ಮಕ್ಕಳಲ್ಲಿ ಆತ್ಮವಿಶ್ವಾಸ ಮತ್ತು ಖಿನ್ನತೆ

ಆತ್ಮೀಯ ಸ್ನೇಹಿತರೆ,

ಇತ್ತೀಚಿನ ದಿನಗಳಲ್ಲಿ  ನಾವು ನೋಡುವ  ಮಕ್ಕಳಲ್ಲಿ , ವಯಸ್ಸಿನ ಹುಡುಗ ಮತ್ತು ಹುಡುಗಿಯರಲ್ಲಿ ಕಾಣುವ ಮೊದಲ ಕೊರತೆ ಅಂದರೆ ಅವರು ಮಾಡುವ ಕೆಲಸಗಳಲ್ಲಿ ಅವರಿಗೆ  ಆತ್ಮ ವಿಶ್ವಾಸ  ಇಲ್ಲದಿರುವುದು ಅಂತ ನಿಮಗೆ ಅನಿಸುವುದಿಲ್ವೇ?. ನಮಗೆ  ಆತ್ಮ ವಿಶ್ವಾಸ ಮತ್ತು ಆತ್ಮ ಸ್ಟೈರ್ಯ ಹುಟ್ಟಿನಿಂದ ಬರುವುದಿಲ್ಲ. ಅದು ನಾವು ಬೆಳೆಯುತ್ತ ಹಂತ ಹಂತವಾಗಿ ನಮಗೆ ಆಗುವ ಅನುಭವಗಳ ಮೇಲೆ ನಮ್ಮಲ್ಲಿ ಜಾಸ್ತಿ ಆಗುತ್ತಾ ಅಥವಾ ಕಮ್ಮಿ ಆಗುತ್ತಾ ಹೋಗುವುದು.  ಮಕ್ಕಳಲ್ಲಿ  ಬೆಳೆಯುವ ಆತ್ಮವಿಶ್ವಾಸವು,  ಮಕ್ಕಳನ್ನು   ಬೆಳೆಸುವ ರೀತಿ,  ಪೋಷಕರು  ಮಕ್ಕಳ  ಮುಂದೆ ನಡೆದುಕೊಳ್ಳುವ ರೀತಿ ಮತ್ತು    ಹೊರಗಡೆಯ  ಪರಿಸರದ  ಮೇಲೆ ಅವಲಂಬಿತವಾಗಿರುತ್ತದೆ.    

ಪ್ರತಿಯೊಬ್ಬರ ಮನೆಯಲ್ಲಿ ನಡೆಯುವ ಒಂದು ಸಣ್ಣ ಉದಾಹರಣೆ ನಿಮ್ಮ ಮುಂದಿಡುತ್ತೇನೆ. ಮನೆಯಲ್ಲಿ  ಮಗು ತನ್ನ ಪುಟ್ಟ ಪುಟ್ಟ ಹೆಜ್ಜೆಗಳನ್ನು ಹಾಕಲು ಕಲಿತು ನಡೆಯುತ್ತ  ಮುಂದೆ ಹೋಗಲು ಶುರು ಮಾಡಿದಾಗ  ಮಗು ಕೆಲವೊಮ್ಮೆ  ನಿಯಂತ್ರಣ ಸಿಗದೆ ಕೆಳಗೆ ಬೀಳುತ್ತದೆ.  ಕೂಡಲೇ ಮನೆಯಲ್ಲಿ ಅಪ್ಪ , ಅಮ್ಮ, ಅಜ್ಜ, ಅಜ್ಜಿ ಅಥವಾ ಯಾರೇ ಇದ್ದರು ಅವರು ಮಾಡುವ ಮೊದಲ ಕೆಲಸ ಏನಂದರೆ  ” ಅತ್ತ ” ಅಂತ  ಮಗು ಬಿದ್ದ ಜಾಗಕ್ಕೆ ಹೊಡೆಯುತ್ತಾರೆ. ಅದನ್ನು ನೋಡಿ  ಮಗು ಕಿಲ ಕಿಲ ಎಂದು ನಗುತ್ತ ತಾನು ಕೂಡ  “ಅತ್ತ” ಅಂತ ಹೊಡೆಯುತ್ತೆ. ಮತ್ತೊಮ್ಮೆ ಏನಾದರು  ಬಿದ್ದರೆ ತಾನೇ  ನೆಲಕ್ಕೆ ಮತ್ತೆ ” ಅತ್ತ” ಅಂತ ಹೊಡೆದು ಮುಂದೆ ಹೋಗಲು ಪ್ರಯತ್ನ ಮಾಡುತ್ತೆ ಅಲ್ವಾ.  ಈ ರೀತಿಯಾಗಿ ನಾವು ಮಕ್ಕಳಿಗೆ  ಮಾಡಿದ್ದೇವೆ ಅಥವಾ ಇನ್ನು ಮಾಡುತ್ತಿದ್ದೇವೆ.  ಆದರೆ ಈ ನಮ್ಮ ನಡೆಯೇ  ಮಕ್ಕಳಲ್ಲಿ  ಅದರ  ಆತ್ಮವಿಶ್ವಾಸ  ಮುರಿಯಲು  ನಾವು ಹಾಕುವ    ಮೊದಲ  ನಡೆ   ಅಂತ ಅನ್ನಿಸುವುದಿಲ್ವಾ?.   ನೆಲಕ್ಕೆ  ಬಿದ್ದಾಗ ನಾವು ಮಗುಗೆ  ಏನಾದರು ಪೆಟ್ಟು ಆಗಿದೆಯೇ ಎಂದು ನೋಡಬೇಕೆ ವಿನಃ    ” ಅತ್ತ ” ಅನ್ನುವ ಮೂಲಕ ನೀನು ಬೀಳಲು ಕಾರಣ ಆ ನೆಲ ಅನ್ನುವ ಭಾವನೆ ಬರಲು ಬಿಡಬಾರದು. ಮುಂದೆ ಮಗು ತನ್ನ ಎಲ್ಲ ಸೋಲಿಗೆ ಕಾರಣಗಳನ್ನು ಹೊರಗಡೆ ಪ್ರಪಂಚದಲ್ಲಿ ಹುಡುಕಲು ಶುರು ಮಾಡಲು ದಾರಿ ಮಾಡಿಕೊಡುತ್ತದೆ.  ಮಗುವಿಗೆ ಎದ್ದೇಳಲು ಹುರಿದುಂಬಿಸಿ,  ಅದರ ಆತ್ಮವಿಶ್ವಾಸ  ಬಲವಾಗಲು ಬಿಡಿ.  ಇದು ಕೇವಲ ಒಂದು ಉದಾಹರಣೆ ಮಾತ್ರ. 

ನಾವು ಆ ಮಗುವಿನ ಪ್ರತಿಯೊಂದು ಆಟ ಪಾಠಗಳಲ್ಲಿ ತನ್ನ  ಆತ್ಮವಿಶ್ವಾಸ ಬೆಳೆಸಿಕೊಂಡು ಹೋಗುವ  ಹಾಗೆ ದಾರಿ ತೋರಿಸಬೇಕು.  ಸೋಲು ಮತ್ತು ಗೆಲುವು ನಾವು ಮಾಡುವ ಪ್ರಯತ್ನಗಳ ಪರಿಣಾಮ ಅಷ್ಟೇ. ಆದರೆ ಸೋಲು ಮತ್ತು ಗೆಲುವೇ ಕೊನೆಯಲ್ಲ ಅನ್ನುವುದನ್ನು ತಿಳಿಸಿಕೊಡಬೇಕು.   ಗೆದ್ದ ನಂತರ ಅಥವಾ ಸೋತ ನಂತರ ಜೀವನ ಮುಗಿಯುವುದಿಲ್ಲ , ಅದು ನಿರಂತರ ಹಾಗು ಬದುಕಿನ ಒಂದು ಭಾಗ  ಅನ್ನುವುದನ್ನು ಮಕ್ಕಳ ಮನಸ್ಸಿನಲ್ಲಿ ಮೂಡಿಸಬೇಕು. ಮಕ್ಕಳು ಮಾಡುವ ಕೆಲಸಗಳನ್ನು ಅವರಿಗೆ ಸ್ವತಂತ್ರವಾಗಿ ಮಾಡಲು ಬಿಡಿ ಹಾಗು ಅವರಿಗೆ ನಿಮ್ಮ ಅವಶ್ಯಕತೆ ಇದೆ ಅಂದಾಗ ಮಾತ್ರ ಸಹಾಯ ಮಾಡಿ. ಸಣ್ಣ ಪುಟ್ಟ ಕೆಲಸಗಳನ್ನು ( ಅವರ ಬಟ್ಟೆ ಅವರೇ ಜೋಡಿಸಿಕೊಳ್ಳುವುದು, ಮನೆ ಕಸ ಹೊಡೆಯುವುದು, ಕೆಲವು ನಿರ್ಧಾರಗಳನ್ನು ಅವರಿಗೆ ತೆಗೆದುಕೊಳ್ಳಲು ಬಿಡುವುದು…. )  ಅವರಿಗೆ ಮಾಡಲು ಬಿಡಿ. ಈ ರೀತಿ ಮಾಡುವುದರಿಂದ ಅವರಿಗೆ ತಾನು ಮಾಡಬಲ್ಲೆ ಅನ್ನುವ ಆತ್ಮವಿಶ್ವಾಸ ಬೆಳೆಯುತ್ತದೆ. ಅವರ ವಯಸ್ಸಿಗೆ ತಕ್ಕಂತೆ ಅವರನ್ನು ನೀವು ನೋಡುವ ರೀತಿ ಬದಲಾಯಿಸಿಕೊಳ್ಳಿ , ಯಾಕೆಂದರೆ ನಮಗೆ ನಮ್ಮ ಮಕ್ಕಳು ಯಾವಾಗಲು ಮಕ್ಕಳಾಗೆ ಕಾಣುತ್ತಾರೆ.   ಚಿಕ್ಕ ವಯಸ್ಸಿನಲ್ಲಿಯೇ ಆತ್ಮವಿಶ್ವಾಸ  ಬೆಳೆಸುತ್ತ ಹೋದರೆ ಮುಂದೆ ಮಕ್ಕಳು ಹೊರ ಪ್ರಪಂಚದಲ್ಲಿ ಸ್ವತಂತ್ರವಾಗಿ ಬದುಕಲು  ಹಾಗು ಸೋಲು ಗೆಲುವನ್ನು  ಸಮವಾಗಿ ನೋಡಲು ಸಹಕಾರಿಯಾಗುತ್ತದೆ. 

ಆತ್ಮ ವಿಶ್ವಾಸದ ಕೊರತೆ  ಖಿನ್ನತೆಗೆ ಮುನ್ನುಡಿ ಬರೆಯುತ್ತದೆ. ಖಿನ್ನತೆಯು ಇತ್ತೀಚಿನ ದಿನಗಳಲ್ಲಿ ನಮಗೆ ಕಾಣಸಿಗುತ್ತಿರುವ ಮಾನಸಿಕ ರೋಗಗಳಲ್ಲಿ ಒಂದು ವಿಧ.  ಮಕ್ಕಳಿರಲಿ, ದೊಡ್ಡವರಿರಲಿ ಒಂದೇ ಒಂದು ಸೋಲಿಗೆ ಖಿನ್ನತೆಗೆ ಹೊರಟು  ಹೋಗುತ್ತಾರೆ.  ಸೋಲು ಬರಿ ಕೆಲಸ ಕಾರ್ಯದಲ್ಲಿ ಅಲ್ಲ, ಸಂಬಂಧಗಳನ್ನೂ ನಿಭಾಯಿಸುವುದರಲ್ಲಿ ಕೂಡ ಇರುತ್ತದೆ.  ನಿರಾಶೆ, ಕಷ್ಟ,  ಅವಮಾನ, ಚಿಕ್ಕಂದಿನಲ್ಲಿ ನಡೆದ ಕೆಟ್ಟ ಘಟನೆಗಳು, ಒಂಟಿತನ , ಆತ್ಮೀಯರ  ಅಗಲಿಕೆ ಮತ್ತು ಸಾವು ಹೀಗೆ ಅನೇಕ ಕಾರಣಗಳು ಖಿನ್ನತೆಗೆ  ದೂಡಿಬಿಡುತ್ತವೆ.   ಹಿಂದೆ ಹೇಳಿದಂತೆ ಯಾವುದೇ ಕೆಲಸ ಆಗಿರಬಹುದು, ಅದರ  ಸೋಲು ಮತ್ತು ಗೆಲುವು ಎರಡು ನಾವು ಮಾಡುವ  ಪ್ರಯತ್ನದ  ಫಲ  ಅಲ್ಲವೇ.    ಎರಡಕ್ಕೂ ಹೊರಗಡೆ ಪ್ರಪಂಚದ ಪ್ರಭಾವ ಇದ್ದೆ ಇರುತ್ತೆ  ಹಾಗು ಅದು ನಮ್ಮ ಪರವಾಗಿಯೂ ಇರಬಹುದು,  ಇಲ್ಲದೆಯೂ ಇರಬಹುದು.  ಆದರೆ  ಸೋಲಿಗೆ ವಿಚಲಿತರಾಗದೆ ಮತ್ತೆ ಪುನಃ ನಾವು  ಆತ್ಮವಿಶ್ವಾಸದಿಂದ   ಗೆಲ್ಲಲು ಮಾಡುವ ಪ್ರಯತ್ನ ತುಂಬ ಮುಖ್ಯ.    ನಮಗೆ ಸೋಲು ಮತ್ತು ಗೆಲುವು ಎರಡನ್ನು  ನಿಭಾಯಿಸಲು ಬೇಕಾಗಿರುವುದು ಆತ್ಮ ವಿಶ್ವಾಸ ಮತ್ತು  ಆತ್ಮ ಸ್ಥೈರ್ಯ.    ನಮಗೆ  ಆತ್ಮ ವಿಶ್ವಾಸ ಮತ್ತು ಆತ್ಮ ಸ್ಥೈರ್ಯ  ಹೇಗೆ  ಗೆಲ್ಲಲು ಬೇಕೋ  ಹಾಗೆ ಸೋತಾಗ ನಮ್ಮನ್ನ ನಾವು ನಿಭಾಯಿಸಿಕೊಳ್ಳಲು  ಕೂಡ ಬೇಕು. 

ಪುಟ್ಟ ಮಕ್ಕಳಿಗೆ ನಾವು  ಕೊಡಿಸುವ ವ್ಯಾಕ್ಸೀನ್,  ಚಿಕ್ಕ ಪುಟ್ಟ ದೇಹದ ತೊಂದರೆಗಳಿಗೆ ಕೊಡಿಸುವ ಅಲೋಪಥಿಕ್  ಔಷಧಗಳು ಕೂಡ ಮಕ್ಕಳಲ್ಲಿ ಮಾನಸಿಕವಾಗಿ ಬದಲಾವಣೆಗಳನ್ನು ತರುತ್ತದೆ. ಆ ಔಷಧಿಗಳ ವ್ಯತಿರಿಕ್ತ ಪರಿಣಾಮಗಳನ್ನು ಅಲೋಪಥಿಕ್   ಪ್ರಪಂಚ ಒಪ್ಪಿಕೊಳ್ಳುವುದಿಲ್ಲ ಬಿಡಿ. ಆದಷ್ಟು ಅಲೋಪಥಿಕ್ ಔಷಧಿಗಳಿಂದ ದೂರ ಇರುವುದು ಸೂಕ್ತ  ಹಾಗು ಮನೆ ಮದ್ದು ಉಪಯೋಗ ಜಾಸ್ತಿ ಮಾಡುವುದು ಉತ್ತಮ. ಮನೆಯಲ್ಲಿ ಯಾರಾದರೂ ಆಗಲಿ,  ಅವರ ದಿನ ನಿತ್ಯದ  ಕೆಲಸಗಳಲ್ಲಿ ಬದಲಾವಣೆ  ಅಂದರೆ ನಿರಾಸಕ್ತಿ, ಸಿಟ್ಟು, ನಿದ್ದೆ ತುಂಬ  ಅಥವಾ ಕಮ್ಮಿ ಮಾಡುವುದು, ನಿರುತ್ಸಾಹ, ದುಃಖದಲ್ಲಿ ಇರುವುದು …. ಕಂಡು ಬಂದರೆ ಕೂಡಲೇ ಅವರ ಸಮಸ್ಯೆಗಳ  ಬಗ್ಗೆ ಗಮನ ಹರಿಸದಿದ್ದರೆ  ಅವರು  ಖಿನ್ನತೆಗೆ ಜಾರುವ ಅವಕಾಶಗಳೇ ಜಾಸ್ತಿ.  ಮನೆಯವರಲ್ಲದೆ ನಮ್ಮ ಬಂದುಗಳು ಅಥವಾ ಸ್ನೇಹಿತರು ಯಾರೇ ಆಗಿದ್ದರು ನಮಗೆ ಸಾಧ್ಯವಾದರೆ ಅವರ ಆತ್ಮ ವಿಶ್ವಾಸ ಹೆಚ್ಚಿಸಲು ಮಾಡುವ  ಪ್ರಯತ್ನ  ಮುಂದಾಗುವ  ಅನಾಹುತಗಳನ್ನು ತಪ್ಪಿಸಲು ಸಹಕಾರಿಯಾಗವುದು. 

ಅವರಲ್ಲಿ ಬದಲಾವಣೆ ಕಂಡ ಮೊದಲ ಹಂತದಲ್ಲೇ ನಾವು  ಸಾಂತ್ವನ, ಧೈರ್ಯ ತುಂಬುವ ಮಾತುಗಳು,   ಪ್ರೀತಿಯ ಮಾತುಗಳು,  ಅವರ ಜೊತೆಯಲ್ಲಿ ಇದ್ದೇವೆ ಅನ್ನುವ  ಅನುಭವ ಬರುವ ಹಾಗೆ ಮಾತನಾಡುವುದು, ಸಮಸ್ಯೆಗಳಿಗೆ  ಪರಿಹಾರ ಸೂಚಿಸುವುದು, ಅವರ ಜೊತೆ ಸಮಯ ಕಳೆಯುವುದು,  ನಕಾರಾತ್ಮಕ ಯೋಚನೆಗಳಿಂದ ದೂರ ಮಾಡುವುದು, ಅವರೊಂದಿಗೆ ಪ್ರಯಾಣ ಮಾಡುವುದು,  ಅವರ ಜೀವನ ಶೈಲಿ  ಬದಲಾವಣೆ ಮಾಡಿಸುವುದು….  ಈ ರೀತಿಯಾಗಿ  ನಾವು ಮಾಡುವ ಕೆಲವು   ಪ್ರಯತ್ನಗಳು  ಅವರ ಆತ್ಮ ವಿಶ್ವಾಸ  ಹೆಚ್ಚಿ ಅವರು  ಖಿನ್ನತೆಯಿಂದ ಹೊರಬರಲು ಸಹಕಾರಿ  ಆಗುತ್ತದೆ. ಇಲ್ಲದಿದ್ದರೆ ಸಮಯ ಕಳೆದಂತೆ ಅದರ ಪರಿಣಾಮ ಕೈ ಮೀರಿ ಹೋಗಿರುತ್ತದೆ. 

ಇವಲ್ಲೆವೂ ನಮ್ಮ ಕೈಯಲ್ಲಿ ಆಗುವ ಕೆಲಸಗಳೇ ಅಲ್ಲವೇ ? ಮಾಡುವುದು ನಮ್ಮವರಿಗೆ ಅಲ್ಲವೇ ?  ಮಕ್ಕಳ  ಕಡೆ ಗಮನ ಹರಿಸಿ ಅವರ ಆತ್ಮ ವಿಶ್ವಾಸ ಮತ್ತು ಆತ್ಮ ಸ್ಥೈರ್ಯ ಹೆಚ್ಚಿಸಿ. 

ಶ್ರೀ 

ಥಿಂಕ್ ರೈಟ್ 

7 thoughts on “ಮಕ್ಕಳಲ್ಲಿ ಆತ್ಮವಿಶ್ವಾಸ ಮತ್ತು ಖಿನ್ನತೆ

  1. ನಾನೂ ಸಹ ಎಲ್ಲರಿಗೂ ಇದನ್ನೇ ಹೇಳುತ್ತಿರುತ್ತೇನೆ
    ಇಂತಹ ಬರಹ ಅತೀ ಅವಶ್ಯವಾಗಿದೆ. ಎಲ್ಲರಿಗೂ ತಿಳಿಯುವ ಹಾಗೆ ಅತೀ ಸರಳವಾಗಿ ವಿವರಿಸಿದ್ದೀರಿ

    Like

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s