ಆತ್ಮೀಯರೇ ನಿಮಗೊಂದು ಪತ್ರ !!

ಆತ್ಮೀಯ ಸ್ನೇಹಿತರೆ,

ಹೇಗಿದ್ದೀರಾ ? ನೀವು ಮತ್ತು ನಿಮ್ಮ ಮನೆಯವರು ಎಲ್ಲರು ಕುಶಲ ಅಂದು ಭಾವಿಸುತ್ತೇನೆ. ಈ ಪತ್ರ ಕಂಡ ಕೂಡಲೇ ಉತ್ತರಿಸಿ ಹಾಗು ನಿಮ್ಮ ಉತ್ತರಕ್ಕಾಗಿ ಕಾಯುತ್ತಿರುತ್ತೇನೆ.

ನಿಮಗೆ ನೆನಪಿದೆಯೇ?  ಮಟ  ಮಟ  ಮಧ್ಯಾಹ್ನ  ಮನೆಯ ಹೊರಗಡೆ   ಟ್ರಿಂಗ್  ಟ್ರಿಂಗ್  ಅಂತ ಸೈಕಲ್   ಬೆಲ್ಲಿನ  ಜೊತೆಗೆ   ” ಪೋಸ್ಟ್”  ಅನ್ನುವ  ಧ್ವನಿಗೆ,  ಉರಿಬಿಸಿನಲ್ಲಿ ಆಡುತ್ತಿದ್ದ ನಾವು ಒಂದೇ ಉಸಿರಿಗೆ ಓಡಿ  ಹೋಗಿ  ಪತ್ರ ವನ್ನು ಪೋಸ್ಟ್ ಮ್ಯಾನ್ ಕೈಯಿಂದ ಇಸಿದುಕೊಂಡು  ಜೋರಾಗಿ ಅಮ್ಮನಿಗೆ   ” ಅಮ್ಮ ಪೋಸ್ಟ್ ಬಂದಿದೆ”  ಎಂದು ಅಲ್ಲಿಂದಲೇ   ಕೂಗುತ್ತ ಅಮ್ಮನಿಗೆ ತಂದುಕೊಡುತ್ತಿದ್ದೆವು.  ನಮ್ಮ ಕುತೂಹಲ ಅಮ್ಮ ಪತ್ರ ಒಡೆದು ಓದುವ ತನಕ ತಣಿಯುತ್ತಿರಲಿಲ್ಲ.  ಅಮ್ಮ ಪತ್ರ  ಓದಿ ಯಾರಿಂದ, ಏನು ವಿಷ್ಯ ಅಂತ ತಿಳಿದ ಮೇಲೆಯೇ  ಹೊರಗಡೆ ಹೋಗಿ ನಮ್ಮ ಆಟ  ಮುಂದುವರಿಸುತ್ತಿದ್ದೆವು.

ಆಗ ಪತ್ರವನ್ನು ಬರೆಯುತ್ತಿದ್ದ ಶೈಲಿಯೆ ಬಹಳ ಚೆನ್ನಾಗಿತ್ತು.  ಪತ್ರದ  ಮೇಲುಗಡೆ ಮದ್ಯದಲ್ಲಿ  “ಶ್ರೀ” ಅಥವಾ ” ಓಂ”   ಎಂದು  ಶುರುವಾಗಿ,  ” ಚಿ II ಸೌ II  ಮಗಳಿಗೆ    ನಿನ್ನ ತಂದೆ ಮತ್ತು ತಾಯಿ ಮಾಡುವ ಆಶೀರ್ವಾದಗಳು ” ,   ” ಚಿ II  ಮಗನಿಗೆ  ನಿನ್ನ ತಂದೆ ಮತ್ತು ತಾಯಿ ಮಾಡುವ ಆಶೀರ್ವಾದಗಳು”    ” ಪೂಜ್ಯ ತಂದೆ ಮತ್ತು ತಾಯಿಯವರಿಗೆ ನನ್ನ  ನಮಸ್ಕಾರಗಳು ”   ” ಪ್ರೀತಿಯ ಅಣ್ಣನಿಗೆ,  ಪ್ರೀತಿಯ ಅಕ್ಕನಿಗೆ,  ಆತ್ಮೀಯ ಸ್ನೇಹಿತನಿಗೆ, ”    ರೀತಿಯಾಗಿ ಸಂಭೋಧಿಸುವ ಮೂಲಕ  ಯಾರಿಗೆ ಬರೆಯುತ್ತಿದ್ದೇವೋ  ಅವರಿಗೆ ಗೌರವ  ಅಥವಾ ಪ್ರೀತಿ ಸೂಚಿಸಿ ನಂತರ  ” ನಾವಿಲ್ಲಿ ಕ್ಷೇಮವಾಗಿದ್ದೇವೆ , ನಿಮ್ಮ ಕ್ಷೇಮ ಸಮಾಚಾರಕ್ಕೆ ಆಗಾಗ  ಪತ್ರ ಬರೆಯುತ್ತ ಇರಿ ”   ” ನೀವು  ಬರೆದ  ಪತ್ರ ಬಂದು ತಲುಪಿತು.  ನಾವಿಲ್ಲಿ ಆರೋಗ್ಯವಾಗಿದ್ದೇವೆ.  ನೀವು ಆರೋಗ್ಯವಾಗಿದ್ದಿರೆಂದು ತಿಳಿದು ತುಂಬ ಸಂತೋಷವಾಯಿತು ”  ಈ ರೀತಿಯ ಮಾತುಗಳಿಂದ ಪತ್ರ ಶುರುವಾಗುತ್ತಿತ್ತು. 

ಮೇಲಿನ ವಾಕ್ಯಗಳನ್ನು  ನೀವೆಲ್ಲ ಕೇಳಿ ಅಥವಾ ಬರೆದು  ಎಷ್ಟು ವರ್ಷಗಳಾಯಿತು? ನಿಮಗೆಲ್ಲ ನೆನಪಿದೆಯೇ , ತುಂಬ ವರ್ಷಗಳೇನಲ್ಲ   ೧೯೯೦ ರ ದಶಕದ  ತನಕ ,  ನಾವೆಲ್ಲರೂ ನಮ್ಮ ತಂದೆ, ತಾಯಿ,  ಅಕ್ಕ, ತಂಗಿ,  ಅಣ್ಣ , ತಮ್ಮ, ಬಂದುಗಳು , ಸ್ನೇಹಿತರು  ಹೀಗೆ ಎಲ್ಲರಿಗು ನಾವು ಪತ್ರದ ಮೂಲಕ ಅವರ ಆರೋಗ್ಯ,  ಓದು,  ಕೆಲಸದ ಬಗ್ಗೆ,  ಮದುವೆ  ವಿಚಾರ,  ಹೇಗೆ ನಾನಾ  ವಿಷಯಗಳ ಬಗ್ಗೆ  ವಿಚಾರಿಸುತ್ತಿದ್ದೆವು.  

ಚಿಕ್ಕವರಿದ್ದಾಗ ನಾವು  ನಮ್ಮ ಸ್ನೇಹಿತರಿಗೋ  ಅಥವಾ ನೆಂಟರಿಗೋ ಒಂದು ಪತ್ರ ಬರೆದು ಅದಕ್ಕೆ ಉತ್ತರ ಬರುವುದನ್ನೇ ಕಾಯುತ್ತಿದೆವು.  ಹೊರಗಡೆ ಮನೆ ಮುಂದೆ ಪೋಸ್ಟ್ ಮ್ಯಾನ್ ಬಂದು ಸೈಕಲ್ ಬೆಲ್ ಮಾಡಿದರೆ ಸಾಕು  ನಮಗೆ ಆಗುತ್ತಿದ್ದ ಸಂತೋಷಕ್ಕೆ ಪಾರವೇ ಇರಲಿಲ್ಲ  ಅಲ್ಲವೇ?   ಅದನ್ನು ತೆಗೆದುಕೊಳ್ಳಲು ನಮ್ಮ ಅಕ್ಕ ತಂಗಿ, ಅಣ್ಣ ತಮ್ಮಂದಿರೊಂದಿಗೆ ಪೈಪೋಟಿ ಬೇರೆ. ಅಮ್ಮ ಪತ್ರ ಓದುತ್ತಿದ್ದರೆ ಅವಳ ಸುತ್ತ ಕೂತು ಕೇಳಿಸಿಕೊಳ್ಳುತ್ತಿದ್ದದ್ದು   ನೆನಪಿದೆಯೇ ?  ನೀವು  ಹೈಸ್ಕೂಲ್ನಲ್ಲಿ ಇದ್ದಾಗ  ಪಕ್ಕದ ಮನೆಯಾ ಅಜ್ಜಿ ಅಥವಾ ಅಜ್ಜನಿಗೆ   ಅವರು ಹೇಳಿದ ಹಾಗೆ   ನೀವು ಪತ್ರ ಬರೆದು ಕೊಟ್ಟಿದ್ದು   ಏನಾದ್ರು  ನೆನಪಾಯ್ತಾ ?

ನೀವು   ಯಾವುದೊ   ಸಿಟಿಗೆ  ಬಂದು ನಿಮಗೆ ಕೆಲಸ ಸಿಕ್ಕ ಕೂಡಲೇ ನಿಮ್ಮ ಅಪ್ಪ ಅಮ್ಮನಿಗೆ, ಸ್ನೇಹಿತರಿಗೆ,  ಕೆಲಸ ಸಿಕ್ಕ ಸಂತೋಷವನ್ನು ಪತ್ರದ  ಮುಖೆನ  ಹಂಚಿಕೊಂಡಿದ್ದು ,  ಅಮ್ಮ ನಿಮಗೆ ಮದುವೆಗೆ  ಹುಡುಗಿಯನ್ನು  ಗೊತ್ತು ಮಾಡಿ      ” ಒಂದು ಹುಡುಗಿ ನೋಡಿದ್ದೀನಿ ಕಣೋ , ಯಾವಾಗ ನೋಡಲಿಕ್ಕೆ ಬರ್ತೀಯ  ” ಅಂತ  ಪತ್ರ ಬರೆದಿದ್ದು ನೆನಪಿದೆಯಾ ?

ಇನ್ನು ನೀವು ಏನಾದರೂ ಪ್ರೇಮ  ಪತ್ರ  ಬರೆದಿದ್ದರೆ ಅದನ್ನು ನೀವೇ ನೆನಪು ಮಾಡಿಕೊಳ್ಳಿ ಏನು ಬರೆದ್ದಿದ್ದು  ಅಂತ!!  

ಇದನ್ನೆಲ್ಲ ನೆನಪಾಗಲಿಕ್ಕೆ  ಕಾರಣ,  ಇತ್ತಿಚೆಗೆ  ಓದಿದ ಒಂದು ಕಥೆಯಲ್ಲಿ  ಈ ಪತ್ರದ ಕುರಿತು ತಾಯಿ ಮಗನಿಗೆ ಹೇಳುವ ಮಾತು ತುಂಬ ಕಾಡಿಸಿತು , ಹೌದಲ್ವಾ  ಎಂದು ಅನಿಸಿತು .  ಮಗ ತಾಯಿಗೆ ಕೇಳುತ್ತಾನೆ ಅಮ್ಮ ನನ್ನ ಹತ್ರ ಮೊಬೈಲ್ ನಲ್ಲಿ ದಿನವೂ ಮಾತನಾಡುತ್ತಿ , ಆದರೂ ಈ ಕಾಲದಲ್ಲೂ ಪತ್ರ ಬರೆಯುತ್ತೀಯಲ್ಲ ಏಕೆ ? ಎಂದು ಕೇಳುತ್ತಾನೆ.  ತಾಯಿ ಹೇಳುತ್ತಾಳೆ,  ನನ್ನ ಮಾತುಗಳು ಮತ್ತು ಅದರ ಹಿಂದಿನ ಭಾವನೆಗಳು  ನಿನ್ನ ಫೋನಿನಲ್ಲಿ ಉಳಿಯುವುದಿಲ್ಲ, ನಾನು ಈ ಲೋಕದಿಂದ ಹೋದಮೇಲೆ  ನನ್ನ ಮಾತುಗಳು  ಸದಾ ಅಕ್ಷರಗಳ  ರೂಪದಲ್ಲಿ ಪತ್ರದೊಂದಿಗೆ   ನಿನ್ನೊಟ್ಟಿಗೆ ಇರುತ್ತದೆ .  ಯಾವತ್ತೋ ಒಂದು ದಿನ ನೀನು ಅಥವಾ ನಿನ್ನ ಮಕ್ಕಳು ಅದನ್ನು  ಓದುವ ಅವಕಾಶ  ಸಿಗಬಹುದು. ಆಗ ನನ್ನ ನೆನಪುಗಳನ್ನು ಅವರೊಂದಿಗೆ ಹಂಚಿಕೊಳ್ಳಬಹುದು.  ನೆನಪುಗಳು ಜೀವನಕ್ಕೆ ಸ್ಪೂರ್ತಿ ತುಂಬುವ ಒಂದು ಸಾಧನ. ಪತ್ರದ ಮೂಲಕ ನಾನು ಸದಾ ನಿನ್ನೊಟ್ಟಿಗೆ ಇರುತ್ತೆನೆಂದು  ಎಂದು ಹೇಳುತ್ತಾಳೆ.  ಆ  ಮಾತುಗಳು ನನಗೆ ತುಂಬ ನಾಟಿತು, ಎಷ್ಟು ಸತ್ಯ ಇದೆ ಅಲ್ವ ಅನಿಸಿತು. 

ನಾನು ನನಗೆ ಬಂದ ಹಳೆಯ ಪತ್ರಗಳನ್ನ ಹುಡುಕಿ ತೆಗೆದು ಓದಲು ಶುರು ಮಾಡಿದಾಗ ,  ತಾಯಿಯ ಮಮತೆ,  ತಂಗಿಯ ವಾತ್ಸ್ಯಲ್ಯ , ಸ್ನೇಹಿತರ ಕಾಲೆಳೆಯುವ ಮಾತುಗಳು, ಅಕ್ಷರ ರೂಪದಲ್ಲಿ ನೋಡಿ ಆ  ತಾಯಿ ಹೇಳಿದ  ಮಾತುಗಳು  ಅಕ್ಷರಷ  ನಿಜ ಅಲ್ವ ಅನಿಸಿತು.  ಪತ್ರದಲ್ಲಿ ನಾವು ಬರೆದ ಮಾತುಗಳು ಅಳೆದು ತೂಗಿ ಬರೆದ ಹಾಗಿರಲಿಲ್ಲ,  ಮುಚ್ಚು ಮರೆ  ಇಲ್ಲದೆ ನೇರವಾಗಿ ಮನಸ್ಸಿಗೆ ಅನಿಸಿದ್ದನ್ನು   ಬರೆದ ಹಾಗಿತ್ತು.  ಅಲ್ಲಿನ ಅಕ್ಷರಗಳಲ್ಲಿ ಯಾವುದೇ  ಅಂತಸ್ತು, ಬಿಗುಮಾನ, ಏನೋ ಸಾಧಿಸಿಬಿಟ್ಟಿದ್ದೇವೆ ಅನ್ನುವ ಅಹಂಕಾರ  ಕಾಣಿಸಲಿಲ್ಲ ಬದಲಿಗೆ ಮುಗ್ದತೆ, ಪ್ರೀತಿ  ಇತ್ತು ಅನಿಸಿತು. 

ತಂತ್ರಜ್ಞಾನ ಬೆಳೆದ   ಹಾಗೆ  ಪತ್ರದ ಜಾಗವನ್ನು  ಫೋನ್, ಇಮೇಲ್  ಆಕ್ರಮಿಸಿತು.  ಮೊಬೈಲ್  ಬಂದ  ಮೇಲೆ  ಬೇರೆ ಬೇರೆ ಯಾಪ್ಗಳು ಆ ಜಾಗವನ್ನು ತುಂಬಿದೆ.  ಬರೆಯುವಾಗ ನಮ್ಮ ಮನಸ್ಸಿನ ಭಾವನೆಗಳನ್ನು ನಾವು ವಾಕ್ಯಗಳಿಂದ ಪದಗಳಿಗೆ ,  ಇತ್ತೀಚಿಗೆ  ಪದಗಳಿಂದ   ಎಮೋಜಿಗಳಿಗೆ ಬದಲಾಗಿದೆ.  ಮುಂದೆ ಎಲ್ಲಿಗೆ ಹೋಗಿ ನಿಲ್ಲತ್ತೋ ಗೊತ್ತಿಲ್ಲ. 

ಪತ್ರ ಬರೆಯುವಾಗ ನಾವು ಯಾರಿಗೆ ಬರೆಯುತ್ತೀವೋ ಅವರ ಬಗ್ಗೆ,  ಅವರೊಂದಿಗೆ ಕಳೆದ ಸಮಯದ  ಬಗ್ಗೆ ಕಿಂಚಿತ್ತದಾದರೂ ನಾವು ಯೋಚನೆ ಮಾಡುತ್ತೇವೆ.  ಹಳೆಯ ನೆನಪುಗಳು ತಾಜಾಗೊಳ್ಳುತ್ತವೆ ಮತ್ತು ಮನಸ್ಸಿಗೆ  ಮುದ  ಕೊಡುತ್ತದೆ.   

ಹಳೆಯ ಪತ್ರಗಳು ಏನಾದ್ರೂ ಎದ್ದರೆ ಈವತ್ತೇ ತೆಗೆದು ಓದಿ.  ಸ್ವಲ್ಪ ಬಿಡುವು ಮಾಡಿಕೊಂಡು ನಿಮ್ಮ ಸ್ನೇಹಿತರಿಗೆ ಪತ್ರ ಬರೆಯಿರಿ.  ನಿಮ್ಮ ಅಪ್ಪ ಅಮ್ಮನಿಗೆ ನಿಮ್ಮ ಮಕ್ಕಳಿಂದ ಪತ್ರ ಬರೆಸಿರಿ.  ಅದನ್ನ ನೋಡಿ ಆ   ವಯಸ್ಸಾದ ಜೀವಗಳು ಪಡುವ ಸಂತೋಷವನ್ನು ನೋಡಿ ಆನಂದಿಸಿ. 

ಎಲ್ಲರು ಸಂತೋಷವಾಗಿರಿ ಹಾಗು  ನಿಮ್ಮ ಆರೋಗ್ಯದ ಕಡೆ ಗಮನ ಇರಲಿ ಎಂದು ಹಾರೈಸುತ್ತ ಈ ಪತ್ರವನ್ನು ಮುಗಿಸುತ್ತಿದ್ದೇನೆ. 

ಈ ಪತ್ರದ ಉತ್ತರಕ್ಕಾಗಿ ಕಾಯುತ್ತಿರುವ,

ನಿಮ್ಮ ಆತ್ಮೀಯ

ಶ್ರೀ

ಥಿಂಕ್ ರೈಟ್ 

6 thoughts on “ಆತ್ಮೀಯರೇ ನಿಮಗೊಂದು ಪತ್ರ !!

  1. ನಾನೂ ತುಂಬಾ ಪತ್ರ ಬರೆದಿದ್ದೇನೆ…..
    ನಮ್ಮ ತಾಯಿಗೆ…… ಅವರು ಈಗಲೂ ಜತನದಿಂದ
    ಇಟ್ಟುಕೊಂಡಿದ್ದಾರೆ… ಖುಷಿಯಾಯ್ತು ನಿಮ್ಮ ಬರಹ ಓದಿ.

    Like

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s