ಸುಮಾರು ಹದಿನೈದು ವರುಷಗಳ ಹಿಂದೆ ನನ್ನ ಸ್ನೇಹಿತರೊಬ್ಬರಿಗೆ ಮದುವೆ ಗೊತ್ತಾಗಿತ್ತು. ಅದಕ್ಕೂ ಮೊದಲು ಅವರು ಸರಿ ಸುಮಾರು ನಲವತ್ತು ಹುಡುಗಿಯರ ಮನೆಯ ಉಪ್ಪಿಟ್ಟಿನ ರುಚಿ ನೋಡಿದ್ದರು. ಅವರ ಜೊತೆ ನಾನು ಕೂಡ ಒಂದೆರೆಡು ಬಾರಿ ಉಪ್ಪಿಟ್ಟು ಕೇಸರಿಬಾತಿನ ರುಚಿ ನೋಡಿದ್ದೇ. ಹುಡುಗಿಯರನ್ನು ನೋಡಲು ಶುರು ಮಾಡಿ ನಾಲಕ್ಕು ವರುಷಗಳಾಗುತ್ತಾ ಬಂದಿತ್ತು. ಅವರ ವಯಸ್ಸು ಮೂವತ್ತ ನಾಲ್ಕು ಮುಗಿಯುತ್ತ ಬಂದಿದ್ದರಿಂದ ಮನೆಯಲ್ಲಿ ಅವರ ಮೇಲೆ ಒತ್ತಡ ಜಾಸ್ತಿ ಆಗಿ ಒಂದು ಹುಡುಗಿಯನ್ನು ಮದುವೆಯಾಗಲು ಒಪ್ಪಿದರು. ಅವರು ಮದುವೆಯಾಗಲು ಒಪ್ಪಿಗೆ ಕೊಟ್ಟಿದ್ದು ಅವರು ತಿಂದ ಇಪ್ಪತ್ತಾರನೇ ಉಪ್ಪಿಟ್ಟಿಗೆ, ಕ್ಷಮಿಸಿ ಅವರು ನೋಡಿದ ಇಪ್ಪತ್ತಾರನೇ ಹುಡುಗಿಗೆ. ಅದು ಆ ಹುಡುಗಿಯನ್ನು ನೋಡಿ ಅಮೋಘ ಒಂದು ವರುಷ ಕಳೆದ ನಂತರ. ಅವರಿಗಿರುವ ಆಗಾದ ನೆನಪಿನ ಶಕ್ತಿಗೆ ಇವತ್ತಿಗೂ ನಾನು ಅಭಿಮಾನಿಯಾಗಿದ್ದೇನೆ. ಅವರು ಯಾವಾಗಲು ಹುಡುಗಿಯನ್ನು ಅವಳು ಇರುವ ಪ್ರದೇಶದ ಹೆಸರಿನ ಮೇಲೆ ಗುರುತು ಇಟ್ಟುಕೊಳ್ಳುತ್ತಿದ್ದರು. ಹರಿಹರದ ಹುಡುಗಿ, ಕೊಪ್ಪದ ಹುಡುಗಿ, ಕೆ, ಆರ್ ಪುರಂ ಹುಡುಗಿ, ಸದಾಶಿವನಗರದ ಹುಡುಗಿ, ಜಯನಗರದ ಹುಡುಗಿ….. ಕೆಲವೊಮ್ಮೆ ಜಯನಗರ ೧೧ ನೇ ಕ್ರಾಸ್, ೨೨ನೇ ಕ್ರಾಸ್ ಹುಡುಗಿ ಅಂತಾನೂ ನೆನಪು ಇಟ್ಟುಕೊಳ್ಳುತ್ತಿದ್ದರು. ಕೊನೆಗೆ ಯಾವ ಹುಡುಗಿಯನ್ನು ಅತಿಯಾಗಿ ಜರಿದಿದ್ದರೋ ಅದೇ ಹುಡುಗಿಯನ್ನು ಮದುವೆಯಾಗಲು ಒಪ್ಪಿಗೆ ನೀಡಿದ್ದರು. ಮದುವೆ ದಲ್ಲಾಳಿ ಚೆನ್ನಾಗಿ ಏನು ಕೊಡಿಸಬೇಕೋ ಅದನ್ನು ಕೊಡಿಸ್ಸಿದ್ದರು. ಎಲ್ಲ ಕಾಂಚಾಣದ ಮಹಿಮೆ ಬಿಡಿ.
ನನ್ನ ಸ್ನೇಹಿತರು ಬಹಳ ಜಿಪುಣ ಸ್ವಭಾವದವರು. ಮದುವೆಗೆ ಆಗುವ ಎಲ್ಲ ಖರ್ಚುಗಳನ್ನು ಹುಡುಗಿಯ ತಂದೆ ತಲೆಗೆ ಕಟ್ಟಿದ್ದರು. ಆಸಾಮಿ ತಮ್ಮ ಮನೆಯ ಕಡೆ ನೆಂಟರಿಷ್ಟರಿಗೂ ಕೂಡ ಹುಡುಗಿ ತಂದೆಯಾ ಹಣದಿಂದ ಬಟ್ಟೆ ಕೊಡಿಸಿದ್ದರು. ಅದೆಲ್ಲ ಬಿಡಿ, ತಮ್ಮ ಒಳ ಚಡ್ಡಿಯನ್ನು ಸಹಿತ ಅವರ ದುಡ್ಡಲ್ಲೇ ತೆಗೆದುಕೊಂಡಿದ್ದರು ಅಂದರೆ ಲೆಕ್ಕ ಹಾಕಿ ಎಷ್ಟು ಜಿಪುಣ ಇರಬಹುದು ಅಂತ. ನಮಗೋ ಇವರ ಈ ಬುದ್ದಿಯಿಂದ ಮದುವೆ ನಿಂತರೆ ಏನು ಗತಿಯಪ್ಪಾ ಅನ್ನೋ ಚಿಂತೆ. ನಾನಂತು ಇವರ ಕಾಟ ಸಹಿಸಿಕೊಂಡ ಅವರ ಮಾವನವರಿಗೆ ದೂರದಿಂದಲೇ ಸಾಷ್ಟಾಂಗ ನಮಸ್ಕಾರ ಮಾಡಿದ್ದೆ. ಅಂತೂ ಇಂತೂ ಒಂದು ಶುಭ ಮಹೂರ್ತದಲ್ಲಿ ಯಾವುದೇ ತೊಂದರೆ ಇಲ್ಲದೆ ಮದುವೆ ಆಯಿತು. ಮದುವೆ ಆದ ಕೆಲವು ದಿನಗಳ ಕಾಲ ಅವರನ್ನು ನಾನು ಭೇಟಿ ಆಗಲಿಲ್ಲ. ಹೊಸದಾಗಿ ಮದುವೆ ಆಗಿದೆ ಸುಮ್ಮನೆ ಯಾಕೆ ತೊಂದರೆ ಕೊಡಬೇಕು ಅಂತ ನೋಡಲು ಹೋಗಲಿಲ್ಲ.
ಹದಿನೈದು ದಿನಗಳ ನಂತರ ಭೇಟಿಯಾದಾಗ, ಹೊಸದಾಗಿ ಮದುವೆ ಆದ ಸ್ನೇಹಿತರಿಗೆ ಚುಡಾಯಿಸುವ ಹಾಗೆ ಅವರ ಕಾಲು ಎಳೆಯಲು ಶುರು ಮಾಡಿದೆ. ಮಧುಚಂದ್ರಕ್ಕೆ ಎಲ್ಲಿಗೆ ಹೋಗಿದ್ರಿ? ಹೇಗೆ ಆಯಿತು? ಎಲ್ಲ ಸತುತ್ರ ಆಯ್ತಾ? ಅಂತ ಚುಡಾಯಿಸಲು ಶುರು ಮಾಡಿದೆ. ಅವರು ಮಧುಚಂದ್ರ ಹೇಗೆ ಆಯಿತು ಅಂತ ಹೇಳಲು ಶುರು ಮಾಡಿದರು. ಅವರ ಮಧುಚಂದ್ರ ಶುರುವಾಗಿದ್ದು ಮದುವೆ ಆಗಿ ಮೂರು ದಿನಗಳ ನಂತರ ಅಂತೆ. ಅವರು ಮಾವನ ಮನೆಯಿಂದ ವಾಪಸ್ಸು ಬಂದ ಮರುದಿನ ರಾತ್ರಿ ಹೆಂಡತಿಯನ್ನು ಕರೆದುಕೊಂಡು KSRTC ಬಸ್ನಲ್ಲಿ ಮೊದಲು ಧರ್ಮಸ್ಥಳ ಕ್ಕೆ ಹೋಗಿದ್ದರಂತೆ. ಬೆಳಗ್ಗಿನ ಜಾವ ಧರ್ಮಸ್ಥಳಕ್ಕೆ ತಲುಪಿ ಅಲ್ಲಿ ರೂಮ್ ಮಾಡಿ, ಬೆಳಿಗ್ಗಿನ ಉಪಹಾರ ಮುಗಿಸಿ ರಾತ್ರಿ ಪ್ರಯಾಣದ ಸುಸ್ತಿಗೆ ನಿದ್ದೆ ಹೋಗಿದ್ದರು. ಮಧ್ಯಾಹ್ನ ಎದ್ದು ದೇವಸ್ಥಾನದಲ್ಲಿ ಊಟ ಮಾಡಿ ಸಂಜೆ ತನಕ ನೇತ್ರಾವತಿ ನದಿ, ಬಾಹುಬಲಿ, ಅಣ್ಣಪ್ಪ… ಬೇರೆ ಬೇರೆ ಸ್ಥಳಗಳನ್ನು ನೋಡಿ ಸಂಜೆ ದೇವರ ದರ್ಶನ ಮಾಡಿದ್ದರು. ಮತ್ತೆ ಆ ರಾತ್ರಿ ಅಲ್ಲಿಂದ ಹೊರಟು ಹೊರನಾಡಿಗೆ ಬಸ್ಸಿನಲ್ಲಿ ಪ್ರಯಾಣ ಮಾಡಿದ್ದರು. ಬೆಳಿಗ್ಗೆ ಹೊರನಾಡು ತಲುಪಿ ಬೆಳಗ್ಗಿನ ಉಪಹಾರ ಮುಗಿಸಿ, ದೇವರ ದರ್ಶನ ಮಾಡಿ ಅಲ್ಲಿಂದ ಶೃಂಗೇರಿಗೆ ಪ್ರಯಾಣ ಮಾಡಿ ಸಂಜೆ ಅಲ್ಲಿ ದೇವರ ದರ್ಶನ ಮಾಡಿ, ಊಟ ದೇವಸ್ತಾನದಲ್ಲಿಯೇ ಮುಗಿಸಿದ್ದರು. ರಾತ್ರಿ ಅಲ್ಲಿಂದ ಬಸ್ಸಿನಲ್ಲಿ ಹೊರಟು ಅವರ ಮನೆ ದೇವರಾದ ನಂಜುಂಡೇಶ್ವರನ ದರ್ಶನ ಮಾಡಲು ಮೈಸೂರಿಗೆ ಪ್ರಯಾಣ ಮಾಡಿದ್ದರು. ಮೈಸೂರಿನಿಂದ ಸೀದಾ ನಂಜನಗೂಡಿಗೆ ಹೋಗಿದ್ದರು. ಅಲ್ಲಿಗೆ ಹೋಗುವಾಗಲೇ ಸಮಯ ೮ ಗಂಟೆ ಆಗಿದ್ದರಿಂದ ತಿಂಡಿಯನ್ನು ತಿನ್ನದೆ ನದಿಯಲ್ಲಿ ಸ್ನಾನ ಮಾಡಿ ದೇವರ ದರ್ಶನ ಮಾಡಿ ಹೊರಗೆ ಬಂದು ಪ್ರಸಾದವನ್ನೇ ಊಟ ಅಂದುಕೊಂಡು ತಿಂದಿದ್ದರು. ಪ್ರಯಾಣ ಮಾಡಿ ತುಂಬ ಆಯಾಸ ಆಗಿದ್ದರಿಂದ ಅಲ್ಲಿಯೇ ರೂಮ್ ಮಾಡಿಕೊಂಡು ತಂಗಿದ್ದರು. ಮೈಸೂರಿನಲ್ಲಿ ಹೋಟೆಲ್ ತುಂಬ ದುಭಾರಿ ಅಂತ ಅಲ್ಲಿಗೆ ಹೋಗದೆ ನಂಜನ ಗೂಡಿನಲ್ಲಿಯೇ ಉಳಿದು, ಮರು ದಿನ ಬೆಳಿಗ್ಗೆ ಅಲ್ಲಿಂದ ಬಸ್ಸಿನಲ್ಲಿ ಸೀದಾ ಬೆಂಗಳೂರಿಗೆ ಸಂಜೆ ವೇಳೆಗೆ ಬಂದು ತಲುಪಿದ್ದರು. ಸಿಕ್ಕಾಪಟ್ಟೆ ಸುಸ್ತು ಅಂತ ಹೇಳಿ ಒಂದು ದಿವಸ ಪೂರ್ತಿ ನಿದ್ದೆ ಮಾಡಿದ್ದರು. ಅಲ್ಲಿಗೆ ಅವರ ಮಧುಚಂದ್ರ ಮುಗಿದಿತ್ತು.
ಅವರ ಮಧುಚಂದ್ರದ ಬಗ್ಗೆ ಕೇಳುತ್ತ ಅವರದು ತೀರ್ಥಯಾತ್ರೆಯೋ ಅಥವಾ ಮದುಚಂದ್ರವೋ ಅನ್ನುವ ಗೊಂದಲದಲ್ಲಿ ನಾಳೆ ಸಿಗ್ತೀನಿ ಅಂತ ಹೇಳಿ ಹೊರಟುಬಂದೆ. ನಿಮಗೇನಾದರೂ ಗೊತ್ತಾದರೆ ಕಾಮೆಂಟ್ ಮಾಡಿ.
ಆಮೇಲೆ ಗೊತ್ತಾದದ್ದು – ಇಬ್ಬರ ಮನೆಯವರು ಹೊತ್ತುಕೊಂಡ ಹರಕೆ + ಮಧುಚಂದ್ರದ ಖರ್ಚನ್ನು ಒಂದರಲ್ಲೇ ಮುಗಿಸುವ ಉಪಾಯ ಅಂತೇ.
ಶ್ರೀ
ಥಿಂಕ್ ರೈಟ್