ಎರಡು ವರ್ಷಗಳ ಹಿಂದೆ ನನ್ನ ಸ್ನೇಹಿತ Dr. ರೋಹಿತನ ಕೃಪೆಯಿಂದ ಇಂಡೋನೇಶಿಯಾದ ಬಾಲಿ ಎಂಬ ಸುಂದರ ದ್ವೀಪಕ್ಕೆ ಹೋಗುವ ಅವಕಾಶ ದೊರೆಯಿತು. ಬಾಲಿ ದ್ವೀಪದ ಮುಖ್ಯ ಆಕರ್ಷಣೆ ಎಂದರೆ ನಿರ್ಜೀವ ಮತ್ತು ಸಜೀವ ಅಗ್ನಿ ಪರ್ವತಗಳು, ಸುಂದರ ಕಡಲ ತೀರಗಳು, ಭತ್ತದ ಗದ್ದೆಗಳು, ಹವಳ ದಿಬ್ಬಗಳು, ಕಡಲ ಕ್ರೀಡೆಗಳು ಹಾಗು ದೇವಸ್ಥಾನಗಳು ( ಮುಸ್ಲಿಂ ದೇಶದಲ್ಲಿ ದೇವಸ್ಥಾನಗಳುಎಲ್ಲಿಂದ ಬಂತು ಅಂತೀರಾ!! ). ಬಾಲಿನೀಸ್ ಸಂಸ್ಕೃತಿಗೆ ಭಾರತದ ಹಿಂದೂ ಸಂಸ್ಕೃತಿಯ ಹಿನ್ನಲೆ ಇದೆ. ಈ ಹಿನ್ನಲೆಯಿಂದ ಅವರು ಕೈಗೊಳ್ಳುವ ಆಚರಣೆಗಳು ಮತ್ತು ಪೂಜೆ ಪುನಸ್ಕಾರಗಳು ನಮ್ಮ ಸಂಸ್ಕೃತಿಯನ್ನು ಹೋಲುತ್ತದೆ. ಬಾಲಿಯಲ್ಲಿ ನೀವು ಹಲವು ದೇವಸ್ಥಾನಗಳನ್ನು ನೋಡಬಹುದು. ಅವುಗಳಲ್ಲಿ ಪ್ರಮುಖವಾಗಿ Ulun Danu Beratan temple , Uluwatu temple , Besakih temple , Tirta Empul temple. ಈ ಎಲ್ಲ ದೇವಸ್ಥಾನಗಳು ನೋಡಲು ಒಂದಕ್ಕಿಂತ ಒಂದು ಅದ್ಭುತವಾಗಿವೆ. ಇವಿಷ್ಟೇ ಅಲ್ಲದೆ ನೀವು ಬೀದಿಗಳಲ್ಲಿ ಹೋಗುವಾಗ ಪ್ರತಿಯೊಂದು ಮನೆಯಲ್ಲಿಯು ಕೂಡ ಸಣ್ಣ ಸಣ್ಣ ದೇವಸ್ಥಾನವನ್ನು ನೋಡಬಹುದು. ಬಾಲಿಯಲ್ಲಿ ಶೇಕಡಾ ೮೨% ಹಿಂದೂ ಧರ್ಮ ಮತ್ತು ೧೨% ಇಸ್ಲಾಂ ಧರ್ಮ ಆಚರಿಸುವ ಜನರಿದ್ದಾರೆ. ನಿಮಗೆ ಎಲ್ಲಿಯೂ ಇದೊಂದು ಮುಸ್ಲಿಂ ರಾಷ್ಟ್ರ ಅಂತ ಅನಿಸುವುದೇ ಇಲ್ಲ.

ಬಾಲಿಯ ಮುಖ್ಯ ಆಕರ್ಷಣೆಗಳಲ್ಲಿ ಒಂದಾದ ” ಕೆಚಕ್ ಫೈರ್ ಡ್ಯಾನ್ಸ್ ” ( Kecak fire dance ) ನೋಡಲು ಉಳುವಾಟು ( Uluwatu ) ಎಂಬ ದೇವಸ್ಥಾನಕ್ಕೆ ನಾವು ಭೇಟಿ ನೀಡಿದ್ದೆವು. ಈ ನೃತ್ಯ ಏನಿರಬಹುದು ಅನ್ನುವ ಕುತೂಹಲ ನಮಗೆ ಬಹಳ ಇತ್ತು. ಉಳುವಾಟುಗೆ ಹೋದಾಗ ಸಂಜೆ ಆಗುತ್ತಾ ಬಂದಿತ್ತು. ದೇವಸ್ಥಾನದ ಪದ್ದತಿ ಪ್ರಕಾರ ( ಬಾಲಿಯ ಅನೇಕ ದೇವಸ್ಥಾನಗಳಲ್ಲಿ ಇದೆ ಪದ್ದತಿ ಇದೆ) ನಾವು ಅವರು ಕೊಡುವ ಲುಂಗಿ ಮಾದರಿಯ ಬಟ್ಟೆಯನ್ನು ಸೊಂಟಕ್ಕೆ ಕಟ್ಟಿಕೊಂಡು ಒಳಗಡೆ ಹೋದೆವು. ಆದರೆ ದೇವಸ್ಥಾನದ ಸುತ್ತ ಮುತ್ತ ನೋಡಬಹುದೇ ವಿನಃ ಒಳಗಡೆ ಪ್ರವೇಶ ಕೊಡುವುದಿಲ್ಲ. ದೇವಸ್ಥಾನದ ಹತ್ತಿರ ಕಡಲಿಗೆ ಅಂಟಿಕೊಂಡಿರುವ ಒಂದು ದೊಡ್ಡ ಗುಡ್ಡದ ಮೇಲೆ ವೃತ್ತಾಕಾರದ ಬಯಲು ರಂಗ ಮಂದಿರ ಇದೆ. ರಂಗ ಮಂದಿರದಲ್ಲಿ ಪ್ರೇಕ್ಷಕರು ಕೂತುಕೊಳ್ಳಲು ಅರೆ ವೃತ್ತಾಕಾರವಾಗಿ ಮೆಟ್ಟಿಲುಗಳನ್ನು ಮಾಡಿದ್ದಾರೆ. ರಂಗ ಮಂದಿರದ ವೇದಿಕೆಯ ಹಿಂಭಾಗದಲ್ಲಿ ಕಡಲು ಒಂದು ಸುಂದರ ಪರದೆಯ ಹಾಗೆ ಕಾಣುತ್ತದೆ. ಮೆಟ್ಟಿಲುಗಳ ಮೇಲೆ ಕುಳಿತು ಸೂರ್ಯಸ್ತವನ್ನು ಆನಂದಿಸುತ್ತಾ ಕೆಚಕ್ ಫೈರ್ ಡ್ಯಾನ್ಸ್ ನೋಡುವುದೇ ಒಂದು ಅದ್ಭುತ ಅನುಭವ. ಸೂರ್ಯಸ್ತ ಆಗಲು ಸ್ವಲ್ಪ ಸಮಯ ಇರುವಾಗ ಕೆಚಕ್ ಫೈರ್ ಡ್ಯಾನ್ಸ್ ಆರಂಭವಾಗುತ್ತದೆ.

ಈ ಕೆಚಕ್ ಫೈರ್ ಡ್ಯಾನ್ಸ್ ಏನಿರಬಹುದು ಅನ್ನುವ ಕುತೂಹಲ ನೃತ್ಯ ಶುರುವಾಗಿ ಐದೇ ನಿಮಿಷಕ್ಕೆ ತಣಿದು ನಮ್ಮ ಸಂತೋಷ ಇಮ್ಮಡಿಯಾಯಿತು. ಯಾಕೆಂದರೆ ಅವರು ಮಾಡುತ್ತಿದ್ದ ನೃತ್ಯ ರೂಪಕ ಯಾವುದು ಗೊತ್ತಾ!! ಅದು ನಮ್ಮ ದೇಶದ ಮಹಾಕಾವ್ಯಗಳಲ್ಲಿ ಒಂದಾದ “ರಾಮಾಯಣ”. ಯಾವುದೊ ಒಂದು ಹೊರದೇಶದಲ್ಲಿ ನಾವು ಪೂಜಿಸುವ ಶ್ರೀ ರಾಮನ ಇತಿಹಾಸವನ್ನು ನೃತ್ಯ ರೂಪಕ ದಲ್ಲಿ ತೋರಿಸುವಾಗ ಅಲ್ಲಿ ನೆರೆದಿದ್ದ ಬೇರೆ ರಾಷ್ಟ್ರಗಳ ಜನರಿಗೆ ಇವನು ನಮ್ಮ ದೇವರು ಎಂದು ಜೋರಾಗಿ ಕೂಗಿ ಹೇಳುವ ಮನಸ್ಸಾಗುತ್ತಿತ್ತು. ಏನೋ ಒಂದು ರೀತಿಯ ಹೆಮ್ಮೆ ನಮ್ಮ ಮುಖದಲ್ಲಿ ಕಾಣಿಸಿದ್ದಂತೂ ನಿಜ.

ಕೆಚಕ್ ಫೈರ್ ಡ್ಯಾನ್ಸ್ನಲ್ಲಿ ಸುಮಾರು ೫೦ ರಿಂದ ೭೦ ನೃತ್ಯ ಮಾಡುವ ಕಲಾವಿದರು ಇರುತ್ತಾರೆ. ಅವರ ನಡುವೆ ಎರಡು ಗುಂಪುಗಳಿರುತ್ತವೆ. ಅವರಲ್ಲಿ ಮೊದಲ ಗುಂಪು ” ಕಚ್ ಕಚ್ ಕಚ್ ಕಚ್ … ” ” ಪೋ ಪೋ ಪೋ ಪೋ…. ” ಎಂದು ಲಯಬದ್ಧವಾಗಿ ಹೇಳುತ್ತಾ ವೃತ್ತಾಕಾರವಾಗಿ ಕುಳಿತು ಕೈ ಮತ್ತು ತೋಳುಗಳನ್ನು ಉಪಯೋಗಿಸಿಕೊಂಡು ವಿಶಿಷ್ಟ ರೀತಿಯಲ್ಲಿ ಕೂತಲ್ಲೇ ನೃತ್ಯ ಮಾಡುತ್ತಾರೆ. ನೃತ್ಯ ರೂಪಕ ಮುಗಿಯುವವರೆಗೂ ಯಾವುದೇ ತಡೆ ಇಲ್ಲದೇ ಲಯಬದ್ಧವಾಗಿ ” ಕಚ್ ಕಚ್ ಕಚ್ ಕಚ್ … ” ಎಂದು ಮಂತ್ರದಂತೆ ಹೇಳುತ್ತಿರುತ್ತಾರೆ. ನಿಮಗೆ ಕೆಲವೊಮ್ಮೆ “ಚಕ್ ಚಕ್ ಚಕ್ ಚಕ್ ಚಕ್” ಎಂದೂ ಸಹ ಕೇಳುತ್ತದೆ. ಇದರಿಂದಲೇ ಈ ನೃತ್ಯ ರೂಪಕಕ್ಕೆ ಕೆಚಕ್ ಡಾನ್ಸ್ ಎಂದು ಹೇಳುತ್ತಾರೆ. ಗುಂಪಿನ ಮುಖ್ಯಸ್ಥ ಸನ್ನಿವೇಶಗಳಿಗೆ ತಕ್ಕಂತೆ ಹಾಡಿನ ಲಯವನ್ನು ಬದಲಾಯಿಸುತ್ತಿರುತ್ತಾನೆ. ಮತ್ತೊಂದು ಗುಂಪು ಮುಖ್ಯ ಭೂಮಿಕೆಯಲ್ಲಿ ಬರುವ ಪಾತ್ರಗಳಾದ ರಾಮ, ಸೀತಾ, ಲಕ್ಷ್ಮಣ, ಜಟಾಯು, ಹನುಮಂತ ಮತ್ತು ರಾವಣ ಪಾತ್ರದಾರಿಗಳು. ಅವರು ರಾಮಾಯಣವನ್ನು ನೃತ್ಯ ರೂಪಕದ ಮೂಲಕ ನಿಮಗೆ ಅಭಿನಯಿಸಿ ತೋರಿಸುತ್ತಾರೆ. ಯಾವುದೇ ಸಂಗೀತ ನುಡಿಸುವ ವಾದ್ಯಗಳಿರುವುದಿಲ್ಲ. ಈ ನೃತ್ಯ ರೂಪಕವು ಶ್ರೀ ರಾಮ ಮತ್ತು ಸೀತಾ ವಿವಾಹದಿಂದ ಶುರುವಾಗುತ್ತದೆ. ನಂತರ ವನವಾಸ , ಸೀತಾಪಹರಣ, ಜಟಾಯು ವಧೆ ಹಾಗು ಕೊನೆಯಲ್ಲಿ ಲಂಕಾ ದಹನದೊಂದಿಗೆ ಕೊನೆಯಾಗುತ್ತದೆ. ಲಂಕಾ ದಹನ ನೃತ್ಯ ರೂಪಕ ಶುರುವಾಗುವಾಗ ಹೊರಗಡೆ ಸೂರ್ಯಾಸ್ತವಾಗಿ ಕತ್ತಲು ಕವಿಯಲು ಶುರುವಾಗಿರುತ್ತದೆ. ಲಂಕಾ ದಹನದ ದೃಶ್ಯ ನೋಡಲು ರುದ್ರ ಮನೋಹರವಾಗಿರುತ್ತದೆ. ಕತ್ತಲೆಯಲ್ಲಿ ಹಾರುವ ಬೆಂಕಿಯ ಕಿಡಿಗಳು, ಅದರ ಸುತ್ತ ಲಯಬದ್ಧವಾಗಿ ” ಕಚ್ ಕಚ್ ಕಚ್ ಕಚ್ ” ಎಂದು ಏರು ಸ್ವರದಲ್ಲಿ ಹಾಡವ ನೃತ್ಯಗಾರರು, ಹನುಮಂತ ಲಂಕೆಯನ್ನು ಸುಡುವ ರೀತಿಯಲ್ಲಿ ಮಾಡುವ ನೃತ್ಯ ರೂಪಕದ ಅಭಿನಯ ನೋಡುಗರ ಮೈನವಿರೇಳುವಂತೆ ಮಾಡುತ್ತದೆ. ಲಂಕಾ ದಹನದ ನೃತ್ಯ ರೂಪಕದೊಂದಿಗೆ ಕೆಚಕ್ ಫೈರ್ ಡ್ಯಾನ್ಸ್ ಮುಕ್ತಾಯವಾಗುತ್ತದೆ. ಸರಿ ಸುಮಾರು ೧ ಗಂಟೆ ಕಾಲ ಸಮಯ ಕಳೆಯುವುದೇ ಗೊತ್ತಾಗುವುದಿಲ್ಲ. ಹೊರಬರುವಾಗ ಸಂತೋಷ, ಹೆಮ್ಮೆಯ ಜೊತೆಗೆ ಒಂದು ರೀತಿಯ ಗರ್ವ ನಮ್ಮಲ್ಲಿ ಮನೆಮಾಡಿತ್ತು. ಕಿವಿಯಲ್ಲಿ ಕಚ್ ಕಚ್ ಕಚ್ ಕಚ್ ಎನ್ನುವ ಶಬ್ದ ಮಂತ್ರದಂತೆ ಮಾರ್ದನಿಸುತ್ತಿತ್ತು.
ಯಾವಾಗಲಾದರೂ ಅವಕಾಶ ಸಿಕ್ಕರೆ ಬಾಲಿ ದ್ವೀಪಕ್ಕೆ ನಿಮ್ಮ ಮಕ್ಕಳೊಡನೆ ಹೋಗಿಬನ್ನಿ. ಅಲ್ಲಿ ಸಂತೋಷದಿಂದ ಸಮಯ ಕಳೆಯುವುದರ ಜೊತೆಗೆ ಮಕ್ಕಳಿಗೆ ನಮ್ಮ ಸಂಸ್ಕೃತಿ ಮತ್ತು ಅದರ ಹಿರಿಮೆ ಎಂತದ್ದು ಅನ್ನುವುದನ್ನು ಕೆಚಕ್ ಫೈರ್ ಡಾನ್ಸ್ ತೋರಿಸಿ ಹೇಳಿ.
ಶ್ರೀ
ಥಿಂಕ್ ರೈಟ್
Bali pravasa namma list alli ide. Eega eee blog nodid mele allige hogo mattondu karana sigtu. Dhanyawadagalu
LikeLike
Kandita hogi… adbhutavada jaga..
LikeLike
ನಿನ್ನ ಬರವಣಿಗೆ ಓದಿದ ಮೇಲೆ ನಮಗೂ ಸಹ ಒಮ್ಮೆ ಹೋಗಿ ಬರಬೇಕು ಅಂಥ ಅನಿಸ್ತಿದೆ, ಎಲ್ಲದಕ್ಕಿಂತ ಹೆಚ್ಚಾಗಿ ನಮ್ಮ ದೇಶದ ಮಹಾಕಾವ್ಯ ವನ್ನು ನೃತ್ಯ ರೂಪಕದ ಮೂಲಕ ತೋರಿಸುತ್ತಾರೆ ಎನ್ನುವುದನ್ನು ಕೇಳಿ ಬಹಳ ಖುಷಿಯಾಯ್ತು.
LikeLike
Yes… it is one of the places to visit in lifetime
LikeLike
ನನಗೆ ಪ್ರವಾಸಕಥನವೆಂದರೆ ಬಹಳ ಇಷ್ಟ
ಖಂಡಿತವಾಗಿ ಬಾಲಿಗೆ ಹೋಗಿಬರುತ್ತೇವೆ
LikeLike
ತುಂಬ ಧನ್ಯವಾದಗಳು… ಖಂಡಿತ ಹೋಗಿಬನ್ನಿ… ಜೀವನದಲ್ಲಿ ಒಮ್ಮೆ ನೋಡಲೇಬೇಕಾದ ಸ್ಥಳ ಬಾಲಿ .
LikeLike