್

8 thoughts on “” NO ಅಥವಾ ಆಗಲ್ಲ ” ಅಂತ ಹೇಳಲು ಹಿಂದೇಟು ಏಕೆ ?

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s