ಶ್ರೀ ಕೃಷ್ಣನ ಸಾವಿಗೆ ಒಂದು ಒನಕೆ ಹೇಗೆ ಕಾರಣವಾಯ್ತು ಗೊತ್ತೇ?

ಕುರುಕ್ಷೇತ್ರ ಮುಗಿದ ಮೇಲೆ ಶ್ರೀ ಕೃಷ್ಣನು ಯುದ್ಧದಲ್ಲಿ  ಗೆದ್ದ ಪಾಂಡವರನ್ನು ಕರೆದುಕೊಂಡು ರಾಜ್ಯವನ್ನು ಪಡೆಯಲು  ಹಸ್ತಿನಾಪುರಕ್ಕೆ ಬರುತ್ತಾನೆ. ಇಡೀ ಹಸ್ತಿನಾಪುರ  ಶೋಕದಲ್ಲಿ ಮುಳುಗಿರುತ್ತದೆ. ಕುರುಕ್ಷೇತ್ರದಲ್ಲಿ ದೃತರಾಷ್ಟ್ರನ ನೂರು ಮಕ್ಕಳು     ಭೀಮನಿಂದ  ಹತರಾಗಿರುತ್ತಾರೆ. ದೃತರಾಷ್ಟ್ರನ  ಇನ್ನೊಬ್ಬ ಮಗನಾದ ಯುಯುತ್ಸು  ( ದೃತರಾಷ್ಟ್ರ ಮತ್ತು  ಸುಂಗಂಧಳ ಮಗ) ಒಬ್ಬ ಮಾತ್ರ ಉಳಿದಿರುತ್ತಾನೆ.  ಯುಯುತ್ಸು  ಕುರುಕ್ಷೇತ್ರ ಶುರುವಾಗುವ ಮುನ್ನ ಕೊನೆ ಗಳಿಗೆಯಲ್ಲಿ ಪಾಂಡವರ ಕಡೆ ಸೇರಿ ಕೌರವರ ವಿರುದ್ಧ  ಯುದ್ಧ ಮಾಡಿರುತ್ತಾನೆ.  ದುಃಖ ಸಾಗರದಲ್ಲಿ  ಮುಳುಗಿದ್ದ ದೃತರಾಷ್ಟ್ರ ಮತ್ತು ಗಾಂಧಾರಿಯನ್ನು ಭೇಟಿ ಮಾಡಿ ಅವರನ್ನು ಸಂತೈಯಿಸಲು  ಶ್ರೀ ಕೃಷ್ಣನು  ಪಾಂಡವರ ಜೊತೆಯಲ್ಲಿ ಬರುತ್ತಾನೆ.  ಗಾಂಧಾರಿಗೆ ಶ್ರೀ ಕೃಷ್ಣನ ಮೇಲೆ ಅಪಾರವಾದ ಕೋಪವಿರುತ್ತದೆ. ಅವಳು  ಶ್ರೀ ಕೃಷ್ಣನು ಮನಸ್ಸು ಮಾಡಿದ್ದರೆ ಯುದ್ಧವನ್ನು ತಡೆಯಬಹುದಿತ್ತು ಆದರೆ  ತಡೆಯದೆ  ಅಣ್ಣ ತಮ್ಮಂದಿರೇ  ಒಬ್ಬರಿಗೊಬ್ಬರು ಯುದ್ಧ ಮಾಡಿಕೊಳ್ಳುವಂತೆ ಮಾಡಿದನು ಎಂದು ಅಪವಾದ ಹೊರಿಸುತ್ತಾಳೆ. ಅವಳು ತನ್ನ  ಎಲ್ಲ ಮಕ್ಕಳನ್ನು ಕಳೆದುಕೊಳ್ಳಲು ಶ್ರೀ ಕೃಷ್ಣನೇ ಕಾರಣ ಎಂದು ದೂರುತ್ತಾಳೆ. ಶ್ರೀ ಕೃಷ್ಣನು ಯುದ್ಧ ನಿಲ್ಲಿಸಲು ತಾನು ಮಾಡಿದ ಪ್ರಯತ್ನಗಳು, ದುರ್ಯೋಧನನ  ಅಹಂಕಾರ ಮತ್ತು ಅಧರ್ಮದ ಹಾದಿ  ಹೇಗೆ ಎಲ್ಲವನ್ನು ಹಾಳು ಮಾಡಿತು ಎಂಬುದನ್ನು ವಿವರಿಸಲು ಪ್ರಯತ್ನ ಮಾಡುತ್ತಾನೆ. ಆದರೆ ದುಃಖ ಮತ್ತು ಕೋಪದಲ್ಲಿದ್ದ ಗಾಂಧಾರಿಯು ಸಮಾಧಾನವಾಗದೆ  ಶ್ರೀ ಕೃಷ್ಣನಿಗೆ  ಹೇಗೆ ಅಣ್ಣ ತಮ್ಮಂದಿರಾದ ಪಾಂಡವರು ಮತ್ತು ಕೌರವರು ತಮ್ಮ ತಮ್ಮಲ್ಲೇ ಯುದ್ಧ ಮಾಡಿ ಕೌರವರೆಲ್ಲ ನಾಶವಾದರೋ ಹಾಗೆಯೇ ಯಾದವ  ವಂಶದ ನೀವು ಕೂಡ ಹಾಗೆಯೇ ಬಡಿದಾಡಿಕೊಂಡು ನಾಶವಾಗಿ ಎಂದು ಶಾಪ ನೀಡುತ್ತಾಳೆ. ಶ್ರೀ ಕೃಷ್ಣನು ಮುಗುಳ್ನಕ್ಕು ಅಲ್ಲಿಂದ ಹೊರಡುತ್ತಾನೆ. ಎಲ್ಲವನ್ನು ಬಲ್ಲ ಶ್ರೀ ಕೃಷ್ಣನಿಗೆ ಈ ಶಾಪ ಯಾವುದಕ್ಕೆ ನಾಂದಿ ಎಂದು ಚೆನ್ನಾಗಿ ಗೊತ್ತಿರುತ್ತದೆ.  ರಾಜ್ಯವನ್ನು ಪಡೆದ  ಪಾಂಡವರು ಹಸ್ತಿನಾಪುರವನ್ನು ಆಳಲು ಶುರು ಮಾಡುತ್ತಾರೆ. ಅತ್ತ ಶ್ರೀ ಕೃಷ್ಣ ದ್ವಾರಕಕ್ಕೆ ಹೋಗಿ ತನ್ನ ಮಕ್ಕಳು ಮೊಮ್ಮಕ್ಕಳೊಂದಿಗೆ ರಾಜ್ಯಭಾರ ನಡೆಸಲು ಶುರು ಮಾಡುತ್ತಾನೆ.

ಶ್ರೀ ಕೃಷ್ಣನಿಗೆ ೧೬೧೦೮ ಹೆಂಡತಿಯರು ಮತ್ತು ಒಬ್ಬೊಬ್ಬರಿಂದ ೧೦ ಮಕ್ಕಳನ್ನು ಪಡೆದ ಎಂದು ಹೇಳುತ್ತಾರೆ. ಅದರ ಬಗ್ಗೆ ಪರ ಮತ್ತು ವಿರೋಧ ಎರಡು ಇದೆ. ಶ್ರೀ ಕೃಷ್ಣ ನರಕಾಸುರನ ಬಂಧನದಿಂದ ಬಿಡುಗಡೆಗೊಂಡ ೧೬ ಸಾವಿನ ಕನ್ಯೆಯರನ್ನು ಕೇವಲ  ಹೊರ ಜಗತ್ತಿನ ಜನಗಳಿಂದ  ಬರುವ  ಕೆಟ್ಟ ಮಾತುಗಳಿಂದ ಬಚಾಯಿಸಲು ಹೆಂಡತಿಯಾಗಿ ಸ್ವೀಕರಿಸಿದ ಅಂದು ಕೂಡ ಹೇಳುತ್ತಾರೆ.   ಶ್ರೀ ಕೃಷ್ಣನು ಶಾಸ್ತ್ರೋಕ್ತವಾಗಿ ಮದುವೆ ಅದರಲ್ಲಿ  ೮ ಜನ ಮಾತ್ರ ರಾಣಿಯರು.   ಅವರು ರುಕ್ಹ್ಮಿಣಿ, ಸತ್ಯಭಾಮ, ಕಲಿಂಧಿ, ಲಕ್ಷಣ , ಭದ್ರ, ನಗ್ನಜಿತಿ, ಜಾಂಬವತಿ ಮತ್ತು ಮಿತ್ರವಿಂದ. ಶ್ರೀ ಕೃಷ್ಣ ಪ್ರತಿಯೊಬ್ಬರಿಂದ ೧೦ ಮಕ್ಕಳನ್ನು ಪಡೆಯುತ್ತಾನೆ. ಅವರಲ್ಲಿ  ಶ್ರೀ ಕೃಷ್ಣ ಮತ್ತು  ರುಕ್ಹ್ಮಿಣಿಯ ಹಿರಿಯ ಮಗ ಪ್ರದ್ಯುಮ್ನ ಅತಿ ಸುಂದರ  ಮತ್ತು ಮಹಾಪರಾಕ್ರಮಿಯಾಗಿರುತ್ತಾನೆ. ಅವನು ಕೂಡ ವಿಷ್ಣುವಿನ ಅವತಾರವೇ  ಆಗಿರುತ್ತಾನೆ.    ಅಭಿಮನ್ಯು ಮತ್ತು ಉಪ ಪಾಂಡವರಿಗೆ ಯುದ್ಧ ತರಬೇತಿಯನ್ನು ನೀಡಿದ್ದು ಪ್ರದ್ಯುಮ್ನನೇ.     ಪ್ರದ್ಯುಮ್ನ  ಕುರುಕ್ಷೇತ್ರದ ಯುದ್ಧದ ಸಮಯದಲ್ಲಿ  ಯುದ್ಧದಲ್ಲಿ ಬಾಗವಹಿಸದೆ ಬಲರಾಮನ ಜೊತೆಯಲ್ಲಿ ತೀರ್ಥಯಾತ್ರೆಗೆ  ಹೋಗಿರುತ್ತಾನೆ.  ಶ್ರೀ ಕೃಷ್ಣ ಮತ್ತು ಜಾಂಬವತಿಯ ಮಗ ಸಾಂಬ ನೋಡಲು  ಶ್ರೀ ಕೃಷ್ಣನ ಹಾಗೆ ಇರುತ್ತಾನೆ ಆದರೆ ತುಂಬ ಬೇಜವಾಬ್ಧಾರಿ ಮನುಷ್ಯನಾಗಿರುತ್ತಾನೆ. ಈತ ದುರ್ಯೋಧನನ ಮಗಳನ್ನು ( ಲಕ್ಷ್ಮಣಾ ) ಸ್ವಯಂವರದಿಂದ ಕದ್ದೊಯ್ಯಲು ಬಂದು ಕೌರವರಿಂದ ಬಂದಿಯಾಗಿದ್ದ ಕೂಡ. ನಂತರ ಬಲರಾಮ ಮಧ್ಯ ಪ್ರವೇಶಿಸಿ ಅವನನ್ನು ಕೌರವರಿಂದ ಬಿಡುಗಡೆ ಮಾಡಿಸಿದ್ದನು. ಬೇರೆ ಯಾರು ಲಕ್ಷ್ಮಣಾಳನ್ನು  ಮದುವೆ  ಆಗಲು ಒಪ್ಪದೇ ಇದ್ದ ಕಾರಣ ಲಕ್ಷ್ಮನಾಳನ್ನು ಈತನೇ ಮದುವೆಯಾಗಿದ್ದ.  ಇವನ ಈ ರೀತಿಯ ಬೇಜವಾಬ್ಧಾರಿ ವರ್ತನೆಗಳೇ  ಯಾದವ  ವಂಶದ ನಾಶಕ್ಕೆ ಕಾರಣವಾಗುತ್ತದೆ. 

ಕುರುಕ್ಷೇತ್ರ ನಡೆದ ೩೫ ವರ್ಷಗಳ ಕಾಲ ಶ್ರೀ ಕೃಷ್ಣ ನಡೆಸುವ ರಾಜ್ಯಭಾರದಲ್ಲಿ ಯದು ವಂಶದ ಪ್ರಜೆಗಳು  ಯಾವುದೆ  ಶತ್ರುಗಳ ಭಯವಿಲ್ಲದೆ,  ಕಷ್ಟವಿಲ್ಲದೆ, ಸವಾಲುಗಳಿಲ್ಲದೆ  ಸುಖವಾಗಿ ಜೀವನ ನಡೆಸುತ್ತಿದ್ದರು.  ಜಾಸ್ತಿಯಾದರೆ ಅಮೃತವು  ವಿಷವೇ ಅಂದಂತೆ ಸುಖದಲ್ಲೇ ಮೀಯುತ್ತಿದ್ದ ಪ್ರಜೆಗಳು ನಿಧಾನವಾಗಿ ಜವಾಬ್ಧಾರಿ ಮರೆತು ಕುಡಿತದ ದಾಸರಾಗತೊಡಗಿದರು. 

ಒಂದು ದಿನ ಸಾಂಬ  ಎಂದಿನಂತೆ ಮಾಡಲು ಕೆಲಸವಿಲ್ಲದೇ ಗರ್ಭಿಣಿಯ ತರಹ ವೇಷ ಧರಿಸಿಕೊಂಡು  ತನ್ನ ಗೆಳೆಯರ ಜೊತೆಯಲ್ಲಿ ತಮಾಷೆ ಮಾಡಿಕೊಂಡು ಹೋಗುತ್ತಿದ್ದ.  ಅವನಿಗೆ ಶ್ರೀ ಕೃಷ್ಣನನ್ನು ಭೇಟಿ ಮಾಡಲು ಬರುತ್ತಿದ್ದ  ವಿಶ್ವಾಮಿತ್ರ, ದೂರ್ವಾಸ, ವಸಿಷ್ಠ ಮತ್ತು ನಾರದರು ಕಾಣಿಸುತ್ತಾರೆ. ಸಾಂಬನು ಅವರ ಹತ್ತಿರ ಹೋಗಿ ಗರ್ಭಿಣಿ ಸ್ತ್ರೀಯ ಹಾಗೆ ನಟಿಸುತ್ತಾ ನನಗೆ ಯಾವ ಮಗು ಹುಟ್ಟುತ್ತದೆ  ಹೇಳುತ್ತೀರಾ ಎಂದು ಕಿಚಾಯಿಸುವ ದನಿಯಲ್ಲಿ ಕೇಳುತ್ತಾನೆ.  ದೂರ್ವಾಸರಿಗೆ ಇದು ಸಾಂಬನ ತಮಾಷೆ  ಎಂದು ಗೊತ್ತಾಗಿ ಸಿಟ್ಟಿನಿಂದ  ನಾಳೆಯೇ ಒಂದು ಒನಕೆಗೆ ಜನ್ಮ ನೀಡುತ್ತೀಯ ಮತ್ತು ಅದು ಇಡೀ ಯಾದವ  ವಂಶವನ್ನು ನಾಶ ಮಾಡುತ್ತದೆ ಎಂದು ಶಾಪ ನೀಡುತ್ತಾರೆ. ಅದಕ್ಕೆ ಸಾಂಬ ಹೆದರಿ ಅಲ್ಲಿಂದ ಕೃಷ್ಣನ ಅಜ್ಜ ರಾಜ ಉಗ್ರಸೇನನ ಬಳಿ ಓಡಿ  ಹೋಗಿ ಆದ ಘಟನೆಯನ್ನು ವಿವರಿಸುತ್ತಾನೆ. ರಾಜ ಉಗ್ರಸೇನನು ಸಾಂಬನಿಗೆ ಒನಕೆಯನ್ನು ಕುಟ್ಟಿ ಪುಡಿ ಮಾಡಿ ಪ್ರಭಾಸ ಎಂಬ ಕಡಲಗೆ ಹಾಕಲು ಹೇಳುತ್ತಾನೆ. ದೂರ್ವಾಸರ ಶಾಪದಂತೆ  ಮರುದಿನ ಸಾಂಬನು ಒನಕೆಗೆ ಜನ್ಮ ನೀಡುತ್ತಾನೆ. ರಾಜ ಉಗ್ರಸೇನ ಹೇಳಿದಂತೆ ಒನಕೆಯನ್ನು ಪುಡಿ ಮಾಡಿ  ಪ್ರಭಾಸ ಎಂಬ ಕಡಲಿಗೆ ಹಾಕುತ್ತಾನೆ. ಕಡಲಲ್ಲಿರುವ ಒಂದು ಮೀನು ಒನಕೆಯ ಲೋಹದ ಒಂದು ತುಂಡನ್ನು ನುಂಗುತ್ತದೆ. ಉಳಿದ  ತುಂಡುಗಳು ತೇಲಿ ಬಂದು ಕಡಲ ದಡದಲ್ಲಿ ಬಂದು ಸೇರುತ್ತದೆ. ಸ್ವಲ್ಪ ದಿನಗಳ ನಂತರ ಆದರ ಮೇಲೆ ಹುಲ್ಲಿನ  ಜೊಂಡುಗಳು ಬೆಳೆಯಲು ಶುರು ಮಾಡುತ್ತವೆ. 

ಈ ಘಟನೆ ನಡೆದ ಕೆಲವು ದಿನಗಳ ನಂತರ ದ್ವಾರಕದಲ್ಲಿ ಅಶಾಂತಿ ನೆಲೆಸಲು ಶುರು ಮಾಡುತ್ತದೆ.  ಕಳ್ಳತನ, ಮೋಸ, ದರೋಡೆಗಳು ನಡೆಯಲು ಶುರು ಆಗುತ್ತದೆ.  ಇದರಿಂದ ಶ್ರೀ ಕೃಷ್ಣನಿಗೆ ಅತೀವ ಬೇಸರ ಆಗಿ ಮನಃಶಾಂತಿ ಕದಡಿ   ತೀರ್ಥಕ್ಷೇತ್ರವಾದ ಪ್ರಭಾಸಕ್ಕೆ ಹೊರಡಲು ಎಲ್ಲರನ್ನು ಅನುವುಮಾಡುತ್ತಾನೆ.   ಶ್ರೀ ಕೃಷ್ಣನ  ಜೊತೆಯಲ್ಲಿ ಎಲ್ಲ ಯಾದವ  ವಂಶದವರು ಹೊರಟು ಪ್ರಭಾಸ ತೀರ್ಥಕ್ಷೇತ್ರಕ್ಕೆ ಬಂದು ತಲುಪುತ್ತಾರೆ.  ಶ್ರೀ ಕೃಷ್ಣನು ಎಲ್ಲರಿಗು  ಪ್ರಭಾಸ ಕಡಲ ತೀರದಲ್ಲಿ ವಿಶ್ರಾಂತಿ ತೆಗೆದುಕೊಳ್ಳಲು  ಸೂಚಿಸುತ್ತಾನೆ. ಅಲ್ಲಿಯೇ ಉಳಿದುಕೊಂಡ ಎಲ್ಲರು ಎಂದಿನಂತೆ ಮಧುಪಾನ ಮಾಡಲು  ಶುರು ಮಾಡುತ್ತಾರೆ. ಮದ್ಯದ ಅಮಲಿನಲ್ಲಿ ಸಾತ್ಯಕಿ ಮತ್ತು ಕೃತವರ್ಮನ ನಡುವೆ ಕುರುಕ್ಷೇತ್ರದಲ್ಲಿ ನಡೆದ ಯುದ್ಧದ ಬಗ್ಗೆ ಚರ್ಚೆ ಶುರುವಾಗುತ್ತದೆ. ಕೃತವರ್ಮನು ಎಲ್ಲರು ಮಲಗಿದ್ದಾಗ ಅಶ್ವತ್ತಾಮನ ಜೊತೆಗೆ ಬಂದು ಸೇನಾ ಶಿಬಿರದಲ್ಲಿ ಮಲಗಿದ್ದ ಉಪಪಾಂಡವರನ್ನು ಕೊಲ್ಲಲು  ಸಹಾಯ ಮಾಡಿರುತ್ತಾನೆ.  ಸಾತ್ಯಕಿ ಆ ವಿಷಯವನ್ನು ಎತ್ತಿ  ಕೃತವರ್ಮನನ್ನ ಕಿಚಾಯಿಸಲು ಶುರುಮಾಡುತ್ತಾನೆ. ಕುಡಿತದ ಮತ್ತಿನಲ್ಲದ್ದವರಿಗೆ ಚರ್ಚೆ ಜಗಳಕ್ಕೆ ತಿರುಗಿ ಹೊಡದಾಟದ ಮಟ್ಟಕ್ಕೆ ಹೋಗುವುದು ಗೊತ್ತೇ ಆಗುವುದಿಲ್ಲ.   ಹೊಡೆದಾಟದಲ್ಲಿ ಸಾತ್ಯಕಿ ಕೃತವರ್ಮನನ್ನ ಸಾಯಿಸಿಬಿಡುತ್ತಾನೆ. ಅಷ್ಟೇ ಅಲ್ಲದೆ ಬಿಡಿಸಲು ಬಂದ  ಕೃತವರ್ಮನ  ಕಡೆಯವರನ್ನು  ಕೊಂದುಬಿಡುತ್ತಾನೆ. ಶ್ರೀ ಕೃಷ್ಣ  ಸಾತ್ಯಕಿಯನ್ನು ತಡೆಯಲು ಬರುವಷ್ಟರಲ್ಲಿ   ಅನಾಹುತ ಆಗಿ ಹೋಗಿರುತ್ತದೆ.   ಕೋಪಗೊಂಡ ಕೃತವರ್ಮನ ಕಡೆಯವರು ಸಾತ್ಯಕಿಯನ್ನು  ಕೊಲ್ಲಲು ಸುತ್ತುವರೆಯುತ್ತಾರೆ. ಪ್ರದ್ಯುಮ್ನ ಸಾತ್ಯಕಿಯನ್ನು  ಬಿಡಿಸಲು ಹೋಗುತ್ತಾನೆ. ಆದರೆ ಸಾತ್ಯಕಿಯನ್ನು  ಅವರಿಂದ ಬಿಡಿಸಲು ಆಗುವುದಿಲ್ಲ. ಆಗ ಶ್ರೀ ಕೃಷ್ಣ ಅವರನ್ನು ಹೊಡೆಯಲು ಕಡಲ ತೀರದಲ್ಲಿ  ಎತ್ತರಕ್ಕೆ ಬೆಳೆದಿದ್ದ   ಹುಲ್ಲಿನ ಜೊಂಡನ್ನು ಕೈಗೆತ್ತಿಕೊಳ್ಳುತ್ತಾನೆ. ಕೂಡಲೇ ಆ  ಹುಲ್ಲಿನ ಜೊಂಡು ಒನಕೆಯಾಗಿ ಬದಲಾಗುತ್ತದೆ. ಆ ಹುಲ್ಲು ಸಾಂಬನು ಪುಡಿ ಮಾಡಿ ಕಡಲಿಗೆ ಎಸೆದಿದ್ದ ಒನಕೆಯ ತುಂಡುಗಳ ಮೇಲೆ ಬೆಳೆದಿದ್ದ ಹುಲ್ಲೇ ಆಗಿರುತ್ತದೆ. ಅದನ್ನು ನೋಡಿ ಎಲ್ಲರು ಹುಲ್ಲನ್ನು ಕೀಳುತ್ತಾರೆ. ಅವು ಒನಕೆಯಾಗಿ ಬದಲಾಗುತ್ತ ಹೋಗುತ್ತದೆ. ಅದರಲ್ಲೇ ಎಲ್ಲರು ಹೊಡೆದಾಡಲು ಶುರು ಮಾಡುತ್ತಾರೆ. ಕುಡಿತದ ಮತ್ತಿನಲ್ಲಿದ್ದ ಎಲ್ಲರು  ನೋಡ ನೋಡುತ್ತಲೇ ಒಬ್ಬರಿಗೊಬ್ಬರು ಹೊಡೆದಾಡಿಕೊಳ್ಳುತ್ತ ಸತ್ತು ಹೋಗುತ್ತಾರೆ. ಶ್ರೀ ಕೃಷ್ಣ,  ದಾರುಕ, ವಭೃ ಮೂರು ಜನ ಮಾತ್ರ ಉಳಿಯುತ್ತಾರೆ.  ಶ್ರೀ ಕೃಷನು ದಾರುಕನನ್ನು ಅರ್ಜುನನ ಹತ್ತಿರ ಹೋಗಿ ಅವನನ್ನು ಸಹಾಯಕ್ಕೆ ಕರೆದುಕೊಂಡು ಬರಲು ಕಳಿಸುತ್ತಾನೆ. ವಭೃ ಬಲರಾಮನ ಹತ್ತಿರ ವಿಷಯ ತಿಳಿಸಲು ಹೋಗುತ್ತಾನೆ.  ಹೊಡೆದಾಟದಿಂದ ಸುಸ್ತಾದ ಶ್ರೀ ಕೃಷ್ಣನು ಅಲ್ಲಿಯೇ ಸಮೀಪದಲ್ಲಿದ್ದ ಕಾಡಿಗೆ ತೆರಳಿ ಒಂದು ಮರದ ಕೆಳಗೆ ಕಾಲನ್ನು ಚಾಚಿ ಮಲಗುತ್ತಾನೆ. 

ಆ ಸಮಯದಲ್ಲಿ  ಜಟ ಎಂಬ ಬೇಡನು ಅದೇ  ಕಾಡಿಗೆ ಬೇಟೆಗೆ ಬಂದಿರುತ್ತಾನೆ. ಅವನಿಗೆ ಕಡಲಲ್ಲಿ ಸಿಕ್ಕ  ಒಂದು  ಮೀನಿನ  ಹೊಟ್ಟೆಯಲ್ಲಿ  ಲೋಹದ ತುಂಡು ಸಿಕ್ಕಿರುತ್ತದೆ.  ಆ ಲೋಹದ ತುಂಡು ಸಾಂಬನು ಕಡಲಲ್ಲಿ ಎಸೆದ ಒನಕೆಯ ಬಾಗವಾಗಿರುತ್ತದೆ.   ಜಟನು ಆ ಲೋಹದ ತುಂಡನ್ನು ತನ್ನ ಬಾಣದ ತುದಿಗೆ ಕಟ್ಟಿರುತ್ತಾನೆ. ಬೇಟೆಯಾಡಲು ಪ್ರಾಣಿಯನ್ನು ಹುಡುಕುತ್ತ ಬರುವಾಗ ಅವನಿಗೆ ದೂರದಲ್ಲಿ ಒಂದು ಮರದ ಕೆಳಗೆ  ಮೊಲದ ಕಿವಿ ಕಾಣುತ್ತದೆ.  ಅವನು ಗುರಿಯಿಟ್ಟೂ  ಬಾಣದಿಂದ ಅದಕ್ಕೆ ಹೊಡೆಯುತ್ತಾನೆ. ಆದರೆ ಅದು  ಮರದ ಕೆಳಗೆ ಮಲಗಿರುವ ಶ್ರೀ  ಕೃಷ್ಣನ ಕಾಲಿನ ಹೆಬ್ಬೆರಳು ಆಗಿರುತ್ತದೆ. ಶ್ರೀ ಕೃಷ್ಣನ ಹೆಬ್ಬೆರಳು ಕತ್ತರಿಸಿ ಹೋಗಿ  ತುಂಬ ಘಾಸಿಗೊಳ್ಳುತ್ತಾನೆ. ಜಟನು ಹತ್ತಿರ ಬಂದುನೋಡಿದಾಗ ಅದು  ಶ್ರೀ ಕೃಷ್ಣ ಎಂದು ಗೊತ್ತಾಗಿ ತುಂಬ ನೊಂದುಕೊಂಡು ಕ್ಷಮೆ ಯಾಚಿಸುತ್ತಾನೆ. ಶ್ರೀ ಕೃಷ್ಣನು ಮುಗುಳ್ನಗುತ್ತ ಅವನಿಗೆ ಆಶೀರ್ವಾದ ಮಾಡುತ್ತಾನೆ ಮತ್ತು    ನಡೆಯುತ್ತಿರುವ ಈ ಘಟನೆಗೆ ನೀನು ಒಂದು ನಿಮಿತ್ತ ಮಾತ್ರ ಎಂದು ಹೇಳಿ ಅವನನ್ನು ಕಳುಹಿಸಿಕೊಡುತ್ತಾನೆ. ಶ್ರೀ ಕೃಷ್ಣನಿಗೆ ತಾನು ಈ ಜಗತ್ತಿಗೆ ಬಂದ  ಕಾರ್ಯ ಸಂಪನ್ನವಾಗಿದೆ ಮತ್ತು ತಾನು ಈ ಅವತಾರವನ್ನು ಮುಗಿಸುವ ಸಮಯ ಬಂದಿದೆ ಎಂದು ಗೊತ್ತಾಗುತ್ತದೆ.   ನಂತರ ತನ್ನ ದೇಹವನ್ನು ತ್ಯಾಗ ಮಾಡಿ ಶ್ರೀ ಕೃಷ್ಣನ ಅವತಾರವನ್ನು ಮುಗಿಸಿ ಶ್ರೀ ವಿಷ್ಣುವಿನ ರೂಪದಲ್ಲಿ  ವೈಕುಂಟಕ್ಕೆ ತೆರಳುತ್ತಾನೆ. 

ಬಲರಾಮನು ಎಲ್ಲ ಕಡೆ  ಶ್ರೀ ಕೃಷ್ಣನನ್ನು ಹುಡುಕಿ  ಎಲ್ಲಿಯು  ಕಾಣಿಸದೆ ಇದ್ದಾಗ ಅದರಿಂದ ವ್ಯಾಕುಲಗೊಂಡು ತಾನು ತನ್ನ ದೇಹವನ್ನು ತ್ಯಾಗ ಮಾಡುತ್ತಾನೆ. 

ಈ ರೀತಿಯಾಗಿ ಒಂದು ಒನಕೆ ಶ್ರೀ ಕೃಷ್ಣ ಸಾವಿಗೆ ನಿಮಿತ್ತವಾಗುತ್ತದೆ. 

ಶ್ರೀ 

ಥಿಂಕ್ ರೈಟ್ 

8 thoughts on “ಶ್ರೀ ಕೃಷ್ಣನ ಸಾವಿಗೆ ಒಂದು ಒನಕೆ ಹೇಗೆ ಕಾರಣವಾಯ್ತು ಗೊತ್ತೇ?

  1. Very well written, although I have read Mahabharata, I had no clear of the events that happened afterwards. Few questions- Are Daruka and Vabrha also descendants of Krishna? What happens to them?

    Like

Leave a comment