ವಾಸ್ತು ಪ್ರಕಾರ!! – ಮನೆ ಮತ್ತು ಮನಸ್ಸು…

ಆತ್ಮೀಯ ಸ್ನೇಹಿತರೆ,

ವಾಸ್ತು  ಶಾಸ್ತ್ರದ  ಬಗ್ಗೆ  ನಿಮಗೆಷ್ಟು ಗೊತ್ತು?  ಯಾರು ಬರೆದಿದ್ದು ಗೊತ್ತಾ ? ಅದು ಹೇಗೆ  ಆರಂಭ ಆಯಿತು ?  ನಿಲ್ಲಿ, ನಿಲ್ಲಿ, ನಾನು ವಾಸ್ತು ಶಾಸ್ತ್ರದ ಬಗ್ಗೆ  ಹೇಳುತ್ತೇನೆ ಅಂದುಕೊಂಡಿರಾ?  ಇಲ್ಲ,   ಅದರ ಬಗ್ಗೆ ಹೇಳಲು ನಾನು ವಾಸ್ತು ಶಾಸ್ತ್ರಜ್ಞ ಅಂತೂ ಖಂಡಿತ ಅಲ್ಲ.  ಆದರೆ  ವಾಸ್ತು ಪ್ರಕಾರವಾಗಿ ಈಗಿನ ವ್ಯವಸ್ಥೆಯಲ್ಲಿ ಎಷ್ಟರ ಮಟ್ಟಿಗೆ  ಒಂದು ಮನೆ ಕಟ್ಟಬಹುದು ಅನ್ನುವಷ್ಟು ವಾಸ್ತು ಶಾಸ್ತ್ರದ  ಬಗ್ಗೆ ಗೊತ್ತು.  ವಾಸ್ತು ಶಾಸ್ತ್ರವನ್ನು  ನಂಬುವುದು ಬಿಡುವುದು ಅವರವರ ಅನುಭವಕ್ಕೆ ಬಿಟ್ಟಿದ್ದು.  ಯಾವುದೇ ಶಾಸ್ತ್ರ ಎಲ್ಲಿಯವರೆಗೆ ವ್ಯಾಪಾರ ಆಗುವುದಿಲ್ಲವೋ ಅಲ್ಲಿಯವರೆಗೆ ಅದು ಸರಿಯಾಗಿರುತ್ತದೆ ಅನ್ನುವುದು ನನ್ನ ಅಭಿಪ್ರಾಯ. 

ವಾಸ್ತು  ಬಗ್ಗೆ ತಿಳಿದುಕೊಳ್ಳುವ ಅವಕಾಶ ಸಿಕ್ಕಿದ್ದು ನಾನು ಕಾಲೇಜು ಓದುವಾಗ.  ನನ್ನ ಸ್ನೇಹಿತನ ತಂದೆ ಮನೆ ಕಟ್ಟುತ್ತಿದ್ದರು.  ಒಂದು ದಿನ  ನನ್ನ ಸ್ನೇಹಿತ ,  ಮನೆ ವಾಸ್ತು ನೋಡಲಿಕ್ಕೆ ಇವತ್ತು  ಯಾರೋ ಬರ್ತಾರೆ ಅಂತ ಹೇಳಿದಾಗ,  ನನಗೆ ಬಂದವರು ಏನು ಮಾಡುತ್ತಾರೆ ಅನ್ನುವ ಕುತೂಹಲ,  ಹಾಗಾಗಿ ನಾನು ಕೂಡ  ನೋಡಲಿಕ್ಕೆ ಬರ್ತೀನಿ ಅಂತ ಹೇಳಿ ಅವನ ಜೊತೆಗೆ ಹೋದೆ. ಇವರ ಮನೆಯ ಅಡಿಪಾಯದ  ಕೆಲಸ ಆಗಲೇ ಮುಗಿದು ಮನೆಯ ಒಂದು ಕಡೆ ಗೋಡೆ ಸಹಿತ ಕಟ್ಟಿ ಆಗಿತ್ತು. ನನ್ನ ತಲೇಲಿ ಓಡ್ತಾ  ಇದ್ದ ಪ್ರಶ್ನೆ ಅಂದರೆ  ಆಗಲೇ ಇಷ್ಟು ಕೆಲಸ ಆಗಿದೆ ಅಂದಮೇಲೆ ಈಗ ಬಂದವರು ಇನ್ನೇನು ವಾಸ್ತು ಹೇಳುತ್ತಾರೆ ಎಂದು? ಆದರೂ ಸರಿ ನೋಡೋಣ ಅಂತ ನನ್ನ ಸ್ನೇಹಿತನ  ಜೊತೆಗೆ ನಿಂತುಕೊಂಡೆ.  ವಾಸ್ತು ನೋಡಲು  ಬಂದವರು ತುಂಬ ಗಂಭೀರವಾಗಿ  ಮನೆ ಕಟ್ಟುತ್ತಿದ್ದ ಜಾಗವನ್ನೆಲ್ಲ ಒಂದು ಸುತ್ತು ಹಾಕಿದರು. ನಂತರ ನನ್ನ ಸ್ನೇಹಿತನ ತಂದೆಗೆ  ” ಶೌಚಾಲಯ ಇಲ್ಲಿ ಬರಬಾರದು ಇದು ಕುಬೇರ ಮೂಲೆ, ಇದು ಅಗ್ನಿ ಮೂಲೆ ಅಲ್ಲ  ಹಾಗಾಗಿ ಇಲ್ಲಿ ಅಡಿಗೆ ಮನೆ  ಬರಬಾರದು,  ದೇವರ ಕೊಣೆ  ದೇವರ ಮೂಲೆಯಲ್ಲಿ  ಇಲ್ಲ ” …. ಹೀಗೆ ಸುಮಾರು ಮೂಲೆಗಳನ್ನು ಬದಲಾಯಿಸಬೇಕು  ಅಂತ ಹೇಳುತ್ತಾ ಹೋದರು. ನಾನು ನನ್ನ ಸ್ನೇಹಿತನಿಗೆ ಕೇಳಿದೆ  “ಅಲ್ವೋ ನಿಮ್ಮಪ್ಪ  ಅದು ಹೆಂಗೆ ಮೂಲೆಗಳನ್ನ ಸರಿಯಾಗಿ ನೋಡದೇ ಇಲ್ಲಿ ತನಕ ಮನೆ ಕಟ್ಟಿದ್ರು? ”  “ಈಗೇನು,  ಕಟ್ಟಿದೆಲ್ಲಾ  ಒಡೀತೀರಾ ?”.  ನಾನು ಈ ರೀತಿ  ಕೇಳಿದ್ದು ಅವರಪ್ಪನಿಗೆ ಕೇಳಿಸಿ ಏನೋ   ಒಂದು ರೀತಿಯಾಗಿ ನನ್ನ ಕಡೆ ನೋಡಿದ್ರು. ಅದು ಸಿಟ್ಟೋ, ದುಃಖನೋ , ಹತಾಷೆನೋ, ಒತ್ತಡನೋ ಏನು ಅಂತ ಅರ್ಥ  ಆಗ್ಲಿಲ್ಲ.  ಅಲ್ಲಿದ್ದರೆ ನನ್ನ ದೇಹದ  ವಾಸ್ತು ಬದಲಾಗಬಹುದು ಎಂದೆನಿಸಿ ನಾನು ಅಲ್ಲಿಂದ ಕಾಲ್ಕಿತ್ತೆ.  ಆಮೇಲೆ ಗೊತ್ತಾಯ್ತು ಅವರಪ್ಪ ಸುಮಾರು ಮೂಲೆಗಳನ್ನು  ಕೂಡಿಸಿ  ಮತ್ತೆ  ಕೆಲವು ಮೂಲೆಗಳನ್ನು  ಕಳೆದು  ಮನೆ ಕಟ್ಟಿದ್ರು ಅಂತ. 

ಅವತ್ತಿಗೆ  ನನಗೆ ಗೊತ್ತಾಗಿದ್ದು ಏನಂದರೆ ಮನೆ ಕಟ್ಟಬೇಕಾದ್ರೆ,  ಅಡಿಗೆ ಮನೆ,  ಮಲಗುವ ಕೋಣೆ,  ನಡು ಮನೆ, ಅಟ್ಟ, ಕೊನೆಗೆ ಶೌಚಾಲಯಕ್ಕೂ ಕೂಡ   ಅವುಗಳಿಗೆ ಅಂತ ಮೀಸಲಿಟ್ಟ  ಮೂಲೆಗಳಲ್ಲೇ ಕಟ್ಟಬೇಕು ಅಂತ.   ಆ ಸಮಯದಲ್ಲಿ ವಾಸ್ತು ಪ್ರಕಾರ ಮನೆ ಕಟ್ಟಲಿಲ್ಲ ಅಂದರೆ ಏನಾಗುತ್ತೆ ಅನ್ನುವ  ಪ್ರಶ್ನೆ  ನನಗೆ ಕಾಡಲಿಲ್ಲ . ಯಾಕಂದರೆ  ಆಗ ನಮಗೆ ಇರಲಿಕ್ಕೆ ಒಂದು ಮನೆ , ಅದು ಬಾಡಿಗೆ ಕಮ್ಮಿ  ಆದ್ರೆ ಸಾಕು ನಮ್ಮ ವಾಸ್ತು ಎಲ್ಲ ಸರಿಯಾಗಿರುತಿತ್ತು.  ಅಂದು ನಾನು ಕಂಡುಕೊಂಡ ಸತ್ಯ ಏನಂದರೆ ಮನುಷ್ಯನ ಪರಿಸ್ಥಿತಿ  ಮನೆಯ  ವಾಸ್ತುಗಳನ್ನು ಬದಲಾಯಿಸುತ್ತೆ ಅಂತ. ಯಾಕೋ ವಾಸ್ತು ಪರಿಸ್ಥಿಯನ್ನು ಬದಲಾಯಿಸುತ್ತೆ ಅನ್ನುವುದನ್ನು  ನಂಬಲು ಕಷ್ಟ ಆಯಿತು.

ಮುಂದೆ ಮತ್ತೆ ವಾಸ್ತು ಬಗ್ಗೆ ನಾನು ಮಾತನಾಡಿದ್ದು ನಾನು ಬೆಂಗಳೂರಿನಲ್ಲಿ ಮನೆ ಖರೀದಿ ಮಾಡುವಾಗ.  ಆಗ    ಬೆಂಗಳೂರಿನಲ್ಲಿ ಕುಬೇರ ಮೂಲೆ, ದೇವರ ಮೂಲೆ ಅನ್ನುವುದಕ್ಕಿಂತ  ಮನೆ ತುಂಬ ಗಾಳಿ ಮತ್ತು ಬೆಳಕು ಇದ್ದರೆ ವಾಸ್ತು ಸರಿ ಇರುತ್ತೆ ಅಂತ ನಂಬಿಕೆ.  ಬಾಡಿಗೆ ಮನೆ ಹುಡುಕುವಾಗ ಕೂಡ ನಾನು ನೋಡುತ್ತಿದ್ದುದು ಮೊದಲು ಅದನ್ನೇ.  ಬೆಳಕು ಮತ್ತು ಗಾಳಿ ಎರಡು ತುಂಬ ಚೆನ್ನಾಗಿ ಇದೆ ಅಂದರೆ ದಿಕ್ಕು ಸಹಿತ ನೋಡುತ್ತಿರಲಿಲ್ಲ.    ಬೆಂಗಳೂರಿನಲ್ಲಿ  ಮನೆ ಕಟ್ಟಿಸಿದರು ಸರಿ,  ಕಟ್ಟಿದ್ದು ತೆಗೆದುಕೊಂಡರು ಸರಿ, ಗಾಳಿ ಮತ್ತು ಬೆಳಕು ಸರಿಯಾಗಿ ಸಿಗುವುದು ಸ್ವಲ್ಪ ಕಷ್ಟವೇ.  ಒಂದೋ ಮಲಗುವ ಕೋಣೆಗೆ ಬೆಳಕಿರಲ್ಲ, ಅಲ್ಲಿ ಇದ್ದರೆ ನಡು ಮನೆಗೆ ಇರಲ್ಲ. ಕೆಲವು ಕಡೆಯಂತೂ ಅಕ್ಕ, ಪಕ್ಕ ಮತ್ತು ಹಿಂದೆ  ಕೂಡ ಯುಟಿಲಿಟಿ ಬಿಲ್ಡಿಂಗ್ ತರ ಮನೆ ಕಟ್ಟಿಬಿಟ್ಟಿರುತ್ತಾರೆ. ಅಂತ ಕಡೆ ಗಾಳಿ  ಬೆಳಕು ಇರಲಿ ದೇವರು ಕೂಡ ಬರಲಾರ. ಇದೆಲ್ಲದರ  ಮದ್ಯೆ ವಾಸ್ತು  ನೋಡಿ ಮನೆ ಕಟ್ಟಿಸಿದರೆ ನಿಮ್ಮ ಮನೆಯ  ಮುಂಬಾಗಿಲಿಗೆ ಪಕ್ಕದ  ಮನೆಯ   ಶೌಚಾಲಯದ ಕಿಟಕಿ ಇರುತ್ತೆ.  ಬೆಳಿಗ್ಗೆ ಎದ್ದು ಬಾಗಿಲು ತೆಗೆದರೆ ಏನು ದರ್ಶನ ಅಂತ ಬಿಡಿಸಿ ಹೇಳಬೇಕಾಗಿಲ್ಲ ಅಲ್ಲವೇ.  ಈ ರೀತಿಯ ಅನೇಕ ಸವಾಲುಗಳನ್ನು ಎದುರಿಸಿ   ವಾಸ್ತು ಪ್ರಕಾರ ಮನೆ ಖರೀದಿ ಮಾಡುವದರೊಳಗಾಗಿ  ವಾಸ್ತು ನಮ್ಮನ್ನು ಸುಸ್ತು ಮಾಡಿಸಿದಂತೂ ನಿಜ.

ಕಳೆದ ಸುಮಾರು ವರುಷಗಳಿಂದ   ಒಳ್ಳೆ ಕೆಲಸ ಸಿಗಲಿಕ್ಕೆ,  ಮದುವೆ ಆಗಲಿಕ್ಕೆ,  ಮಕ್ಕಳಾಗಲಿಕ್ಕೆ, ಆರೋಗ್ಯ ಸರಿಯಾಗುವುದಕ್ಕೆ, ವ್ಯಾಪಾರ ವೃದ್ಧಿಯಾಗಲಿಕ್ಕೆ, ಮಾನಸಿಕ ನೆಮ್ಮದಿ ಸಿಗಲಿಕ್ಕೆ, ಸಂಪತ್ತು ಹೆಚ್ಚಲಿಕ್ಕೆ,   ಕಳ್ಳತನ ಆಗದಿರುವುದಕ್ಕೆ ,  ಸುಖ ದಾಂಪತ್ಯ ಜೀವನಕ್ಕೆ, ಮಕ್ಕಳು ಸರಿಯಾಗಿ ಓದಲಿಕ್ಕೆ, ಫಾರಿನ್ ಹೋಗಲಿಕ್ಕೆ, …. ಹೀಗೆ ನಿಮ್ಮ ಎಲ್ಲ ಸಮಸ್ಯೆಗಳಿಗೂ ಪರಿಹಾರ ಸಿಗಲು   ಮನೆ  ವಾಸ್ತು ಬದಲಾಯಿಸಿ  ಅಂತ ಹೇಳ್ತಾರೆ.   ಸರಳ ವಾಸ್ತು, ಕಠಿಣ ವಾಸ್ತು, ಕನ್ನಡಿ ವಾಸ್ತು ….. ಹೀಗೆ ನೂರಾರು ವಾಸ್ತು ಶಾಸ್ತ್ರಜ್ಞರು ತಮ್ಮ ತಮ್ಮ ವಾಸ್ತು ಎಂಬ ಶಸ್ತ್ರಗಳನ್ನು ಹಿಡಿದು ನಿಮ್ಮಿಂದ ಹಣ ಸುಲಿಯಲು ಕಾಯುತ್ತ ಕೂಡ ಇದ್ದಾರೆ.  ಸ್ವಲ್ಪ ಹುಷಾರಾಗಿರಿ.

ಕೆಲವು ವಿಷಯಗಳ ಬಗ್ಗೆ ನಂಬಿಕೆ ಇರಬೇಕು ಆದರೆ ಅದು ಮೂಡ ನಂಬಿಕೆಯಾಗಿ ಬದಲಾಗಬಾರದು.  ವಾಸ್ತು ಶಾಸ್ತ್ರದ   ಪ್ರಕಾರ ಮನೆ ನಿರ್ಮಿಸಿದರೆ ಮನೆಯಲ್ಲಿ ಸಕಾರಾತ್ಮಕ  ಶಕ್ತಿ ಉಂಟಾಗುತ್ತದೆ. ಅದೇ ಶಕ್ತಿ ನಮ್ಮ ಎಲ್ಲ ಕೆಲಸ ಕಾರ್ಯಗಳು ಸಫಲಗೊಳ್ಳಲು  ಉಪಯೋಗವಾಗುತ್ತದೆ.  ಆಗುವ ಅನಿಷ್ಟಕ್ಕೆಲ್ಲ ಶನೀಶ್ವರ ಕಾರಣ ಅಂದುಕೊಂಡು ನಮ್ಮೆಲ್ಲ ಸಮಸ್ಯೆಗಳಿಗೆ ಮನೆ ವಾಸ್ತು ಸರಿ ಇಲ್ಲ ಎಂದುಕೊಂಡು ಕಟ್ಟಿದ ಮನೆಯನ್ನೇ ಕೆಡುವುದು, ಪದೇ ಪದೇ ಮನೆಯ ರೂಪ ರೇಷೆಗಳನ್ನು ಬದಲಾಯಿಸಿವುದು  ನಂಬಿಕೆಯೋ ಅಥವಾ ಮೂಢನಂಬಿಕೆಯೋ  ? ನೀವೇ ಯೋಚಿಸಿ ?

ಮನೆಯ ವಾಸ್ತು ಒಂದೇ ಸರಿ ಇದ್ದರೆ ಸಾಲದು ಮನಸ್ಸಿನ ವಾಸ್ತು ಕೂಡ ಸರಿಯಾಗಿರಬೇಕಲ್ಲವೇ?

ಶ್ರೀ

ಥಿಂಕ್ ರೈಟ್

10 thoughts on “ವಾಸ್ತು ಪ್ರಕಾರ!! – ಮನೆ ಮತ್ತು ಮನಸ್ಸು…

  1. Wow.. 👌👌Nijvaaglu.. bari mane vaastu ashte alla maneyalliruvvavara manassu saha sariyaagir beku anno vaakya bahala meaning full agide Anna 👏👏

    Like

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s